Friday, March 29, 2024
spot_imgspot_img
spot_imgspot_img

ವಿಟ್ಲ: ಶಿಕ್ಷಣ ಅಧಿಕಾರಿಗಳ ಮತ್ತು ಜನಪ್ರತಿನಿಧಿಗಳ ದಿವ್ಯ ನಿರ್ಲಕ್ಷ್ಯ, 92 ವರ್ಷಗಳ ಇತಿಹಾಸ ಹೊಂದಿದ ಸರಕಾರಿ ಶಾಲೆಯ ದುಸ್ಥಿತಿ..!

- Advertisement -G L Acharya panikkar
- Advertisement -

ವಿಟ್ಲ: ಕಟ್ಟಡದ ಮೇಲ್ಛಾವಣಿ ಕುಸಿತ, ಅತಂತ್ರದಲ್ಲಿರುವ ವಿದ್ಯಾರ್ಥಿಗಳು.ಇನ್ನೂ ಕುಸಿಯುವ ಹಂತದಲ್ಲಿರುವ ಕೊಠಡಿಗಳಲ್ಲಿಯೇ 96 ಪುಟಾಣಿಗಳ ವಿದ್ಯಾಭ್ಯಾಸ.! ಶತಮಾನದತ್ತ ದಾಪುಗಾಲು ಇಡುತ್ತಿರುವ ಶಾಲೆಯ ದುಸ್ಥಿತಿ ಕೇಳೋರೇ ಇಲ್ಲ. 92ವರ್ಷಗಳನ್ನು ಪೂರೈಸಿದ ಬಂಟ್ವಾಳ ತಾಲೂಕು ಕೊಳ್ನಾಡು ಗ್ರಾಮದ ಕುಳಾಲು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ದುಸ್ಥಿತಿ ಸಂಬಂಧಪಟ್ಟ ಇಲಾಖೆಗೆ ಕಾಣುತ್ತಿಲ್ಲ..!

ರಾತ್ರೋ ರಾತ್ರಿ ಕುಸಿದ ಮೇಲ್ಛಾವಣಿ ತಪ್ಪಿದ ಭಾರೀ ದುರಂತ : ಕುಸಿಯುವ ಹಂತದಲ್ಲಿರುವ ನಾಲ್ಕು ಕೊಠಡಿಗಳನ್ನು ತೆರವುಗೊಳಿಸಿ ಆರು ಹೊಸ ಕೊಠಡಿಗಳನ್ನು ನೀಡುವಂತೆ ಶಿಕ್ಷಣ ಇಲಾಖೆಗೆ , ಶಾಸಕರಿಗೆ 2019ರಿಂದ ಮನವಿ ನೀಡುತ್ತಿದ್ದರೂ, ಈವರೆಗೂ ಪ್ರಯೋಜನವಾಗಿಲ್ಲ. ಅಪಾಯದ ಮುನ್ಸೂಚನೆ ಅರಿತ ಶಾಲಾ ಶಿಕ್ಷಕ ವೃಂದ, ಎಸ್.ಡಿ.ಎಂ.ಸಿ. ಸಮಿತಿಯವರು ಮೂರು ದಿನಗಳ ಹಿಂದಷ್ಟೇ ನಲಿ-ಕಲಿ ತರಗತಿಯ ಪುಟಾಣಿಗಳನ್ನು ಬೇರೊಂದು ತರಗತಿಗೆ ವರ್ಗಾಯಿಸಿದ್ದರು. ಪುಟಾಣಿಗಳ ಅದೃಷ್ಟವೋ ಎಂಬಂತೆ ಶುಕ್ರವಾರ ರಾತ್ರಿ ಕೊಠಡಿಯ ಮೇಲ್ಛಾವಣಿ ಕುಸಿದು ನೆಲಕಚ್ಚಿದ್ದು ಇನ್ನಷ್ಟು ಕುಸಿಯುವ ಸ್ಥಿತಿಯಲ್ಲಿದೆ.

