Monday, May 6, 2024
spot_imgspot_img
spot_imgspot_img

ವರದಾಯಿನಿ ವರಮಹಾಲಕ್ಷ್ಮಿ – ?️ರಾಧಾಕೃಷ್ಣ ಎರುಂಬು

- Advertisement -G L Acharya panikkar
- Advertisement -

ಮನಶಾಂತಿ ಪಡೆದುಕೊಳ್ಳುವುದಕ್ಕೆ ನೂರೆಂಟು ದಾರಿ. ಬಿಡುವಿಲ್ಲದ ದಿನಗಳಲ್ಲಿ ಹಬ್ಬ ಹರಿ ದಿನಗಳು ಮಾನಸಿಕ ಶಾರೀರಿಕ ಒತ್ತಡಗಳನ್ನು ಬದಿಗೆ ಸರಿಸಿ, ಸಕುಟುಂಬಿಕರನ್ನು ಒಟ್ಟಾಗಿಸಿ ಸಂತಸ ನೀಡುತ್ತದೆ. ಹಾಗೆಯೇ ನಾಡಹಬ್ಬ, ಊರಹಬ್ಬ ನೆರೆಹೊರೆಯವರನ್ನು ಒಟ್ಟಾಗಿಸಿ ಊರಲ್ಲೊಂದು ಜಾತ್ರೆ, ಪೂಜೆ ವೃತಾದಿಗಳು ನೆರೆಯವರನ್ನು ಕುಟುಂಬದವರನ್ನಾಗಿಸುತ್ತದೆ. ಕಷ್ಟ ಸುಖಗಳಿಗೆ ಸಖರೂ ದೊರೆಯುತ್ತಾರೆ ಸಾಂತ್ವಾನಗಳ ಜೊತೆ ಸುಖವೂ ದೊರೆಯುತ್ತದೆ. ಹೀಗೆ ವಿಶೇಷವಾಗಿ ಮಹಿಳಾ ಸಂಘಟನೆಗೆ ಮಹತ್ವ ನೀಡಿ, ಮಹಿಳಾ ಸಂಘಗಳು, ಮಹಿಳಾ ಭಜನಾ ಸಂಘಗಳು ಆಚರಿಸುವ ವಿಶೇಷ ಹಬ್ಬಗಳಲ್ಲಿ ವರಮಹಾಲಕ್ಷ್ಮಿವೃತ ಪೂಜೆಯೂ ಒಂದು. ದೇವಾಲಯ, ಮಂದಿರಗಳಲ್ಲೂ ಸಾರ್ವಜನಿಕ ವರಮಹಾಲಕ್ಷ್ಮಿ ಹಬ್ಬ ತಯಾರಿ ಇಲ್ಲದಿಲ್ಲ. ಆದರೆ ಮಹಿಳಾ ಸಂಘಟನೆ ಇಲ್ಲಿ ಅವಕಾಶ ಗಿಟ್ಟಿಸಿಕೊಳ್ಳುತ್ತದೆ. ಉತ್ತರಕನ್ನಡದ ನಗರಗಳಲ್ಲಿ, ಹಳ್ಳಿಗಳ ಮನೆ ಮನೆ ಗಳಲ್ಲಿ ಒಂದು ದಿನ, 48 ದಿನ ಆಚರಿಸಲ್ಪಡುತಿದ್ದ ಈ ಪರ್ವ ಇತ್ತೀಚೆಗೆ ಕರಾವಳಿಯ ಮನೆ ಮನೆಗಳಿಗಿಂತಲೂ ಹೆಚ್ಚಾಗಿ ಸಂಘಟನೆಯ ಹಬ್ಬವಾಗಿ ಕಾಣುತ್ತದೆ. ಮಾತೆಯೋರ್ವಳು ಸಂಸ್ಕಾರವಂತಳಾದರೆ ಮನೆಯೆ ಸಂಸ್ಕಾರ ಯುತವಾಗಿ ನಡೆಯುತ್ತದೆ ಎನ್ನುವುದಕ್ಕೆ ಇದೂ ಒಂದು ಸಾಕ್ಷಿ. ಪೂಜೆ ಪುರಸ್ಕಾರಗಳಿಲ್ಲದ ಮನೆಯಲ್ಲಿ ಭಜನೆ, ಘಂಟಾ ನಾದದ ಸ್ವರ ಕೇಳಲು ಕಾರಣವಾಗಿದೆ. ತನ್ನ ಮನೆಯೊಂದೆ ಸಾಕು ಎಂಬಲ್ಲಿ ಹಂಚಿ ತಿನ್ನುವ ದಾನಾದಿಗಳು ಆರಂಭವಾಗಿಸಿದೆ. ಜೊತೆಯಲ್ಲಿ ತನ್ನ ಮಕ್ಕಳಿಗೂ ಈ ಅವಕಾಶ ಮಾಡಿಕೊಟ್ಟಿದೆ ಎನ್ನುವುದೇ ಸಂತೋಷ. ಮಡಿಯುಟ್ಟು, ಅರಸಿನ-ಕುಂಕುಮ ತಿಲಕವಿಟ್ಟು, ಕೈಗೆ ಗೌರಿ ಬಳೆ ತೊಟ್ಟು, ವರಮಹಾಲಕ್ಷ್ಮಿಯ ಕೆಂಪು ನೂಲು ಧರಿಸಿದ ಸಂಭ್ರಮದ ಮುತ್ತೈದೆಯರು ಆ ದಿನವೊಂದಾದರೂ ಸಾಕ್ಷಾತ್ ಲಕ್ಷ್ಮಿಯರಾಗಿ ತೋರುತ್ತಾರೆಂದು ಸಂತಸ ಪಡಬೇಕು.ಇದೇ ಸಂಸ್ಕೃತಿ ಜೀವನದುದ್ದಕ್ಕೂ ಮೂಡಿಬಂದರೆ ಸನಾತನತೆಯ ಉಳಿಸುವ ಕ್ರಾಂತಿ ಇನ್ನೊಂದು ಬೇಕಿಲ್ಲ. ಆದರೆ ವರ್ಷದಲ್ಲಿ ಆ ದಿನವೊಂದು ಆಚರಣೆಗೆ ಸೀಮಿತವಾಗಿರುವುದು ಮಾತ್ರ ವಿಪರ್ಯಾಸ.ಇರಲಿ ಅಷ್ಟರಲ್ಲಾದರೂ ಸಮಾಧಾನ ತಂದುಕೊಳ್ಳೋಣ.
ಸಾರ್ವಜನಿಕ ಪೂಜೆಯಲ್ಲಿ ಇಷ್ಟನ್ನು ಮಾಡಿಕೊಳ್ಳೋಣ.

