

ಡೆಹ್ರಾಡೂನ್: ಉತ್ತರಾಖಂಡದ ರಾಜ್ಪುರ ಪ್ರದೇಶದಲ್ಲಿ ನಡೆದ ಭೀಕರ ಗುಂಪು ಹಲ್ಲೆಯಲ್ಲಿ ಪತ್ರಕರ್ತನೊಬ್ಬ ಪ್ರಾಣ ಕಳೆದುಕೊಂಡ ಘಟನೆ ವರದಿಯಾಗಿದೆ. ಮೃತ ಪತ್ರಕರ್ತನನ್ನು ಪಂಕಜ್ ಮಿಶ್ರಾ ಎಂದು ಗುರುತಿಸಲಾಗಿದೆ.
ಸೋಮವಾರ ರಾತ್ರಿ ಮಿಶ್ರಾ ಅವರ ನಿವಾಸಕ್ಕೆ ನುಗ್ಗಿದ ಗುಂಪೊಂದು ಅವರನ್ನು ನಿಂದಿಸಿ ಹಲ್ಲೆ ನಡೆಸಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಡೆಹ್ರಾಡೂನ್ನ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ಅಜಯ್ ಸಿಂಗ್ ಈ ಕುರಿತು ಮಾಹಿತಿ ನೀಡಿದ್ದು, ಈ ಪ್ರಕರಣದ ಪ್ರಮುಖ ಆರೋಪಿ ಅಮಿತ್ ಸೆಹಗಲ್, ಡಿಜಿಟಲ್ ಮೀಡಿಯಾ ಪತ್ರಕರ್ತನಾಗಿದ್ದು, ಇನ್ನಿತರ ಕೆಲವರು ಸಹ ಹಲ್ಲೆಯಲ್ಲಿ ಭಾಗಿಯಾಗಿದ್ದಾರೆ ಎಂದು ತಿಳಿಸಿದ್ದಾರೆ.

ಪ್ರಾಥಮಿಕ ಮರಣೋತ್ತರ ಪರೀಕ್ಷೆ ವರದಿಯಲ್ಲಿ ಸಾವಿನ ಸ್ಪಷ್ಟ ಕಾರಣ ಪತ್ತೆಯಾಗದ ಹಿನ್ನೆಲೆಯಲ್ಲಿ, ಮಿಶ್ರಾ ಅವರ ಕುಟುಂಬ ಎರಡನೇ ಬಾರಿ ಮರಣೋತ್ತರ ಪರೀಕ್ಷೆ ನಡೆಸುವಂತೆ ಮನವಿ ಮಾಡಿದೆ. ಎಲ್ಲಾ ವರದಿಗಳು ಮತ್ತು ಸಾಕ್ಷ್ಯಾಧಾರಗಳನ್ನು ಪರಿಶೀಲಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ಮೃತರ ಸಹೋದರ ಅರವಿಂದ್ ಮಿಶ್ರಾ ನೀಡಿದ ದೂರಿನ ಆಧಾರದ ಮೇಲೆ ರಾಜ್ಪುರ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಿಸಲಾಗಿದೆ. ದೂರಿನ ಪ್ರಕಾರ, ಸೋಮವಾರ ರಾತ್ರಿ ಸುಮಾರು 10 ಗಂಟೆಯ ವೇಳೆಗೆ ಅಮಿತ್ ಸೆಹಗಲ್ ಹಾಗೂ ಇತರರು ಹತ್ಯೆ ಉದ್ದೇಶದಿಂದ ಮಿಶ್ರಾ ಅವರ ಮನೆಗೆ ನುಗ್ಗಿ ಎದೆ ಹಾಗೂ ಹೊಟ್ಟೆ ಭಾಗಕ್ಕೆ ಗಂಭೀರವಾಗಿ ಥಳಿಸಿದ್ದಾರೆ. ಹಲ್ಲೆಯ ಪರಿಣಾಮ ಮಿಶ್ರಾ ಅವರ ಬಾಯಿಯಿಂದ ರಕ್ತಸ್ರಾವವಾಗಿದ್ದು, ಅವರ ಹಾಗೂ ಪತ್ನಿಯ ಮೊಬೈಲ್ ಫೋನ್ಗಳನ್ನು ಆರೋಪಿಗಳು ಕಿತ್ತುಕೊಂಡಿದ್ದಾರೆ ಎನ್ನಲಾಗಿದೆ.


ಮಂಗಳವಾರ ಬೆಳಗಿನ ಜಾವ 3 ಗಂಟೆಯ ಸುಮಾರಿಗೆ ಮಿಶ್ರಾ ಅವರ ಆರೋಗ್ಯ ಸ್ಥಿತಿ ತೀವ್ರವಾಗಿ ಹದಗೆಟ್ಟಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಚಿಕಿತ್ಸೆ ಫಲಿಸದೇ ಅವರು ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದ್ದಾರೆ.
ಈ ಘಟನೆ ರಾಜ್ಯಾದ್ಯಂತ ಆಕ್ರೋಶಕ್ಕೆ ಕಾರಣವಾಗಿದ್ದು, ಪ್ರಕರಣದ ತನಿಖೆಯನ್ನು ತೀವ್ರಗೊಳಿಸಲಾಗಿದೆ.