ಈ ಬಗ್ಗೆ ಮಾಧ್ಯಮ ಜೊತೆ SDMC ಅಧ್ಯಕ್ಷ ಶರೀಫ್ ಕುಳಾಲು ಹೊಸಮನೆ ಮಾತನಾಡುತ್ತಾ, ಕುಸಿದು ಬೀಳುವ ಹಂತದಲ್ಲಿರುವ ಕಟ್ಟಡಗಳ ದುರಸ್ತಿಗೊಳಿಸುವಂತೆ 2019ರಲ್ಲೇ ಬಂಟ್ವಾಳ ಶಿಕ್ಷಣ ಇಲಾಖೆಗೆ, ಸ್ಥಳೀಯ ಶಾಸಕರಿಗೆ ಪದೇ ಪದೇ ಮನವಿ ನೀಡಿದ್ದೇವೆ. ಈವರೆಗೂ ಯಾವುದೇ ಪ್ರಯೋಜನವಾಗಿಲ್ಲ. ಕಳೆದ ವರ್ಷ ಕೊಳ್ನಾಡು ಪಂಚಾಯತ್ ಉಪಾಧ್ಯಕ್ಷ ಸುಭಾಶ್ಚಂದ್ರ ಶೆಟ್ಟಿಯವರು ಒಂದು ಕೊಠಡಿಯ ದುರಸ್ತಿ ಕಾರ್ಯ ನಡೆಸಿಕೊಟ್ಟಿದ್ದಾರೆ. ಸ್ಥಳೀಯ ವಾರಾಹಿ ಯುವಕ ಸಂಘದ ನೇತೃತ್ವದಲ್ಲಿ ಐದು ವರ್ಷಗಳ ಹಿಂದೆ ಶಾಲಾ ಮಕ್ಕಳ ಅನುಕೂಲಕ್ಕಾಗಿ ಟೆಂಪೋ ವ್ಯವಸ್ಥೆಯನ್ನು ಕೊಡುಗೆ ನೀಡಿದ್ದರು. ಊರಿನ ವಿದ್ಯಾಭಿಮಾನಿಗಳು ಸಹಕಾರ ನೀಡುತ್ತಿರುವ ಕಾರಣ ಶಾಲೆ ನಡೆಯುವಂತಾಗಿದೆ. ಸರಕಾರ ಮತ್ತು ಶಿಕ್ಷಣ ಇಲಾಖೆ ಸರಕಾರಿ ಶಾಲೆಯನ್ನು ಉಳಿಸಿ, ಬೆಳೆಸಿ ಎಂದು ಪ್ರಚಾರಕ್ಕಾಗಿ ಹೇಳುತ್ತಿದೆಯೋ ಹೊರತು ಅನುದಾನ ಬಿಡುಗಡೆ ಮಾಡಲು ಹಿಂಜರಿಯುತ್ತಿದೆ ಎಂದು ಆರೋಪಿಸಿದರು.

ಇದೇ ಸಂದರ್ಭ ಶಾಲಾ ಮುಖ್ಯ ಶಿಕ್ಷಕಿ ತಿಮ್ಮು ಮಾತನಾಡುತ್ತಾ, 96 ವಿದ್ಯಾರ್ಥಿಗಳನ್ನು ಹೊಂದಿರುವ ನಮ್ಮ ಶಾಲೆಗೆ ಕನಿಷ್ಠ ಆರು ಕೊಠಡಿಗಳನ್ನಾದರೂ ಸರಕಾರ ನೀಡಿದಲ್ಲಿ ವ್ಯವಸ್ಥಿತವಾಗಿ ಶಾಲೆಯನ್ನು ನಡೆಸಬಹುದಾಗಿದೆ. ಮೂರು ವರ್ಷಗಳಿಂದ ಕಟ್ಟಡದ ಮೇಲ್ಛಾವಣಿ ಕುಸಿಯುವ ಹಂತದಲ್ಲಿದೆ ಎಂದು ಮನವಿ ನೀಡುತ್ತಿದ್ದರೂ ನಮ್ಮ ಬೇಡಿಕೆಗೆ ಸ್ಪಂದಿಸಿಲ್ಲ. ಇದೀಗ ಮೂರು ತರಗತಿಗಳು ನಡೆಯುತ್ತಿದ್ದ ಕಟ್ಟಡದ ಮೇಲ್ಛಾವಣಿ ಶುಕ್ರವಾರ ರಾತ್ರಿ ಕುಸಿದು ಬಿದ್ದಿದೆ. ಹಗಲು ಹೊತ್ತಲ್ಲಿ ದುರಂತ ನಡೆಯುತ್ತಿದ್ದರೆ ಪುಟಾಣಿಗಳ ಅವಸ್ಥೆ ಹೇಳತೀರದಾಗುತ್ತಿತ್ತು ಎಂದು ಕಳವಳ ವ್ಯಕ್ತಪಡಿಸಿದ್ದಾರೆ. ಇನ್ನಾದರೂ ತಕ್ಷಣವೇ ಸರಕಾರದ ಆಡಳಿತ ಯಂತ್ರ ಎಚ್ಚೆತ್ತುಕೊಂಡು ಆರು ಕೊಠಡಿಗಳನ್ನು ನೀಡುವ ಮೂಲಕ ಶತಮಾದತ್ತ ಹೆಜ್ಜೆಹಾಕುತ್ತಿರುವ ಕುಳಾಲು ಸರಕಾರಿ ಶಾಲೆಯನ್ನು ಉಳಿಸಬೇಕಾಗಿದೆ.

vtv vitla
- Advertisement -

Related news

error: Content is protected !!