  1. ಹೊಂದಾಣಿಕೆಯೇ ಬಲು ಮುಖ್ಯವಾಗಿ ಬೇಕಾದುದು.
  2. ಮನೆಯಲ್ಲಿರುವ ಅತಿ ಮಡಿವಂತಿಕೆ ಬದಿಯಲ್ಲಿರಿಸಬೇಕು.
  3. ಮೇಲು -ಕೀಳು, ಬಡವ-ಬಲ್ಲಿದರೆನ್ನುವ ಭಾವ ಬಾರದಿರಲಿ.
  4. ಆಡಂಬರಕ್ಕಿಂತ ಶ್ರದ್ದೆ -ಭಕ್ತಿ ಮುಖ್ಯವಾಗಲಿ 5. ಸಂಘ ಶಕ್ತಿ ಸಂಘಟನೆಗಿರಲಿ, ಧನ ಸಂಪಾದನೆಗಾಗದಿರಲಿ
  5. ಮಾಡುವ ಪ್ರತಿಯೊಂದು ಕಾರ್ಯದಲ್ಲೂ ಭಕ್ತಿ ಸೇರಿಕೊಳ್ಳಲಿ.
  6. ಎಲ್ಲದರಲ್ಲೂ ತನಗೆ ಹೆಚ್ಚು, ತನ್ನದು ಮುಂದು ಎನ್ನುವ ಭಾವ ಸ್ವಲ್ಪ ಹಿಂದಿರಲಿ.
  7. ಮನೆಯಲ್ಲೂ, ಊರಲ್ಲೂ ಗುರುಹಿರಿಯರ ಮಾರ್ಗದರ್ಶನವಿರಲಿ.
  8. ಎಲ್ಲವೂ ಮನದ ನೆಮ್ಮದಿಗಾಗಿ ಎಂದಿರಲಿ, ಅಶಾಂತಿ ಮನೆ ತಲುಪದಿರಲಿ.
  9. ಕಾರ್ಯೋಣ್ಮುಕತೆ ಪಾರದರ್ಶಕವಾಗಿರಲಿ.
    ಇವೆಲ್ಲವುಗಳೇ ಸಾರ್ವಜನಿಕ ಪೂಜಾದಿಗಳಲ್ಲಿ ನಾವು ಮಾಡಬೇಕಾದ ವೃತಗಳು. ಬಾಹ್ಯ ಶೌಚಾದಿಗಳು ಬಾಹ್ಯ ಆರೋಗ್ಯಕ್ಕೆ ಒಳ್ಳೇದಾದರೆ ಆಂತರಿಕ ಶುಚಿತ್ವಕ್ಕೆ ಇವೆಲ್ಲವುಗಳು ಮುಖ್ಯವೇ.

