ಸರಿಯಾದ ಕ್ರಮ ಕೈಗೊಳ್ಳದಿದ್ದರೆ, ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆ ಹೊಣೆ -ನರಸಿಂಹ ಮಾಣಿ






ಬಂಟ್ವಾಳ ತಾಲೂಕು ಉಪ್ಪಿನಂಗಡಿ ಪೋಲಿಸ್ ಠಾಣಾ ವ್ಯಾಪ್ತಿಯ ಕಡಂಬು ರಾಷ್ಟೀಯ ಹೆದ್ದಾರಿಯ ಪಕ್ಕ ಇರುವ ದೇಜಪ್ಪ ಮೂಲ್ಯರ ಹಟ್ಟಿಯಿಂದ ದಿನಾಂಕ 03-09-2025ರ ತಡರಾತ್ರಿ ಸುಮಾರು 2 ಗಂಟೆಯ ಸಮಯ ಹಟ್ಟಿಯ ಗೇಟನ್ನು ಮುರಿದು ಗೋವನ್ನು ಕದ್ದು ಮನೆ ಬಳಿಯ ಹೆದ್ದಾರಿಯ ಪಕ್ಕದಲ್ಲಿರುವ ದೇಜಪ್ಪ ಮೂಲ್ಯರ ಜಾಗದಲ್ಲಿ ಅಮಾನುಷವಾಗಿ ಕಡಿದು, ಮಾಂಸ ಮಾಡಿ ತ್ಯಾಜ್ಯವನ್ನು ಅಲ್ಲೇ ಬಿಸಾಡಿ ಹೋಗಿರುತ್ತಾರೆ. ಈ ಘಟನೆಯನ್ನು ಹಿಂದೂ ಜಾಗರಣಾ ವೇದಿಕೆ ಉಗ್ರವಾಗಿ ಖಂಡಿಸುತ್ತದೆ.
ಕಳೆದ ಕೆಲವು ದಿನಗಳ ಹಿಂದೆ ದೇಜಪ್ಪ ಮೂಲ್ಯರ ಮನೆಗೆ ಒಬ್ಬ ಮುಸಲ್ಮಾನ ದನದ ವ್ಯಾಪಾರಿ ಹೋಗಿ ದನವನ್ನು ಮಾರಾಟ ಮಾಡುತ್ತೀರಾ ಎಂದು ವಿಚಾರಿಸಿರುತ್ತಾನೆ. ಅದಕ್ಕೆ ಅವರು ಇಲ್ಲ ಎಂಬುವುದಾಗಿ ಉತ್ತರಿಸಿರುತ್ತಾರೆ. ಆ ಸಂದರ್ಭ ಆತನು ದೇಜಪ್ಪ ಮೂಲ್ಯರ ಮನೆಯ ವಾತಾವರಣವನ್ನು ಗಮನಿಸಿ ಈ ಗೋ ಕಳ್ಳತನ ಮಾಡಲು ಹೊಂಚು ಹಾಕಿರುವುದಾಗಿ ಅನುಮಾನವಿದೆ.
ಅಲ್ಲದೆ ಕಳೆದ ಒಂದು ತಿಂಗಳಿನಿಂದ ಬಂಟ್ವಾಳ ತಾಲೂಕಿನ ವ್ಯಾಪ್ತಿಯಲ್ಲಿ ಇದು 2ನೇ ಪ್ರಕರಣ. ಇಲ್ಲಿಯೂ ಆರೋಪಿಗಳ ಬಂಧನ ಆಗಿರುವುದಿಲ್ಲ. ಈ ನಾಡಿನಲ್ಲಿ ಪ್ರಭಲವಾದ ಗೋ ಹತ್ಯಾ ಕಾನೂನು ಜಾರಿಯಲ್ಲಿದೆ. ಆದರೂ ಯಾವ ಭಯ-ಆತಂಕವಿಲ್ಲದೆ ಅಕ್ರಮ ಗೋ ಸಾಗಾಟ, ಮಾರಾಟ, ಮಾಂಸ ದಂಧೆ ರಾಜಾರೋಷವಾಗಿ ನಡೆಯುತ್ತಿದೆ. ಅದರಲ್ಲೂ ಹಟ್ಟಿಯಲ್ಲಿದ್ದ ಗೋವನ್ನು ಕದ್ದು ಅವರದ್ದೇ ತೋಟದಲ್ಲಿ ಕೊಂದು ಮಾಂಸ ಮಾಡಿ ಕೊಂಡು ಹೋಗುತ್ತಾರೆ ಅಂದರೆ ವ್ಯವಸ್ಥೆ ಎಷ್ಟು ಕುಲಗೆಟ್ಟು ಹೋಗಿರಬಹುದು?
