Saturday, September 12, 2026
spot_imgspot_img
spot_imgspot_img

ಕಾಡುಕೋಣ ಹಾವಳಿ: ಅರಣ್ಯ ಇಲಾಖೆ ಕಾರ್ಯಾಚರಣೆಯಲ್ಲಿ ಭಾರಿ ಗಾತ್ರದ ಕಾಡುಕೋಣವನ್ನು ಸೆರೆ

- Advertisement -
- Advertisement -

ಚಿಕ್ಕಮಗಳೂರು : ಜಿಲ್ಲೆಯಲ್ಲಿ ಮಾನವ-ಕಾಡು ಪ್ರಾಣಿ ಸಂಘರ್ಷ ಹೆಚ್ಚಾಗಿದ್ದು, ಕಾಡಾನೆಗಳು ಮತ್ತು ಕಾಡುಕೋಣ ಹಾವಳಿಗೆ ರೈತರು ಹಾಗೂ ಗ್ರಾಮೀಣ ಭಾಗದ ಜನರು ನಲುಗಿ ಹೋಗಿದ್ದಾರೆ. ಜಿಲ್ಲೆಯ ಮಲೆನಾಡು ಭಾಗದಲ್ಲಿ ತೀವ್ರ ಹಾವಳಿ ಇಡುತ್ತಿರುವ 3 ಕಾಡುಕೋಣಗಳ ಸ್ಥಳಾಂತರಕ್ಕೆ ಸರಕಾರ ಆದೇಶಿಸಿದ್ದು, ಸದ್ಯ ಕಾಫಿನಾಡಿನಲ್ಲಿರುವ 3 ಕಾಡುಕೋಣಗಳ ಸ್ಥಳಾಂತರಕ್ಕೆ ಅರಣ್ಯ ಇಲಾಖೆ ಸಿಬ್ಬಂದಿ ಕಾರ್ಯಾಚರಣೆಗೆ ಇಳಿದಿದ್ದಾರೆ. ಶನಿವಾರ ಸಂಜೆ ಭಾರೀ ಗಾತ್ರದ ಕಾಡುಕೋಣವೊಂದನ್ನು ಸೆರೆ ಹಿಡಿದು ಶಿವಮೊಗ್ಗಕ್ಕೆ ಸ್ಥಳಾಂತರ ಮಾಡಲಾಗಿದೆ.

ಜಿಲ್ಲೆಯ ಮಲೆನಾಡು ಭಾಗದಲ್ಲಿ ಕಾಡುಕೋಣಗಳ ಸಂತತಿ ಹೆಚ್ಚಾಗಿದ್ದು, ಕೆಲ ಕಾಡುಕೋಣಗಳು ರೈತರ ತೋಟ, ಜಮೀನುಗಳಿಗೆ ದಾಳಿ ಇಟ್ಟು ಭಾರೀ ಉಪಟಳ ನೀಡುತ್ತಿವೆ. ಕಾಡುಕೋಣಗಳ ದಾಳಿಗೆ ಹಲವು ಮಂದಿ ರೈತರು, ಕೂಲಿ ಕಾರ್ಮಿಕರು ಬಲಿಯಾಗಿದ್ದು, ಕೆಲವರು ತೀವ್ರವಾಗಿ ಗಾಯಗೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಅವುಗಳನ್ನು ಸೆರೆ ಹಿಡಿದು ಸ್ಥಳಾಂತರ ಮಾಡಬೇಕು ಎಂಬ ಒತ್ತಾಯ ಸಾರ್ವಜನಿಕರಿಂದ ವ್ಯಕ್ತವಾಗಿತ್ತು.

ಈ ಹಿನ್ನೆಲೆಯಲ್ಲಿ ಮಧ್ಯಪ್ರದೇಶದ ಬಾಂಧವಗಡ ಹುಲಿ ಸಂರಕ್ಷಿತ ಪ್ರದೇಶಕ್ಕೆ ಕಳೆದ ವರ್ಷ ಜಿಲ್ಲೆಯ ಅರಣ್ಯ ಇಲಾಖೆ ಅಧಿಕಾರಿಗಳ ತಂಡ ಭೇಟಿ ನೀಡಿ ಈ ಬಗ್ಗೆ ಅಧ್ಯಯನ ನಡೆಸಿತ್ತು. ಚಿಕ್ಕಮಗಳೂರು ವೃತ್ತದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಯಶ್‍ಪಾಲ್ ಕ್ಷೀರಸಾಗರ ನೇತೃತ್ವದಲ್ಲಿ ಅಧಿಕಾರಿಗಳ ತಂಡ ಭೇಟಿ ನೀಡಿ ಅಧ್ಯಯನದ ವರದಿಯನ್ನು ಸರಕಾರಕ್ಕೆ ಸಲ್ಲಿಸಿತ್ತು. ಇದಕ್ಕೆ ರಾಜ್ಯ ಸರಕಾರ ಅನುಮೋದನೆ ನೀಡಿ ಜಿಲ್ಲೆಯ ಮಲೆನಾಡು ಭಾಗದಲ್ಲಿ ಉಪಟಳ ನೀಡುತ್ತಿದ್ದ ಮೂರು ಕಾಡುಕೋಣಗಳ ಸೆರೆಗೆ ಆದೇಶ ನೀಡಿತ್ತು.