ಇನ್ನು ಪೂಜಾ ಹಿನ್ನೆಲೆಗೆ ಬರೋಣ.
ಪ್ರತಿಯೊಂದು ಹಬ್ಬಹರಿದಿನಕ್ಕೆ  ಪೌರಾಣಿಕ ಹಿನ್ನೆಲೆ, ಕಥೆ ಇದ್ದೇ ಇದೆ.
ವರಮಹಾಲಕ್ಷ್ಮಿ ಹಬ್ಬಕ್ಕೂ ಪೌರಾಣಿಕ ಕಥೆ ಇದೆ.

ಅದು ಪಾರ್ವತಿದೇವಿಗೆ ಪರಮೇಶ್ವರ ಹೇಳಿದ ಕಥೆ. ಅದನ್ನು ಸೂತಪುರಾಣಿಕರು ಮುನಿ ಸಮುದಾಯಕ್ಕೆ ವಿವರಿಸಿದ್ದಾರೆ ಎಂಬುದು ಜನಪದ ವಿವರಣೆ.  ವರಮಹಾಲಕ್ಷ್ಮಿ ಪೌರಾಣಿಕ ಕಥೆ ಶುರುವಾಗುವುದು ಸತ್ಯಲೋಕದ ಚಿತ್ರಣದೊಂದಿಗೆ. ಸೂತ ಪುರಾನಿಕರ ಪ್ರವಚನಕ್ಕೂ ಮೊದಲೆ ಅಲ್ಲಿ ನೆರೆದಿದ್ದ ಮುನಿ ಶ್ರೇಷ್ಠರು ಮಹರ್ಷಿಗಳ ಪಾದಕ್ಕೆರಗಿ, ʻತಾವು ತ್ರಿಕಾಲ ಜ್ಞಾನಿಗಳು. ಪುರಾಣ ಪುರುಷೋತ್ತಮರಾದ ನೀವು ನಮಗೆ ಅನುಗ್ರಹಿಸುವುದೇ ಆದರೆ, ಈ ಲೋಕದಲ್ಲಿ ಸರ್ವ ಸೌಭಾಗ್ಯಗಳನ್ನೂ ಕೊಡುವ ಅತ್ಯುತ್ತಮ ವ್ರತಾಚರಣೆ ಯಾವುದು, ಅದರ ಆಚರಣೆ ಹೇಗೆ ಎಂಬುದನ್ನು ನಮಗೆ ಅರ್ಥಮಾಡಿಸಿಕೊಡಿ ಎಂದು ಬೇಡಿಕೊಂಡರು.
ಋಷಿ ಮುನಿಗಳ ಬೇಡಿಕೆಗೆ ತಲೆದೂಗಿದ ಮಹರ್ಷಿಗಳು, ಮುನಿಶ್ರೇಷ್ಠರೇ, ಭಕ್ತಿಯಿಂದ ಪೂಜಿಸುವವರಿಗೆ, ವ್ರತಾಚರಣೆ ಮಾಡುವವರಿಗೆ ಈ ಲೋಕದಲ್ಲಿ ಸಕಲ ಇಷ್ಟಾರ್ಥ ಈಡೇರುವಂತಹ ಒಂದು ಅತ್ಯುತ್ತಮ ವ್ರತಾಚರಣೆ ಇದೆ. ಅದರ ಹಿನ್ನೆಲೆಯನ್ನು ತಿಳಿಸಿಕೊಡುವೆ ಎಂದು ಹೇಳುತ್ತ, ಈ ವೃತದ ಬಗ್ಗೆ ತಿಳಿಸುವರು. ಅದೇ
ವರಮಹಾಲಕ್ಷ್ಮಿ ವ್ರತಾಚರಣೆ

