


ದಿವ್ಯಾಂಗ ಮಕ್ಕಳ ಸೇವೆ ಎಲ್ಲಾ ಸೇವೆಗಳಿಗಿಂತಲೂ ಶ್ರೇಷ್ಠ: ಸಹಕಾರ ರತ್ನ ರಾಜಾರಾಮ ಭಟ್
ಬಿ.ಸಿ.ರೋಡ್: ದಿವ್ಯಾಂಗ ಮಕ್ಕಳಿಗೆ ಮಾಡುವ ಸೇವೆ ಅತ್ಯಂತ ಶ್ರೇಷ್ಠವಾದ ಸೇವೆಯಾಗಿದ್ದು, ಸಮಾಜದ ಎಲ್ಲಾ ಸ್ತರದ ಜನರು ಈ ಸೇವೆಯಲ್ಲಿ ತೊಡಗಿಸಿಕೊಳ್ಳಬೇಕು ಎಂದು ಸಹಕಾರ ರತ್ನ ಪ್ರಶಸ್ತಿ ವಿಜೇತ ಟಿ.ಜಿ. ರಾಜಾರಾಮ ಭಟ್ ಹೇಳಿದರು.
ಬಿ.ಸಿ.ರೋಡ್‌ನ ವಿಕಾಸಂ ಸೇವಾ ಫೌಂಡೇಶನ್‌ನಲ್ಲಿ ನಡೆದ ವಿಕಾಸಂ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, “ರಕ್ತ ಮತ್ತು ಹಣ ಒಂದೇ ಕಡೆ ಹೆಪ್ಪುಗಟ್ಟಿದರೆ ಅಪಾಯ. ರಕ್ತ ಪರಿಚಲನೆಯಿಲ್ಲದೆ ಕಾಯಿಲೆ ಉಂಟಾಗುವಂತೆ, ಹಣವೂ ಸೀಮಿತ ಕೈಗಳಲ್ಲಿ ಮಾತ್ರ ಸಂಗ್ರಹವಾದರೆ ಸಮಾಜಕ್ಕೆ ಅಪಾಯಕಾರಿಯಾಗುತ್ತದೆ. ಧನವನ್ನು ದಿವ್ಯಾಂಗರ ಸೇವೆಗೆ ಬಳಕೆ ಮಾಡಿದರೆ ದಿವ್ಯಾಂಗರು ಸಬಲರಾಗುವ ಜೊತೆಗೆ ಸಮಾಜವೂ ಆರೋಗ್ಯಕರವಾಗುತ್ತದೆ” ಎಂದು ಹೇಳಿದರು. ಈ ಸಂದರ್ಭದಲ್ಲಿ ರಾಜಾರಾಮ ಭಟ್ ಅವರನ್ನು ಸಹಕಾರ ರತ್ನ ಪ್ರಶಸ್ತಿಯಿಂದ ಗೌರವಿಸಲಾಯಿತು.

ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಭಾಗವಹಿಸಿದ ಹೆಚ್‌ಪಿ ಇಂಡಿಯಾ ಸಂಸ್ಥೆಯ ಟ್ಯಾಲೆಂಟ್ ಅಕ್ವಿಸಿಷನ್ ಮುಖ್ಯಸ್ಥ ದಿಲೀಪ್ ಚಂದ್ರ ಮಾತನಾಡಿ, ವಿಕಾಸಂ ಸೇವಾ ಫೌಂಡೇಶನ್ ನಡೆಸುತ್ತಿರುವ ದಿವ್ಯಾಂಗರ ಸೇವೆಯಲ್ಲಿ ಹೆಚ್‌ಪಿ ಸಂಸ್ಥೆ ಸದಾ ಸಹಭಾಗಿಯಾಗಿರುತ್ತದೆ ಎಂದು ಭರವಸೆ ನೀಡಿದರು. ಹೆಚ್‌ಪಿ ಸಂಸ್ಥೆಯ ಇಂಕ್ಲೂಸಿವ್ ಅಂಡ್ ಬಿಲಾಂಗಿಂಗ್ ಯೋಜನೆಯಡಿ ವಿಕಾಸಂನಲ್ಲಿ ತರಬೇತಿ ಪಡೆಯುತ್ತಿರುವ ದಿವ್ಯಾಂಗ ಮಕ್ಕಳ ಶಿಕ್ಷಣಕ್ಕಾಗಿ ಕಂಪ್ಯೂಟರ್‌ಗಳು ಹಾಗೂ ಕಲಿಕಾ ಸಾಮಗ್ರಿಗಳನ್ನು ವಿತರಿಸಿದರು.