ಎರಡು ದಿನಗಳಿಂದ ಕೊಪ್ಪ ಅರಣ್ಯ ವಿಭಾಗದಲ್ಲಿ ಕಾಡುಕೋಣಗಳ ಸೆರೆ ಕಾರ್ಯಾಚರಣೆ ಆರಂಭಿಸಿದ್ದ ಅರಣ್ಯ ಇಲಾಖೆ ಅಧಿಕಾರಿಗಳು, ಶನಿವಾರ ಸಂಜೆ ಚಿಕ್ಕಮಗಳೂರು ತಾಲೂಕಿನ ಶನಿವಾರ ಆಲ್ದೂರು ಅರಣ್ಯ ವಿಭಾಗದಲ್ಲಿ ಕಾರ್ಯಾಚರಣೆ ನಡೆಸಿದರು. ಅರೆನೂರು ಸಮೀಪದ ಹಕ್ಕಿಮಕ್ಕಿ ಸಮೀಪ ಆಗಾಗ್ಗೆ ಜಮೀನುಗಳಿಗೆ ನುಗ್ಗಿ ಬೆಳೆ ನಾಶ ಮಾಡುತ್ತಿದ್ದ ಕಾಡುಕೋಣವೊಂದಕ್ಕೆ ಸಂಜೆ 6ರ ಹೊತ್ತಿನಲ್ಲಿ ಅರಿವಳಿಕೆ ಚುಚ್ಚು ಮದ್ದು ನೀಡಿ ಸೆರೆ ಹಿಡಿಯಲಾಯಿತು. ವೈದ್ಯರಾದ ಡಾ.ರಮೇಶ್ ತಂಡ ಹಾಗೂ 100ಕ್ಕೂ ಹೆಚ್ಚು ಅರಣ್ಯ ಇಲಾಖೆ ಸಿಬ್ಬಂದಿ ಮಳೆಯ ನಡುವೆಯೇ ಕಾರ್ಯಾಚರಣೆ ನಡೆಸಿದರು.

ಕೊಪ್ಪ ಅರಣ್ಯ ವಿಭಾಗದಲ್ಲಿ ಶುಕ್ರವಾರ ನಡೆದ ಕಾರ್ಯಾಚರಣೆಯಲ್ಲಿ ಕಾಡುಕೋಣಕ್ಕೆ ಅರವಳಿಕೆ ನೀಡಲಾಗಿತ್ತು. ಆದರೆ, ಭಾರಿ ತೂಕದ ಕಾಡುಕೋಣವನ್ನು ಇಳಿಜಾರು ಪ್ರದೇಶದಿಂದ ರಸ್ತೆಗೆ ಸಾಗಿಸಲು ಸಾಧ್ಯವಾಗದ ಹಿನ್ನೆಲೆಯಲ್ಲಿ ಅದಕ್ಕೆ ಪ್ರಜ್ಞೆ ಬರುವ ಚುಚ್ಚು ಮದ್ದು ನೀಡಿ ಕಾಡಿಗೆ ಬಿಡಲಾಗಿತ್ತು. ಇದರ ಬೆನ್ನಲ್ಲೇ ಶನಿವಾರ ಮತ್ತೊಂದು ಕಾಡುಕೋಣವನ್ನು ಸೆರೆ ಹಿಡಿಯುವಲ್ಲಿ ಅರಣ್ಯ ಇಲಾಖೆ ಯಶಸ್ವಿಯಾಗಿದೆ. ಸೆರೆ ಹಿಡಿದ ಕಾಡುಕೋಣವನ್ನು ಶಿವಮೊಗ್ಗದ ಮೃಗಾಲಯಕ್ಕೆ ಸ್ಥಾಳಾಂತರ ಮಾಡಲಾಗಿದೆ.

- Advertisement -

Related news

error: Content is protected !!