ಇದು ಪೌರಾಣಿಕ ಕಥೆ.ಕೈಲಾಸ ಎಂಬುದು ಪಾರ್ವತಿ ಪರಮೇಶ್ವರರ ನಿತ್ಯಸಾನ್ನಿಧ್ಯ ಇರುವ ಪ್ರದೇಶ. ಅಲ್ಲಿ ಜಗನ್ಮಾತೆಯಾದ ಪಾರ್ವತಿ ದೇವಿಯು ತನ್ನ ಪತಿ ಪರಮೇಶ್ವರನನ್ನು ಉದ್ದೇಶಿಸಿ, ʻಮಹಾದೇವಾ, ಪ್ರಪಂಚದಲ್ಲಿ ಭಕ್ತರ ಕಷ್ಟವನ್ನು ಪರಿಹರಿಸಿ ಸಕಲ ಸುಖಗಳನ್ನು ಕೊಟ್ಟು ಸೌಭಾಗ್ಯ ಸಂತೋಷಗಳನ್ನು ಉಂಟುಮಾಡುವ ವ್ರತ ಯಾವುದಾದರೂ ಇದೆಯಾ? ಇದ್ದರೆ ಅದನ್ನು ನನಗೆ ಹೇಳುʼ ಎಂದು ಕೇಳಿಕೊಂಡಳು.ಆಗ ಪರಮೇಶ್ವರನು ʻಸರ್ವ ಸಂಪದ್ಭರಿತವಾದ ಪುತ್ರಪೌತ್ರದಾಯಕವಾದ ಸನ್ಮಂಗಳ ಸಂತಾನಕರವಾದ ವರ ಮಹಾಲಕ್ಷ್ಮೀ ವ್ರತ ಎಂಬ ವ್ರತಾಚರಣೆ ಒಂದು ಇದೆ. ಈ ವ್ರತವನ್ನು ಭಕ್ತಿ ಸಂಪನ್ನರಾದ ಹೆಂಗಸರು, ಗಂಡಸರು, ಮಕ್ಕಳು ಯಾರುಬೇಕಾದರೂ ಮಾಡಬಹುದು. ಶ್ರಾವಣ ಮಾಸದ ಶುಕ್ಲಪಕ್ಷದ ಹುಣ್ಣಿಮೆಗೆ ಹತ್ತಿರವಾದ ಶುಕ್ರವಾರದ ದಿನ ಈ ವ್ರತಾಚರಣೆ ಮಾಡಬೇಕುʼ ಎಂದು ಪಾರ್ವತಿಗೆ ಹೇಳಿದನು.


