Thursday, July 23, 2026
spot_imgspot_img
spot_imgspot_img

ವಿಟ್ಲ: ದಶಕಗಳ ಕಾಲದ ಬೊಬ್ಬೆಕೇರಿ ರಸ್ತೆ ಸಂಕಷ್ಟಕ್ಕೆ ಕೊನೆಗೂ ಮುಕ್ತಿ

- Advertisement -
- Advertisement -

60 ಲಕ್ಷ ರೂ ಅನುದಾನದಲ್ಲಿ ರಸ್ತೆ ಕಾಂಕ್ರೀಟ್ ಗೆ ಶಾಸಕ ಅಶೋಕ್ ಕುಮಾರ್‍ ರೈ ಶಿಲಾನ್ಯಾಸ

ವಿಟ್ಲ ಪಟ್ಟಣ ಪಂಚಾಯತ್ ವ್ಯಾಪ್ತಿಯ ವಿಟ್ಲ–ಮಂಗಳೂರು ಮುಖ್ಯ ರಸ್ತೆಯ ಬೊಬ್ಬೆಕೇರಿ ಭಾಗದಲ್ಲಿ ಹಲವು ದಶಕಗಳಿಂದ ಸಾರ್ವಜನಿಕರನ್ನು ಕಾಡುತ್ತಿದ್ದ ರಸ್ತೆ ಸಮಸ್ಯೆಗೆ ಕೊನೆಗೂ ಪರಿಹಾರ ದೊರಕಿದೆ. 60 ಲಕ್ಷ ರೂ. ಅನುದಾನದಲ್ಲಿ ಕೈಗೆತ್ತಿಕೊಳ್ಳಲಾಗಿರುವ ವಿಟ್ಲ–ಬೊಬ್ಬೆಕೇರಿ ರಸ್ತೆ ಕಾಂಕ್ರೀಟ್ ಕಾಮಗಾರಿಗೆ ಶಾಸಕ ಅಶೋಕ್ ಕುಮಾರ್‍ ರೈ ಇಂದು ಶಿಲಾನ್ಯಾಸ ನೆರವೇರಿಸಿದರು.

ವರ್ಷಗಳ ಕಾಲ ರಸ್ತೆ ಅಭಿವೃದ್ಧಿ ಕಾಮಗಾರಿ ವಿವಾದ ಹಾಗೂ ವಿಳಂಬಕ್ಕೆ ಒಳಗಾಗಿದ್ದು, ಮಳೆಗಾಲದ ವೇಳೆ ರಸ್ತೆ ಸಂಪೂರ್ಣ ಜಲಾವೃತಗೊಂಡು ವಾಹನ ಸವಾರರು ಹಾಗೂ ಪಾದಚಾರಿಗಳು ತೀವ್ರ ಸಂಕಷ್ಟ ಅನುಭವಿಸುತ್ತಿದ್ದರು. ಸರಿಯಾದ ಚರಂಡಿ ವ್ಯವಸ್ಥೆಯ ಕೊರತೆಯಿಂದ ಮಳೆನೀರು ರಸ್ತೆಯ ಎರಡೂ ಬದಿಗಳಲ್ಲಿ ಹಾಗೂ ರಸ್ತೆಯುದ್ದಕ್ಕೂ ನಿಂತು ಸಂಚಾರ ಅಸ್ತವ್ಯಸ್ತವಾಗುತ್ತಿತ್ತು.

ಮಳೆಗಾಲ ಆರಂಭವಾದರೆ ಸಾಕು, ವಿಟ್ಲ–ಬೊಬ್ಬೆಕೇರಿ ರಸ್ತೆಯ ಕರ್ನಾಟಕ ಬ್ಯಾಂಕ್ ಮುಭಾಗದಲ್ಲಿ ಈಜುಕೊಳದಂತಾಗುವ ಪರಿಸ್ಥಿತಿ ನಿರ್ಮಾಣವಾಗುತ್ತಿತ್ತು. ವಾಹನ ಸವಾರರು, ಶಾಲಾ ಮಕ್ಕಳು ಹಾಗೂ ಸಾರ್ವಜನಿಕರು ಪ್ರತಿದಿನ ಪರದಾಡುವಂತ ಸ್ಥಿತಿ ಎದುರಾಗುತ್ತಿತ್ತು. ಹಲವಾರು ಅಪಘಾತಗಳು ಸಂಭವಿಸಿ ಸಾವು–ನೋವುಗಳಿಗೂ ಕಾರಣವಾಗಿರುವ ಬಗ್ಗೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದರು.

ಈ ಕುರಿತು ಇಂದು ನಡೆದ ಶಂಕುಸ್ಥಾಪನೆ ಕಾರ್ಯಕ್ರಮದಲ್ಲಿ ಮಾತನಾಡಿದ ಶಾಸಕ ಅಶೋಕ್ ಕುಮಾರ್ ರೈ, “ಈ ಹಿಂದೆ ಅಧಿಕಾರಿಗಳು ರಸ್ತೆ ಡಾಂಬರೀಕರಣ ಹಾಗೂ ರಸ್ತೆ ಅಗಲೀಕರಣಕ್ಕೆ ಸಾಕಷ್ಟು ಪ್ರಯತ್ನ ಮಾಡಿದರೂ ಕೆಲವರು ತಡೆ ತಂದಿದ್ದರು. ಮಳೆಗಾಲದಲ್ಲಿ ಇಲ್ಲಿ ಅನೇಕ ಅಪಘಾತಗಳು ಸಂಭವಿಸಿದ್ದು, ಶಾಲಾ ಮಕ್ಕಳು ನಡೆದುಕೊಂಡು ಹೋಗಲೂ ಆಗದ ಪರಿಸ್ಥಿತಿ ನಿರ್ಮಾಣವಾಗಿತ್ತು. ಕಾಮಗಾರಿಗೆ ತಡೆ ತಂದವರೊಂದಿಗೆ ಮಾತುಕತೆ ನಡೆಸಿ ಮನವರಿಕೆ ಮಾಡುವ ಪ್ರಯತ್ನ ಮಾಡಿದ್ದೇವೆ. ಇದೀಗ ಸರ್ಕಾರದಿಂದ 60 ಲಕ್ಷ ರೂ. ಅನುದಾನ ಮಂಜೂರು ಮಾಡಿಸಿ, ರಸ್ತೆ ಎರಡೂ ಬದಿಯಲ್ಲಿ ಚರಂಡಿ ಹಾಗೂ ಕಾಂಕ್ರೀಟ್ ರಸ್ತೆ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಿದ್ದೇವೆ. ಮಳೆಗಾಲ ಆರಂಭವಾಗುವ ಮೊದಲು ಕಾಮಗಾರಿ ಪೂರ್ಣಗೊಳಿಸುವ ಗುರಿ ಹೊಂದಿದ್ದೇವೆ,” ಎಂದು ಹೇಳಿದರು.

ವಿಟ್ಲ ಭಾಗದ ಅಭಿವೃದ್ಧಿಗೆ ಸಾರ್ವಜನಿಕರು ಸಹಕಾರ ನೀಡಬೇಕು ಎಂದು ಇದೇ ವೇಳೆ ಅವರು ಮನವಿ ಮಾಡಿದರು.

- Advertisement -

Related news

error: Content is protected !!