

ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ದೋಣಿಗಲ್, ಎಡಕುಮೇರಿ ನಡುವೆ ಸಂಭವಿಸಿದ ಭೂಕುಸಿತದಿಂದಾಗಿ ಬೆಂಗಳೂರು-ಮಂಗಳೂರು ಮಧ್ಯೆ ರೈಲುಗಳ ಸಂಚಾರ ರದ್ದಾಗಿತ್ತು. ಇದೀಗ ರೈಲು ಹಳಿ ದುರಸ್ತಿ ಕಾರ್ಯ ಬಹುತೇಕ ಪೂರ್ಣಗೊಂಡಿದ್ದು, ನಿನ್ನೆಯಿಂದ ಗೂಡ್ಸ್ ರೈಲುಗಳ ಸಂಚಾರಕ್ಕಷ್ಟೇ ಅವಕಾಶ ನೀಡಲಾಗಿದೆ. ಶೀಘ್ರದಲ್ಲೇ ರೈಲುಗಳ ಪುನರ್ ಸಂಚಾರ ಸಾಧ್ಯತೆ ನಿರೀಕ್ಷೆ ಇದೆ.
ಜುಲೈ 26ರಿಂದ ಬೆಂಗಳೂರು-ಮಂಗಳೂರು ಮಾರ್ಗ ಬಂದ್ ಆಗಿತ್ತು. ಕಿ.ಮೀ ನಂ.63ರಲ್ಲಿ ರೈಲ್ವೆ ಹಳಿ ಮೇಲೆ ಗುಡ್ಡ ಕುಸಿದಿತ್ತು. ಸುಮಾರು 420ಕ್ಕೂ ಹೆಚ್ಚು ಕಾರ್ಮಿಕರು ಹಗಲು-ರಾತ್ರಿ ಶ್ರಮಿಸಿದ್ದಾರೆ. 11 ದಿನಗಳ ಕಾಲ ಕಾರ್ಯಾಚರಣೆ ನಡೆಸಿದ ಇಲಾಖೆ ಕಾರ್ಮಿಕರು ಹಳಿ ಮರುಸ್ಥಾಪಿಸಿದ್ದಾರೆ. ಕೇವಲ ಸಣ್ಣಪುಟ್ಟ ದುರಸ್ತಿ ಕೆಲಸಗಳು ಮಾತ್ರ ಬಾಕಿ ಇವೆ. ಅಪಾಯವಿಲ್ಲದೆ ಮರುಸ್ಥಾಪನೆ ಮಾಡಿದ ರೈಲ್ವೆ ಹಳಿ ಮೇಲೆ ಗೂಡ್ಸ್ ರೈಲು ಪ್ರಾಯೋಗಿಕವಾಗಿ ಸಂಚರ ಮಾಡಲಾಗಿದೆ.
ಭೂಕುಸಿತ ಸಂಭವಿಸಿದ ಸ್ಥಳದಲ್ಲಿ ತಡೆಗೋಡೆ ನಿರ್ಮಾಣ ಕಾರ್ಯ ಶನಿವಾರ ಮುಕ್ತಾಯಗೊಂಡಿದೆ. ರೈಲು ಮಾರ್ಗ ದುರಸ್ತಿ ಕಾರ್ಯ ಬಹುತೇಕ ಪೂರ್ಣಗೊಂಡಿದೆ. ಗೋಡೆಯ ನಿರ್ಮಾಣದಲ್ಲಿ ಕಬ್ಬಿಣವನ್ನು ಬಳಸಲಾಗುತ್ತದೆ. ಪ್ರಸ್ತುತ ಹೆಚ್ಚುವರಿ ಹಂತದ ಬಂಡೆಗಳನ್ನು ಜೋಡಿಸುವ ಕಾರ್ಯ ಪ್ರಗತಿಯಲ್ಲಿದೆ.
ನಿರಂತರ ಸುರಿದ ಮಳೆಯಿಂದಾಗಿ ಯಡಕುಮೇರಿ ಕಡಗರವಳ್ಳಿ ಮಧ್ಯೆ ಭೂಕುಸಿತ ಸಂಭವಿಸಿ ರೈಲು ಹಳಿಗಳ ಮೇಲೆ ಮಣ್ಣು ಬಿದ್ದ ಪರಿಣಾಮ ಜುಲೈ 26ರಿಂದ ಸುಮಾರು 14 ರೈಲುಗಳ ಸಂಚಾರ ಸ್ಥಗಿತಗೊಂಡಿತ್ತು.ಶೀಘ್ರದಲ್ಲೇ ಪ್ರಯಾಣಿಕರ ರೈಲುಗಳ ಸಂಚಾರಕ್ಕೆ ಅವಕಾಶ ನೀಡಲಾಗುವುದು ಎಂದು ರೈಲ್ವೆ ಇಲಾಖೆಗಳು ಮೂಲಗಳು ತಿಳಿಸಿವೆ.