ಪತಿ ಪರಮೇಶ್ವರನ ಉತ್ತರದಿಂದ ಸಂತುಷ್ಠಳಾದ ಪಾರ್ವತಿ ದೇವಿಯು, ʻಸ್ವಾಮಿ ವರಲಕ್ಷ್ಮೀ ವ್ರತದ ಆಚರಣೆಗೆ ನಿಯಮ
ವೇನಾದರೂ ಇದೆಯಾ? ಅದನ್ನು ಹೇಗೆ ಆಚರಿಸಬೇಕು? ಆ ವ್ರತದ ಅಧಿದೇವತೆ ಯಾರುʼ ಎಂದು ಕೇಳಿದಳು.

ಅದಕ್ಕೆ ಉತ್ತರಿಸಿದ ಪರಮೇಶ್ವರನು, ʻಮಹಾಲಕ್ಷ್ಮಿಯೇ’ ಆ ವ್ರತಕ್ಕೆ ಅಧಿದೇವತೆ. ಇದನ್ನು ಶ್ರಾವಣ ಮಾಸದಲ್ಲಿ ಪೌರ್ಣಿಮೆಗೆ ಸಮೀಪಸ್ಥವಾದ ಭೃಗುವಾರ ಮಾಡಬೇಕು. ಆ ರೀತಿ ವ್ರತಾಚರಣೆ ಮಾಡಿದ ಭಕ್ತರ ಕೋರಿಕೆಗಳೆಲ್ಲ ಕೈಗೂಡುತ್ತವೆ. ಅದೇ ರೀತಿ ಅವರ ಕಷ್ಟ ಕಾರ್ಪಣ್ಯಗಳು ನಾಶವಾಗುವುದು. ಇದರ ಮಹತ್ವವನ್ನು ಸಾರುವ ಕಥೆಯೊಂದು ಇದೆ. ಅದನ್ನು ಹೇಳುತ್ತೇನೆ ಕೇಳು ಎಂದು ಪಾರ್ವತಿ ದೇವಿಗೆ ಆ ಕಥೆಯನ್ನು ಹೇಳಿದ್ದು ಹೀಗೆ.. ಚಾರುಮತಿಗೆ ವರಮಹಾಲಕ್ಷ್ಮಿ ಒಲಿದ ಕಥೆ

ಆ ಕಾಲದಲ್ಲಿ ವಿದರ್ಭ ದೇಶಕ್ಕೆ ರಾಜಧಾನಿ ಕುಂಡಿನನಗರ. ಅಲ್ಲಿ ಚಾರುಮತಿ ಎಂಬ ಒಬ್ಬ ಮಹಿಳೆ ವಾಸವಿದ್ದಳು. ಆಕೆ ದರಿದ್ರಳಾದರೂ ಸದಾಚಾರ ಸಂಪನ್ನಳು. ಪತಿಯ ಶುಶ್ರೂಷೆಯೆ ಮುಖ್ಯ ಎಂದು ತಿಳಿದು ಸದಾ ಸಂತೋಷ ಚಿತ್ತಳಾಗಿ ಪತಿಯ ಮನಸ್ಸನ್ನು ನೋಯಿಸದೆ ಸದ್ವರ್ತನೆ ತೋರುತ್ತಿದ್ದವಳು.

