ನವದೆಹಲಿ: ಮೈಸೂರು-ಕೊಡಗು ಕ್ಷೇತ್ರದ ಮಾಜಿ ಸಂಸದ ಸಿ ಹೆಚ್ ವಿಜಯ್ ಶಂಕರ್ ಅವರನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಮೇಘಾಲಯದ ರಾಜ್ಯಪಾಲರನ್ನಾಗಿ ನೇಮಿಸಿದ್ದಾರೆ.
ಶನಿವಾರ ದ್ರೌಪದಿ ಮುರ್ಮು , 3 ರಾಜ್ಯಪಾಲರನ್ನು ವರ್ಗಾವಣೆ ಮಾಡಿ 2 ರಾಜ್ಯಪಾಲರಿಗೆ ಹೆಚ್ಚುವರಿ ಹೊಣೆ ನೀಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರ ಆಪ್ತರಾಗಿದ್ದ ಗುಜರಾತ್‌ನ ಮಾಜಿ ಮುಖ್ಯ ಕಾರ್ಯದರ್ಶಿ ಕೆ. ಕೈಲಾಸನಾಥನ್ ಅವರನ್ನು ಪುದುಚೇರಿಯ ಲೆಫ್ಟಿನೆಂಟ್ ಗವರ್ನರ್ ಆಗಿ ನೇಮಿಸಲಾಗಿದೆ. ತ್ರಿಪುರಾ ಮಾಜಿ ಮುಖ್ಯಮಂತ್ರಿ ಜಿಷ್ಣು ದೇವ್ ವರ್ಮಾ ಅವರನ್ನು ತೆಲಂಗಾಣದ ರಾಜ್ಯಪಾಲರನ್ನಾಗಿ ನೇಮಿಸಲಾಗಿದ್ದು, ರಮೆನ್ ದೇಕಾ ಅವರು ಛತ್ತೀಸಗಢಕ್ಕೆ ನೇಮಕವಾಗಿದ್ದಾರೆ.
ಹರಿಭಾವು ಬಾಗಡೆ ಅವರನ್ನು ರಾಜಸ್ಥಾನದ ರಾಜ್ಯಪಾಲರನ್ನಾಗಿ ನೇಮಿಸಿದ್ದರೆ ,ಗಂಗ್ವಾರ್ ಅವರು ಜಾರ್ಖಂಡ್‌ಗೆ ಹಾಗೂ ಮಾಥುರ್ ಅವರನ್ನು ಸಿಕ್ಕಿಂನ ರಾಜ್ಯಪಾಲರನ್ನಾಗಿ ನೇಮಿಸಲಾಗಿದೆ. ಪಂಜಾಬ್‌ನಲ್ಲಿ ಭಗವಂತ್ ಮಾನ್ ನೇತೃತ್ವದ ಆಪ್ ಸರ್ಕಾರದೊಂದಿಗೆ ಭಿನ್ನಾಭಿಪ್ರಾಯ ಹೊಂದಿದ್ದ ಬನ್ವಾರಿಲಾಲ್ ಪುರೋಹಿತ್ ಅವರ ಸ್ಥಾನಕ್ಕೆ ಅಸ್ಸಾಂನ ರಾಜ್ಯಪಾಲ ಗುಲಾಬ್ ಚಂದ್ ಕಟಾರಿಯಾ ಅವರನ್ನು ನೇಮಿಸುವುದರ ಜೊತೆಗೆ ಚಂಡೀಗಢದ ಹೊಣೆಯನ್ನು ನೀಡಲಾಗಿದೆ.
ಸಿಕ್ಕಿಂ ಗವರ್ನರ್ ಲಕ್ಷ್ಮಣ್ ಪ್ರಸಾದ್ ಆಚಾರ್ಯ ಅವರನ್ನು ಅಸ್ಸಾಂನ ರಾಜ್ಯಪಾಲರನ್ನಾಗಿ ಮಣಿಪುರದ ರಾಜ್ಯಪಾಲರ ಹೆಚ್ಚುವರಿ ಜವಾಬ್ದಾರಿಯನ್ನು ಸಹ ನೀಡಲಾಗಿದೆ. ಜಾರ್ಖಂಡ್ ಗವರ್ನರ್ ಸಿ.ಪಿ. ರಾಧಾಕೃಷ್ಣನ್ ಅವರನ್ನು ಮಹಾರಾಷ್ಟ್ರಕ್ಕೆ ವರ್ಗಾವಣೆ ಮಾಡಲಾಗಿದೆ.
1998, 2004 ರಲ್ಲಿ ವಿಜಯ್ ಶಂಕರ್ ಬಿಜೆಪಿಯಿಂದ ಸ್ಪರ್ಧಿಸಿ ಸಂಸದರಾಗಿ ಆಯ್ಕೆ ಆಗಿದ್ದರು. 2019ರಲ್ಲಿ ಕಾಂಗ್ರೆಸ್ ಸೇರ್ಪಡೆಯಾಗಿದ್ದ ವಿಜಯ್ ಶಂಕರ್ ಅವರು ಪ್ರತಾಪ್ ಸಿಂಹ ವಿರುದ್ಧ ಸೋತಿದ್ದರು. ಮರಳಿ ಬಿಜೆಪಿಗೆ ಬಂದಿದ್ದ ವಿಜಯ್ ಶಂಕರ್ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಟಿಕೆಟ್ ಆಕಾಂಕ್ಷಿಯಾಗಿದ್ದರು.