ವಿಟ್ಲ: ಎಡೆಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ಕೊಳ್ನಾಡು ಗ್ರಾಮದ ಮುಂಡತ್ತಜೆಯಲ್ಲಿ ಭಾರೀ ಪ್ರಮಾಣದಲ್ಲಿ ಮನೆ ಪಕ್ಕದ ಧರೆ ಕುಸಿದು ಬಿದ್ದು ರಸ್ತೆ ಸಂಪರ್ಕ ಕಡಿತಗೊಂಡಿದೆ. ಇದೇ ಸಂದರ್ಭ ಧರೆಯ ಪಕ್ಕದಲ್ಲಿದ್ದ ಮನೆ ಯಾವುದೇ ಕ್ಷಣ ಕುಸಿದು ಬೀಳುವ ಹಂತದಲ್ಲಿದೆ.
ಕೊಳ್ನಾಡು ಮುಂಡತ್ತಜೆ-ಪಂಜಿಗದ್ದೆ ಸಂಪರ್ಕ ರಸ್ತೆಗೆ ತಾಗಿಕೊಂಡಿರುವ ಶ್ರೀಧರ ಶೆಟ್ಟಿ ಎಂಬವರ ಮನೆ ಯಾವುದೇ ಕ್ಷಣ ನೆಲಕಚ್ಚುವ ಹಂತದಲ್ಲಿದೆ. ರಸ್ತೆ ಪಕ್ಕದ ಧರೆ ಭಾರಿ ಪ್ರಮಾಣದಲ್ಲಿ ಕುಸಿದು ಬಿದ್ದಿದ್ದು ಎತ್ತರದಲ್ಲಿರುವ ಮನೆ ಅಪಾಯ ಸ್ಥಿತಿಯಲ್ಲಿದೆ. ಸ್ಥಳೀಯ ಯುವಕರ ಸಹಕಾರದಲ್ಲಿ ಸುಮಾರು ೬ಗಂಟೆಗಳ ಕಾಲ ಜೆಸಿಬಿ ಯಂತ್ರದ ಮೂಲಕ ಮಣ್ಣನ್ನು ತೆರವುಗೊಳಿಸಲಾಗಿದೆ. ಇದೇ ಸಂದರ್ಭ ಸೆರ್ಕಳ ಕೋಟಂಕೋಟಿ ಎಂಬಲ್ಲಿ ಮನೆಯ ಮೇಲೆ ಈಚಲು ಮರ ಮುರಿದು ಬಿದ್ದು ಭಾಗಶ: ಹಾನಿಗೊಂಡಿದೆ. ಅಲ್ಲೇ ಪಕ್ಕದಲ್ಲಿನ ಮನೆ ಆವರಣದಲ್ಲಿದ್ದ ಬಚ್ಚಲು ಮನೆಯ ಹಿಂಭಾಗದಲ್ಲಿರುವ ಗುಡ್ಡದಿಂದ ಭಾರಿ ಗಾತ್ರದ ಬಂಡೆಕಲ್ಲು ಉರುಳಿಬಿದ್ದು ಕಟ್ಟಡ ನಾಶವಾಗಿದ್ದು ಮನೆಯವರೆಲ್ಲ ಅದೃಷ್ಟವಶಾತ್ ಪಾರಾಗಿದ್ದಾರೆ.