ಇವಳ ಸದಾಚಾರ ಸಂಪನ್ನತೆಗೆ ಮೆಚ್ಚಿದ ಮಹಾಲಕ್ಷ್ಮಿಯು, ಒಂದು ದಿನ ಚಾರುಮತಿಯು ನಿದ್ರಿಸುತ್ತಿರುವಾಗ ಸ್ವಪ್ನದಲ್ಲಿ ಕಂಡು “ಪತಿವ್ರತೆಯಾದ ಚಾರುಮತಿ, ನಿನ್ನ ಗುಣಶೀಲಗಳಿಗೆ ಮೆಚ್ಚಿ ನಿನ್ನ ಪೂರ್ವ ಪುಣ್ಯಾನುಸಾರವಾಗಿ ನಿನಗೆ ಅನುಗ್ರಹ ಮಾಡಲು ಬಂದಿರುವ ಮಹಾಲಕ್ಷ್ಮಿ ನಾನು. ಈಗ ನಾನು ಹೇಳುವ ವಿಷಯವನ್ನು ಗಮನವಿಟ್ಟು ಕೇಳಿ, ನಂತರ ಅದರಂತೆ ಆಚರಣೆ ಮಾಡಬೇಕು. ಆ ರೀತಿ ಮಾಡುವುದರಿಂದ ನೀನು ಈಗ ಅನುಭವಿಸುತ್ತಿರುವ ದಟ್ಟ ದಾರಿದ್ರ್ಯವು ನಾಶವಾಗಿ, ಅಷ್ಟೈಶ್ವರ್ಯವು ನಿನಗೆ ಪ್ರಾಪ್ತಿಯಾಗುತ್ತದೆ.

ಶ್ರಾವಣ ಮಾಸದ ಎರಡನೆಯ ಶುಕ್ರವಾರ ಪ್ರದೋಷದಲ್ಲಿ ವಿಧಿವತ್ತಾಗಿ ಯಾರು ನನ್ನನ್ನು ಪೂಜಿಸುವರೋ, ವ್ರತಾಚರಣೆ ಮಾಡುವರೋ ಅಂಥವರಿಗೆ ನಾನು ಸಕಲ ಭೋಗಭಾಗ್ಯಗಳನ್ನು ಒದಗಿಸುವೆನು. ಯಾರಿಗೆ ಪುಣ್ಯ ಸಂಪರ್ಕವಿರುವುದೊ, ಅಂಥವರಿಗೆ ಈ ವ್ರತಚಾರಣೆಯಲ್ಲಿ ಭಕ್ತಿ ಹುಟ್ಟುತ್ತದೆ.

ಭೂಲೋಕದಲ್ಲಿ ಯಾರು ನನ್ನನ್ನು ಭಕ್ತಿಯಿಂದ ಪೂಜಿಸುತ್ತಾರೋ ಅವರೇ ಧನ್ಯರು! ಅವರೇ ಶೂರರು! ಅವರೇ ಪುಣ್ಯಶಾಲಿಗಳು, ಅವರೇ ಮಹಾತ್ಮರು, ಸಾಹಸಿಗಳು. ಅವರೇ ಪಂಡಿತರು, ಅಂಥವರೇ ಸ್ತುತ್ಯರ್ಹರು. ಹೆಚ್ಚು ಹೇಳುವುದೇನು ಬಂತು ಅವರೇ ಸರ್ವೋತ್ತಮರು. ಯಾರು ನನ್ನ ಕೃಪಾ ಕಟಾಕ್ಷಕ್ಕೆ ಬಾಹಿರರಾಗಿರುವರೊ! ಅವರ ಬಾಳು ಅಜಗಳಸ್ತನದಂತೆ ವ್ಯರ್ಥವೇ ಸರಿ. ಆದ ಕಾರಣ ನೀನು ಈ ವ್ರತಾಚರಣೆ ಮಾಡಿ ಧನ್ಯಳಾಗು” ಎಂದು ಉಪದೇಶಿಸಿ ಅಂತರ್ದಾನಳಾದಳು.

ನಿದ್ದೆಯಿಂದ ಎದ್ದ ಚಾರುಮತಿಯು, ಈ ಕನಸನ್ನು ತನ್ನವರ ಬಳಿ ಹೇಳಿಕೊಂಡಳು. ಶ್ರಾವಣ ಮಾಸ ಶುರುವಾಯಿತು. ಎರಡನೇ ಶುಕ್ರವಾರವೂ ಬಂತು. ಚಾರುಮತಿ ಕೂಡ ಮೊದಲೇ ಯೋಜಿಸಿದ ಪ್ರಕಾರ, ವರಮಹಾಲಕ್ಷ್ಮಿ ವ್ರತಾಚರಣೆ ಮಾಡಿದಳು. ಮಹಾಲಕ್ಷ್ಮಿಯನ್ನು ಭಕ್ತಿ ಶ್ರದ್ಧೆಯಿಂದ ಪೂಜಿಸಿದಳು. ಹೀಗಾಗಿ ವರಲಕ್ಷ್ಮಿಯ ಕೃಪಾಕಟಾಕ್ಷದ ಕಾರಣ ಅಷ್ಟೈಶ್ವರ್ಯವನ್ನೂ ಪಡೆದು, ದಾರಿದ್ರ್ಯವನ್ನು ನೀಗಿಸಿಕೊಂಡಳು.