ಹೋಟೆಲ್ ವಿವಾಂತ, ಮಂಗಳೂರು ಇಲ್ಲಿನ ಮಾನವ ಸಂಪನ್ಮೂಲ ಮುಖ್ಯಸ್ಥೆ ರೇಖಾ ಸಂಜೀವ್ ಮಾತನಾಡಿ, ಖಾಸಗಿ ವಲಯದ ಉದ್ಯೋಗದಾತರು ದಿವ್ಯಾಂಗರಿಗೆ ಉದ್ಯೋಗಾವಕಾಶ ಕಲ್ಪಿಸಬೇಕು ಎಂದು ಹೇಳಿದರು. ಉದ್ಯಮಿ ರೋಷನ್ ರೈ ಅವರು ನಿಸ್ವಾರ್ಥ ಸೇವೆ ಮಾಡುವಾಗ ಅಡೆತಡೆಗಳು ಎದುರಾಗುವುದು ಸಹಜವಾದರೂ, ಉತ್ತಮ ಉದ್ದೇಶ ಸಾಧನೆಗಾಗಿ ಅವನ್ನು ಧೈರ್ಯದಿಂದ ಎದುರಿಸಬೇಕು ಎಂದು ಅಭಿಪ್ರಾಯಪಟ್ಟರು.
ಕಾರ್ಯಕ್ರಮದ ಅಂಗವಾಗಿ ಹೆಚ್‌ಪಿ ಸಂಸ್ಥೆಯ ದಿಲೀಪ್ ಚಂದ್ರ, ಪ್ರತಾಪ್ ಕುಮಾರ್, ವರುಣ್ ಆರ್., ರಚನ್ ಶೆಟ್ಟಿ ಹಾಗೂ ವಿನಯ್ ಕುಮಾರ್ ಅವರು ವಿವಿಧ ಕಾಲೇಜುಗಳ ವಿದ್ಯಾರ್ಥಿಗಳಿಗೆ “ಸಂದರ್ಶನ ಕೌಶಲ್ಯ” ಕುರಿತು ತರಬೇತಿ ನೀಡಿದರು.
ವಿಕಾಸಂ ಸಂಸ್ಥೆಯ ಸಹ ಸಂಸ್ಥಾಪಕ ಧರ್ಮ ಪ್ರಸಾದ್ ರೈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ಸಹ ಸಂಸ್ಥಾಪಕ ಗೋಪಾಲ್ ಗೋವಿಂತೋಟ ಪ್ರಾಸ್ತಾವಿಕ ನುಡಿಗಳನ್ನಾಡಿ, ಗಣೇಶ್ ಭಟ್ ವಾರಣಾಸಿ ಅತಿಥಿಗಳನ್ನು ಸ್ವಾಗತಿಸಿದರು. ಕುಮಾರಿ ನವ್ಯಾ ಕಾರ್ಯಕ್ರಮ ನಿರೂಪಿಸಿದರು. ಈ ಸಂದರ್ಭದಲ್ಲಿ ವಿಕಾಸಂನಲ್ಲಿ ತರಬೇತಿ ಪಡೆಯುತ್ತಿರುವ ದಿವ್ಯಾಂಗ ಮಕ್ಕಳ ಪ್ರತಿಭಾ ಪ್ರದರ್ಶನ ಕಾರ್ಯಕ್ರಮವೂ ನಡೆಯಿತು.








