ಹೊಸದಿಲ್ಲಿ: ಇಂಧನ ಬಿಕ್ಕಟ್ಟಿನ ಹಿನ್ನೆಲೆ ಪ್ರಧಾನಿ ನರೇಂದ್ರ ಮೋದಿಯವರ ಮನವಿಗೆ ಅನುಗುಣವಾಗಿ ದಿಲ್ಲಿ ಸರಕಾರ ಸರಣಿ ಕ್ರಮಗಳನ್ನು ಗುರುವಾರ ಪ್ರಕಟಿಸಿದೆ.
ಹೊಸ ನಿಯಮಗಳ ಪ್ರಕಾರ, ಎಲ್ಲಾ ದಿಲ್ಲಿ ಸರಕಾರಿ ನೌಕರರು ಪ್ರತಿ ವಾರ ಎರಡು ದಿನಗಳ ಕಾಲ ಮನೆಯಿಂದಲೇ ಕೆಲಸ ಮಾಡುತ್ತಾರೆ. ಪ್ರಯಾಣ ಮತ್ತು ಇಂಧನ ಬಳಕೆಯನ್ನು ಕಡಿಮೆ ಮಾಡಲು 50% ಅಧಿಕೃತ ಸಭೆಗಳನ್ನು ಆನ್‌ಲೈನ್‌ನಲ್ಲಿ ನಡೆಸುವುದಾಗಿ ಸರಕಾರ ಹೇಳಿದೆ.

ದಿಲ್ಲಿ ಸರಕಾರ ಮತ್ತು ದಿಲ್ಲಿ ಮುನ್ಸಿಪಲ್ ಕಾರ್ಪೊರೇಷನ್ (MCD) ಕೂಡ ಸಂಚಾರ ದಟ್ಟಣೆ ಮತ್ತು ಇಂಧನ ಬಳಕೆಯನ್ನು ಕಡಿಮೆ ಮಾಡಲು ಕಚೇರಿ ಸಮಯವನ್ನು ಬದಲಾಯಿಸಲಿವೆ.ಇದಲ್ಲದೆ ಸರಕಾರ ಅಧಿಕೃತ ವಾಹನಗಳ ಬಳಕೆ ಕಡಿಮೆ ಮಾಡಲು ನಿರ್ಧರಿಸಿದೆ. ಅಧಿಕಾರಿಗಳಿಗೆ ನೀಡುತ್ತಿದ್ದ ಪೆಟ್ರೋಲ್ ಮಿತಿಯನ್ನು ಶೇ.20ರಷ್ಟು ಕಡಿತಗೊಳಿಸಲಾಗಿದ್ದು, ಮಾಸಿಕ ಮಿತಿಯನ್ನು 200 ಲೀಟರ್‌ನಿಂದ ಇಳಿಸಲಾಗಿದೆ.
ಮುಂದಿನ ಆರು ತಿಂಗಳವರೆಗೆ ಯಾವುದೇ ಹೊಸ ವಾಹನಗಳನ್ನು ಖರೀದಿಸುವುದಿಲ್ಲ ಎಂದು ದಿಲ್ಲಿ ಸರಕಾರ ಘೋಷಿಸಿದೆ.
ಸರಕಾರಿ ನೌಕರರಲ್ಲಿ ಸಾರ್ವಜನಿಕ ಸಾರಿಗೆ ಬಳಕೆಯನ್ನು ಉತ್ತೇಜಿಸಲು, 58 ವಿಶೇಷ ಬಸ್ಸುಗಳ ವ್ಯವಸ್ಥೆಯನ್ನು ಮಾಡಲಾಗುವುದು ಎಂದು ಸರಕಾರ ತಿಳಿಸಿದೆ.