ನಂತರದ ಕಾಲಘಟ್ಟದಲ್ಲಿ ಬದುಕಿನಲ್ಲಿ ಸುಖವನ್ನು ಅನುಭವಿಸುತ್ತ ಬಡವರಿಗೆ ಅನ್ನದಾನ ಮಾಡಿ, ಬಂಧುವರ್ಗದವರನ್ನು ಪ್ರೀತಿಯಿಂದ ಕಾಪಾಡುತ್ತ ಭೂಲೋಕದಲ್ಲಿ ಅನಂತವಾದ ಅಪಾರಸೌಖ್ಯ ಅನುಭವಿಸಿ, ಪರಲೋಕದಲ್ಲಿ ಶ್ರೇಷ್ಠವೆನಿಸಿದ ಪತಿಸಾಯುಜ್ಯವನ್ನು ಪಡೆದಳು.

ಆದ ಕಾರಣ ಈ ಲೋಕದಲ್ಲಿ ಯಾರು ಭಕ್ತಿಭಾವದಿಂದ ಈ ವ್ರತವನ್ನು ಆಚರಿಸುವರೋ ಅಂಥವರು ಅಖಂಡ ಐಶ್ವರ್ಯ ಪಡೆದು, ವರಲಕ್ಷ್ಮಿಯ ಪ್ರಸಾದದಿಂದ ಭೋಗಭಾಗ್ಯಗಳನ್ನು ಅನುಭವಿಸುವರುʼ ಎನ್ನುತ್ತ ಪರಮೇಶ್ವರನು ಆ ಕಥೆಯನ್ನು ಮುಗಿಸಿದನು.
ಆಗ ಪಾರ್ವತಿ ದೇವಿ, “ಮಹಾದೇವ ನನ್ನಲ್ಲಿ ನಿನಗೆ ದಯೆಯುಂಟಾದರೆ ಈ ಪೂಜೆ, ವ್ರತಾಚರಣೆಯ ವಿಧಾನವನ್ನು ವಿವರವಾಗಿ ಹೇಳಬೇಕು” ಎಂದು ಕೇಳಿಕೊಂಡಳು.
ವರಮಹಾಲಕ್ಷ್ಮಿ ಪೂಜಾ ವಿಧಾನಗಳನ್ನು ಪರಮೇಶ್ವರ ದೇವರು ವಿವರಿಸಿದರು.

ಶ್ರಾವಣಮಾಸದ ಎರಡನೆಯ ಶುಕ್ರವಾರ ಭಕ್ತಿಯುಳ್ಳ ಸ್ತ್ರೀಯರಾಗಲಿ, ಪುರುಷರಾಗಲಿ, ಮಕ್ಕಳೇ ಆಗಲಿ ಅಭ್ಯಂಜನವನ್ನು ಮಾಡಿಕೊಂಡು ಅಂದರೆ ಮಂಗಳ ಸ್ನಾನವನ್ನು ಮಾಡಬೇಕು. ಅದಾದ ನಂತರ ಮಡಿ ವಸ್ತ್ರ ಅಥವಾ ಶುಭವಸ್ತ್ರಗಳನ್ನು ಧರಿಸಬೇಕು.

