ವಿಟ್ಲ: ಉತ್ತರ ಪ್ರದೇಶ ರಾಜ್ಯದದಿಂದ ಆಗಮಿಸಿದ ಮೂವರು ಕ್ಷೌರಿಕರು ವಿಟ್ಲದ ಸಲೂನ್ ನಲ್ಲಿ ಕೆಲಸ ಹಾಜರಾಗಿರುವ ಬಗ್ಗೆ ಮಾಹಿತಿ ಪಡೆದ ವಿಟ್ಲ ಪಟ್ಟಣ ಪಂಚಾಯಿತಿ ಅಧಿಕಾರಿಗಳು ಭೇಟಿ ನೀಡಿ ಸಲೂನ್ ಗೆ ಬೀಗ ಹಾಕಿ ಒಟ್ಟು ನಾಲ್ವರಿಗೆ ಹೋಂ ಕ್ವಾರಂಟೈನ್ ನೀಡಿದ್ದಾರೆ.
ಲಾಕ್ ಡೌನ್ ಸಂದರ್ಭ ವಿಟ್ಲ ಪಟ್ಟಣ ಪಂಚಾಯಿತಿ ವಿಟ್ಲದ ಸಲೂನ್, ಹೋಟೆಲ್ ಗಳಲ್ಲಿ ಕೆಲಸ ಮಾಡುತ್ತಿದ್ದ ಉತ್ತರಪ್ರದೇಶದ ನಿವಾಸಿಗಳನ್ನು ತಮ್ಮ ಊರಿಗೆ ಕಳುಹಿಸಿದ್ದರು. ಇದೀಗ ಅಲ್ಲಿಂದ ಆಗಮಿಸಿದ ವಿಟ್ಲದ ಅಡ್ಡದ ಬೀದಿಯಲ್ಲಿರುವ ಸಲೂನ್ ನ ನಾಲ್ವರು ವಿಟ್ಲಕ್ಕೆ ಆಗಮಿಸಿದ್ದಾರೆ. ಅವರ ಪೈಕಿ ಮೂವರು ಇಂದು ಅಡ್ಡದಬೀದಿಯಲ್ಲಿರುವ ಸಲೂನ್ ಗೆ ಕೆಲಸಕ್ಕೆ ಹಾಜರಾಗಿದ್ದರು. ಈ ಬಗ್ಗೆ ಪಡೆದ ವಿಟ್ಲ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಮಾಲಿನಿ, ಕಂದಾಯ ನಿರೀಕ್ಷಕ ಪಕೀರ ಮೂಲ್ಯ ಮತ್ತು ಸಿಬ್ಬಂದಿಗಳು ಅಲ್ಲಿಗೆ ತೆರಳಿ ವಿಚಾರಣೆ ನಡೆಸಿ, ಸಲೂನ್ ಗೆ ಬೀಗ ಜಡಿದಿದ್ದಾರೆ. ಕೆಲಸದವರನ್ನು ಮೇಗಿನಪೇಟೆಯಲ್ಲಿರುವ ಮನೆಯಲ್ಲಿ ಕ್ವಾರಂಟೈನ್ ಮಾಡಿದ್ದಾರೆ.
ಮೂರು ತಿಂಗಳ ಹಿಂದೆ ಅವರವರ ಊರಿಗೆ ಕಳುಹಿಸಲಾಗಿದ್ದರೂ ಟ್ರೈನ್ ಇಲ್ಲದೇ ಮತ್ತೆ ಅವರು ಹೇಗೆ ಊರಿಗೆ ಮರಳಿದ್ದಾರೆ ಎಂಬ ಪ್ರಶ್ನೆ ಜನರಲ್ಲಿ ಮೂಡಿದೆ.