ಮತ್ತೆ ಬಾಲ ಬಿಚ್ಚಿದ ಮಾಜಿ ರೌಡಿ ಶೀಟರ್ ಜಗದೀಶ್ ಜೈನ್; ಆರೋಪಿಯ ಹೆಡೆಮುರಿ ಕಟ್ಟಿದ ವಿಟ್ಲ ಪೊಲೀಸರು


ದ್ವೇಷದ ಹಿನ್ನೆಲೆಯಲ್ಲಿ ಬೊಲೆರೋ ಜೀಪಿನಿಂದ ಗುದ್ದಿ ಕೊಲೆ ಮಾಡಲು ಯತ್ನಿಸಿದ ಘಟನೆ ಬಂಟ್ವಾಳ ತಾಲೂಕಿನ ಮಾಣಿ ಗ್ರಾಮದ ಗಾಂಧಿ ಮೈದಾನದಲ್ಲಿ ನಡೆದಿದೆ. ಆರೋಪಿಯನ್ನು ಮಾಜಿ ರೌಡಿ ಶೀಟರ್ ಜಗದೀಶ್ ಜೈನ್ ಎಂದು ಗುರುತಿಸಲಾಗಿದೆ.
ಮಾಣಿ ಜಂಕ್ಷನ್ ನ ಗಾಂಧಿ ಮೈದಾನದಲ್ಲಿ ದೂರುದಾರರಾದ ವಿಕೇಶ್ ಪರವಾನಿಗೆ ಪಡೆದು ತಾತ್ಕಾಲಿಕ ಪಟಾಕಿ ಅಂಗಡಿ ಹಾಕಿದ್ದರು. ನ.9 ರ ಸೋಮವಾರ ಸಂಜೆ 4.15 ರ ಸುಮಾರಿಗೆ ವಿಕೇಶ್ ಅವರು ಪಟಾಕಿ ಅಂಗಡಿ ಬಳಿ ನಿಂತಿದ್ದರು. ಈ ವೇಳೆ ಮಾಣಿ ಜಂಕ್ಷನ್ ನಿಂದ ಪುತ್ತೂರು ಕಡೆಗೆ ಹೋಗುವ ಡಾಮಾರು ರಸ್ತೆ ಮೂಲಕ ಗಾಂಧಿ ಮೈದಾನದ ಒಳಗೆ ಮೆರೂನ್ ಬಣ್ಣದ ಬೊಲೆರೋ ವಾಹನದಲ್ಲಿ ಬಂದ ಆರೋಪಿ ಜಗದೀಶ್ ಜೈನ್, ನೇರವಾಗಿ ವಿಕೇಶ್ ಅವರನ್ನು ಗುರಿಯಾಗಿಸಿಕೊಂಡು ಅತಿವೇಗದಿಂದ ಗುದ್ದಲು ಮುಂದಾಗಿದ್ದಾನೆ. ಇದನ್ನು ಕಂಡ ವಿಕೇಶ್ ಕೂಡಲೇ ಬೊಲೆರೋದ ಬಾನೆಟ್ ಮೇಲೆ ಹಾರಿ ಪಕ್ಕದ ಮಣ್ಣಿನ ದಿಬ್ಬದ ಮೇಲೆ ಬಿದ್ದು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ವಿಕೇಶ್ ರವರ ಎಡಕಾಲಿನ ಮೊಣಕಾಲಿಗೆ ಗುದ್ದಿದ ಗಾಯವಾಗಿದೆ.
ಅದೇ ಸಮಯಕ್ಕೆ ಅಲ್ಲಿದ್ದ ವಿಕೇಶ್ ಅವರ ಸಂಬಂಧಿ ತೀರ್ಥಪ್ರಸಾದ್ ಬೊಬ್ಬೆ ಹೊಡೆದುಕೊಂಡು ಓಡಿ ಬಂದಾಗ, ಅವರಿಗೂ ಗುದ್ದಲು ಯತ್ನಿಸಿದ್ದಾನೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ನಂತರ ಸ್ಥಳದಲ್ಲಿದ್ದ ಸಾರ್ವಜನಿಕರು ಸೇರುವುದನ್ನು ಕಂಡ ಆರೋಪಿ, “ಈ ದಿನ ನಿನ್ನ ಸಮಯ ಚೆನ್ನಾಗಿದೆ, ನೀನು ಬದುಕಿದ್ದೀಯಾ, ಮುಂದಿನ ದಿನ ಇದೇ ರೀತಿ ಜೀಪಿನಿಂದ ಗುದ್ದಿ ಕೊಲೆ ಮಾಡಿಯೇ ತೀರುತ್ತೇನೆ” ಎಂದು ಜೀವ ಬೆದರಿಕೆ ಹಾಕಿ ಬೊಲೆರೋ ಸಮೇತ ಪರಾರಿಯಾಗಿದ್ದಾನೆ.
ಸುಮಾರು 2 ತಿಂಗಳ ಹಿಂದೆ ಆಟೋ ಚಾಲಕರೊಬ್ಬರಿಗೆ ಜಗದೀಶ್ ಜೈನ್ ಹಲ್ಲೆ ನಡೆಸಲು ಯತ್ನಿಸಿದಾಗ, ವಿಕೇಶ್ ಅವರು ಆಟೋ ಚಾಲಕರ ಪರ ನಿಂತಿದ್ದರು. ಇದೇ ದ್ವೇಷದಿಂದ ಆರೋಪಿ ಈ ಕೃತ್ಯ ಎಸಗಿದ್ದಾನೆ ಎಂದು ತಿಳಿದು ಬಂದಿದೆ.
ಈ ಕುರಿತು ವಿಟ್ಲ ಪೊಲೀಸ್ ಠಾಣೆಯಲ್ಲಿ ಅ.ಕ್ರ 232/2026, BNS ಸೆಕ್ಷನ್ 109, 118(1), 352, 351(2) ರಂತೆ ಪ್ರಕರಣ ದಾಖಲಾಗಿ ಆರೋಪಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಪ್ರಕರಣದ ಆರೋಪಿತ ಜಗದೀಶ್ ಜೈನ್ ನನ್ನು ದಸ್ತಗಿರಿ ಮಾಡಿ ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು ನ್ಯಾಯಾಲಯವು ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಿರುತ್ತದೆ.
ಆರೋಪಿ ಜಗದೀಶ್ ಜೈನ್ ಈ ಹಿಂದೆ ಕೊಲೆ ಮತ್ತು ಇನ್ನಿತರ ಪ್ರಕರಣಗಳಲ್ಲಿ ಆರೋಪಿಯಾಗಿದ್ದು ವಿಟ್ಲ ಠಾಣೆಯಲ್ಲಿ ರೌಡಿಶೀಟರ್ ಆಗಿರುತ್ತಾನೆ.








