


ಕೊಲಂಬೊ : ಶ್ರೀಲಂಕಾದ ದಕ್ಷಿಣ ಕರಾವಳಿಯಲ್ಲಿ ಇರಾನ್‌ನ ನೌಕೆ ಮೇಲೆ ಅಮೆರಿಕ ದಾಳಿ ಮಾಡಿದ್ದು, ಅದರ ಪರಿಣಾಮ ಅದರಲ್ಲಿದ್ದ ಹಲವು ಮಂದಿ ಮೃತಪಟ್ಟಿದ್ದಾರೆ. ಇದುವರೆಗೆ 87 ಶವಗಳನ್ನು ಶ್ರೀಲಂಕಾ ನೌಕಾಪಡೆ ಪತ್ತೆ ಮಾಡಿದೆ ಎಂದು ತಿಳಿದುಬಂದಿದೆ.
ಶ್ರೀಲಂಕಾದ ಗಾಲೆ ಕರಾವಳಿಯ ಬಳಿ ತೆರಳುತ್ತಿದ್ದ ಇರಾನ್ ‘ಐರೀಸ್ ಡೆನಾ’ ಎಂಬ ಮಿಲಿಟರಿ ನೌಕೆಯ ಮೇಲೆ ಅಮೆರಿಕದ ಸಬ್‌ಮರೀನ್ ಟಾರ್ಪಿಡೊ ಮೂಲಕ ದಾಳಿ ನಡೆಸಿದ್ದು, ಅದನ್ನು ಮುಳುಗಿಸಿದೆ. ಇದರಿಂದ 80 ಕ್ಕೂ ಅಧಿಕ ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಕೆಲವು ಮೃತದೇಹಗಳು ಸಿಕ್ಕಿವೆ ಆದರೂ ಹಲವರ ಸುಳಿವು ಸಿಕ್ಕಿಲ್ಲ. ನೌಕೆಯಲ್ಲಿದ್ದ 32 ಜನರನ್ನು ರಕ್ಷಿಸಲಾಗಿದೆ. ಗಂಭೀರ ಸ್ಥಿತಿಯಲ್ಲಿರುವವರಿಗೆ ತುರ್ತು ಚಿಕಿತ್ಸೆ ನೀಡಲಾಗುತ್ತಿದೆ. ಕೆಲವರು ಸಣ್ಣ ಪುಟ್ಟ ಗಾಯಗಳಿಂದ ಪಾರಾಗಿದ್ದಾರೆ..
180 ಜನರಿದ್ದ ನೌಕೆಯು ಮುಳುಗುತ್ತಿರುವ ಬಗ್ಗೆ ಮಾಹಿತಿ ಸಿಕ್ಕ ತಕ್ಷಣ ನೌಕೆಗಳು ಮತ್ತು ಯುದ್ಧ ವಿಮಾನಗಳ ಮೂಲಕ ರಕ್ಷಣಾ ಕಾರ್ಯಾಚರಣೆ ನಡೆಸಲಾಯಿತು. ಅಪಘಾತಕ್ಕೀಡಾದ ನೌಕೆಯು ಭಾರತದ ವಿಶಾಖ ಪಟ್ಟಣದಲ್ಲಿ ನಡೆದ ಸೇನಾ ಸಮರಾಭ್ಯಾಸದಿಂದ ವಾಪಾಸಾಗುತ್ತಿತ್ತು ಎಂದು ವರದಿ ಮೂಲಕ ತಿಳಿದುಬಂದಿದೆ.








