ವಿಟ್ಲ: ಕೆ ಎಸ್ ಆರ್ ಟಿ ಸಿ ಬಸ್ ಚಾಲಕನ ನಿರ್ಲಕ್ಷ್ಯ ಮತ್ತು ಅಜಾಗರೂಕತೆಯಿಂದ ಬಸ್ ಚಲಾಯಿಸಿದ ಪರಿಣಾಮ ಬಸ್ಸಿನ ಸೀಟಿನಲ್ಲಿ ಕುಳಿತಿದ್ದ ಮಹಿಳೆಯೋರ್ವರು ಹೊರಗೆ ಎಸೆಯಲ್ಪಟ್ಟು ಡಾಮಾರು ರಸ್ತೆಗೆ ಬಿದ್ದು ಗಂಭೀರ ಗಾಯಗೊಂಡಿರುವ ಘಟನೆ ಬಂಟ್ವಾಳ ತಾಲೂಕಿನ ಕೇಪು ಗ್ರಾಮದ ಕರವೀರ ಅಂಗನವಾಡಿ ಬಳಿ ನಡೆದಿದೆ.

ಬಂಟ್ವಾಳ ತಾಲೂಕು ಕೇಪು ಗ್ರಾಮದ ಮೈರಕವೀರದವರಾದ ಪುಷ್ಪಾವತಿ ಎಂಬವರು ಫೋಟೋ ತೆಗೆಸಿಕೊಳ್ಳಲೆಂದು ವಿಟ್ಲ ಪೇಟೆಗೆ ಹೋಗಿ ತಮ್ಮ ಮಗಳು ಮತ್ತು ಮೊಮ್ಮಗಳೊಂದಿಗೆ ವಾಪಸು ಮನೆಗೆ ತೆರಳಲು ಕೆ ಎಸ್ ಆರ್ ಟಿ ಸಿ ಬಸ್ಸಿನಲ್ಲಿ ಬರುತ್ತಿರುವಾಗ ಕರವೀರ ಅಂಗನವಾಡಿ ಬಳಿಯ ತಿರುವಿನಲ್ಲಿ ಚಾಲಕನ ನಿರ್ಲಕ್ಷ್ಯತನದಿಂದ ಬಸ್ ಚಲಾಯಿಸಿದ ಪರಿಣಾಮ ಸೀಟಿನಲ್ಲಿ ಕುಳಿತಿದ್ದ ಪುಷ್ಪಾವತಿಯವರು ಬಸ್ಸಿನಿಂದ ಹೊರಕ್ಕೆ ಎಸೆಯಲ್ಪಟ್ಟು ರಸ್ತೆಗೆ ಬಿದ್ದಿದ್ದರು.

ಡಾಮಾರು ರಸ್ತೆಗೆ ಬಿದ್ದ ಪರಿಣಾಮ ಪುಷ್ಪಾವತಿಯವರು ಗಂಭೀರ ಗಾಯಗೊಂಡಿದ್ದಾರೆ. ಇವರನ್ನು ವಿಟ್ಲದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಪ್ರಥಮ ಚಿಕಿತ್ಸೆ ನೀಡಿ, ಹೆಚ್ಚಿನ ಚಿಕಿತ್ಸೆಗಾಗಿ ಪುತ್ತೂರು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.ಈ ಘಟನೆಯ ಬಗ್ಗೆ ವಿಟ್ಲ ಪೊಲೀಸ್ ಠಾಣೆಯಲ್ಲಿ ಕೇಸು ದಾಖಲಾಗಿದೆ.









