
ಬಂಟ್ವಾಳ: ಕ್ರಷರ್‌ನ ಲೈಟಿಂಗ್ಸ್ ಸರಿಪಡಿಸುವ ವೇಳೆ ಸಂಭವಿಸಿದ ಅಪಘಾತವೊಂದು ಯುವ ಕಾರ್ಮಿಕನ ಪ್ರಾಣ ಕಿತ್ತುಕೊಂಡ ಘಟನೆ ಬಂಟ್ವಾಳ ತಾಲೂಕಿನ ಅನಂತಾಡಿ ಗ್ರಾಮದ ತುಂಬೆಕೋಡಿಯಲ್ಲಿ ನಡೆದಿದೆ.

ಅನಂತಾಡಿ ಗ್ರಾಮದ ತುಂಬೆಕೋಡಿಯ ಆರ್.ಬಿ. ಕ್ರಷರ್‌ನಲ್ಲಿ ಕೆಲಸ ನಿರ್ವಹಿಸುತ್ತಿದ್ದ ಮೆಥನ್ ಮಲ್ಲಿಕ್ (22) ಎಂಬ ಯುವ ಕಾರ್ಮಿಕನು ಕೆಲಸದ ನಿಮಿತ್ತ ಗೋಡೆಗೆ ಏಣಿ ಇಟ್ಟು ಮೇಲೇರಿ ಲೈಟಿಂಗ್ ರಿಪೇರಿ ಮಾಡುತ್ತಿದ್ದನು. ಕೆಲಸ ಮುಗಿಸಿ ಮಧ್ಯಾಹ್ನ ಸುಮಾರು 12 ಗಂಟೆಯ ವೇಳೆಗೆ ಕೆಳಗೆ ಇಳಿಯುವಾಗ ಏಣಿಗೆ ಇಟ್ಟ ಕಾಲು ಜಾರಿ, ಸುಮಾರು 10 ಅಡಿ ಎತ್ತರದಿಂದ ಏಣಿಯೊಂದಿಗೆ ಕೆಳಗೆ ಬಿದ್ದಿದ್ದಾನೆ. ಕೆಳಗೆ ಕಟ್ಟಿದ್ದ ಕೆಂಪುಕಲ್ಲಿನ ಗೋಡೆಯ ಮೇಲೆ ಬಿದ್ದ ಪರಿಣಾಮ ಆತನ ಎದೆ, ಸೊಂಟ ಹಾಗೂ ಕಾಲುಗಳಿಗೆ ತೀವ್ರ ಗಾಯಗಳಾಗಿವೆ. ತಕ್ಷಣ ಸಹಕಾರ್ಮಿಕರು ಆತನನ್ನು ಮಂಗಳೂರಿನ ಎ.ಜೆ. ಆಸ್ಪತ್ರೆಗೆ ಸಾಗಿಸಿದರೂ, ಚಿಕಿತ್ಸೆ ಫಲಕಾರಿಯಾಗದೆ ರಾತ್ರಿ ವೇಳೆಗೆ ಮೆಥನ್ ಮಲ್ಲಿಕ್ ಮೃತಪಟ್ಟಿದ್ದಾನೆ ಎಂದು ತತಿಳಿದು ಬಂದಿದೆ.
ಈ ಕುರಿತು ಮೂಲತಃ ಒಡಿಸ್ಸಾ ರಾಜ್ಯದ ನಿವಾಸಿಯಾಗಿದ್ದು, ಪ್ರಸ್ತುತ ತುಂಬೆಕೋಡಿಯಲ್ಲಿ ವಾಸವಾಗಿರುವ ಆಕೇಶ್ ಪ್ರಧಾನ್ (20) ಅವರು ವಿಟ್ಲ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಪ್ರಕರಣವನ್ನು ಅಸಹಜ ಸಾವು (ಯುಡಿಆರ್) ಎಂದು ದಾಖಲಿಸಿಕೊಂಡು ಪೊಲೀಸರು ತನಿಖೆ ಕೈಗೊಂಡಿದ್ದಾರೆ.