ಪೋಲಿಸ್ ಇಲಾಖೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ದಕ್ಷ ಅಧಿಕಾರಿಗಳ ಹೆಸರಿನಲ್ಲಿ ಕೇವಲ ಹಿಂದೂಗಳಿಗೆ ಮಾತ್ರ ಹೆದರಿಸುವ, ರಾತ್ರಿ ಮನೆಗಳಿಗೆ ಹೋಗಿ ಬಾಗಿಲು ತಟ್ಟುವುದು, ಹಿಂದೂ ಕಾರ್ಯಕರ್ತರನ್ನು ಮಾನಸಿಕವಾಗಿ ಕುಗ್ಗಿಸುವ ಕೆಲಸವನ್ನು ಮಾಡುತ್ತಿದೆ. ಸಂಘದ ಒಬ್ಬ ಕಾರ್ಯಕರ್ತ ಅಕ್ರಮ ದನ ಸಾಗಾಟದ ವಾಹನವನ್ನು ತಡೆದು ನಿಲ್ಲಿಸಿದರೆ ಅವರ ಮೇಲೆ ಸುಮೋಟೋ ಕೇಸನ್ನು ಹಾಕುತ್ತಾರೆ.ಆದರೆ ಸಮಾಜದಲ್ಲಿ ಅಶಾಂತಿ ಮೂಡಿಸುವ, ಗೋ ಕಳ್ಳತನ ಮಾಡುವ, ಅಕ್ರಮ ಡ್ರಗ್ ಮಾಫಿಯಾದಲ್ಲಿ ಭಾಗಿಯಾಗಿರುವವರ ಮೇಲೆ ಯಾವುದೇ ಕ್ರಮ ಕೈಗೊಳ್ಳುವುದಿಲ್ಲ ಇದು ವಿಪರ್ಯಾಸ.
ಕೆದಿಲ, ಸತ್ತಿಕಲ್ಲು ಮತ್ತು ಸರೋಳಿ ಭಾಗದಿಂದ ಹಲವು ವರ್ಷಗಳಿಂದ ಗೋ ಕಳ್ಳತನ ಸಾಗಾಟ ನಡೆಯುತ್ತಿದೆ. ಇಲಾಖೆಗೂ ಗೊತ್ತಿದೆ ಆದರೆ ಯಾವುದೇ ಕ್ರಮ ಕೈಗೊಂಡಿರುವುದಿಲ್ಲ. ಆದ್ದರಿಂದ ಈ ದಂಧೆ ಕೋರರಿಗೆ ಕಠಿಣ ಕ್ರಮ ಕೈಗೊಳ್ಳಬೇಕು & ಜಿಲ್ಲೆಯಿಂದ ಗಡಿಪಾರು ಮಾಡಬೇಕು. ಗೋವನ್ನು ಕಳೆದುಕೊಂಡವರಿಗೆ ಗರಿಷ್ಠ ಪ್ರಮಾಣದ ಪರಿಹಾರವನ್ನು ಒದಗಿಸಿಕೊಡಬೇಕಾಗಿ ಹಿಂದೂ ಜಾಗರಣಾ ವೇದಿಕೆಯ ಆಗ್ರಹವಾಗಿರುತ್ತದೆ. ಇದಕ್ಕೆ ಸರಿಯಾದ ಕ್ರಮ ಕೈಗೊಳ್ಳದಿದ್ದರೆ, ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆ ಹೊಣೆಯಾಗಿರುತ್ತದೆ ಎಂದು ಹಿಂದೂ ಜಾಗರಣಾ ವೇದಿಕೆ ವಿಟ್ಲ ತಾಲೂಕು ಮುಖಂಡರು ಪತ್ರಿಕಾ ಗೋಷ್ಠಿಯಲ್ಲಿ ತಿಳಿಸಿದ್ದಾರೆ.