ಮನೆಯ ಎದುರು ರಂಗೋಲಿ ಬಿಡಿಸಬೇಕು. ಅಲಂಕೃತವಾದ ಪರಿಶುದ್ಧ ಪೂಜಾ ಸ್ಥಳದಲ್ಲಿ ಮನೋಹರವಾದ ಮಂಟಪ ನಿರ್ಮಿಸಬೇಕು. ಅದರ ಮಧ್ಯದಲ್ಲಿ ಪಂಚವರ್ಣದಿಂದ ಕೂಡಿದ ಅಷ್ಟದಳ ಪದ್ಮವನ್ನು ರಚಿಸಿ, ಅದರ ಮೇಲೆ ಮಾವಿನ ಚಿಗುರುಗಳಿಂದ ಕೂಡಿದ ಕಲಶವನ್ನು ಇಟ್ಟು ಪ್ರಾಣಪ್ರತಿಷ್ಠಾಪನ ಮಾಡಬೇಕು. ಅದರಲ್ಲಿ ವರಮಹಾಲಕ್ಷ್ಮಿಯನ್ನು ಪೂಜಿಸಬೇಕು. ಷೋಡಶೋಪಚಾರ ಮಾಡಿ ದೇವಿಯನ್ನು ಸತ್ಕರಿಸಬೇಕು.

”ಪದ್ಮಾನನೇ ಪದ್ಮ ಪದ್ಮಾಕ್ಷ್ಮೀ ಪದ್ಮ ಸಂಭವೇ ತಮ್ನೇ ಭಜಸಿ ಪದ್ಮಾಕ್ಷಿ ಯೇನ ಸೌಖ್ಯಂ ಲಭಾಮ್ಯಹಂ”ಎಂಬ ಮಂತ್ರದೊಂದಿಗೆ ಶಾಸ್ತ್ರಬದ್ಧವಾಗಿ ಪೂಜೆ ಮಾಡಿ ದೇವಿಯನ್ನು ತೃಪ್ತಿಪಡಿಸಬೇಕು. ಆನಂತರ ಯೋಗ್ಯ ಬ್ರಾಹ್ಮಣನಿಗೆ ಉಪಾಯನ ದಾನವನ್ನು ಕೊಡಬೇಕು. ಸುವಾಸಿನಿಯರನ್ನು ಸಮಾರಾಧನೆ ಸುಗಂಧ ತಾಂಬೂಲಗಳಿಂದ ತೃಪ್ತಿಪಡಿಸಬೇಕು. ಅದೇ ರೀತಿ, ಭಕ್ತಿಯುಕ್ತರಾದ ಬ್ರಾಹ್ಮಣ ಸುವಾಸಿನಿಯರಿಗೆ ಭೋಜನ ಮಾಡಿಸಿ, ಭೂರಿದಕ್ಷಿಣೆಗಳನ್ನು ಕೊಟ್ಟು ಈ ಕಥೆಯನ್ನು ಕೇಳಬೇಕು” ಎಂದು ಪರಮೇಶ್ವರನು ವಿವರಿಸಿದನು.

ಇಷ್ಟೆಲ್ಲ ಹಿನ್ನಲೆ ಇರುವ ಕಥೆ ಪುರಾಣದಲ್ಲೇ ಉಳಿಯದೆ ನಮ್ಮವರಿಗೂ ತಿಳಿಯಲೆಂಬ ಪ್ರಯತ್ನ ನನ್ನದು. ಇನ್ನಷ್ಟು ಕಥೆಗಳ ಮೂಲವಿರಬಹುದು. ಒಟ್ಟಾಗಿ ಆರೋಗ್ಯ, ನೆಮ್ಮದಿಯ ಸಂಸ್ಕಾರದ ಬದುಕು ನಮ್ಮದಾಗಲಿ. ಮಹಾಲಕ್ಷ್ಮಿ ಸಂತುಷ್ಟಳಾಗಿ ವರವನ್ನೀಯಲಿ. ಸರ್ವರೀಗೂ ವರಮಹಾಲಕ್ಷ್ಮಿವೃತ ದಿನದ ಶುಭಾಶಯಗಳು.

- Advertisement -

Related news

error: Content is protected !!