Wednesday, July 22, 2026
spot_imgspot_img
spot_imgspot_img

ಡೇಟಿಂಗ್ ಆ್ಯಪ್‌ನಲ್ಲಿ ಪರಿಚಯ; ಭೇಟಿ ನೆಪದಲ್ಲಿ ದರೋಡೆ – ನಾಲ್ವರ ಬಂಧನ

- Advertisement -
- Advertisement -

ಬೆಂಗಳೂರು: ಡೇಟಿಂಗ್ ಆ್ಯಪ್ ಮೂಲಕ ಪರಿಚಯ ಮಾಡಿಕೊಂಡ ವ್ಯಕ್ತಿಗಳನ್ನು ಭೇಟಿಗೆ ಕರೆಸಿ ದರೋಡೆ ನಡೆಸುತ್ತಿದ್ದ ಗ್ಯಾಂಗ್‌ನ್ನು ಯಲಹಂಕ ಪೊಲೀಸ್ ಠಾಣೆ ಪೊಲೀಸರು ಬಂಧಿಸಿದ್ದಾರೆ. ಪ್ರಕರಣದಲ್ಲಿ ಇಬ್ಬರು ಅಪ್ರಾಪ್ತರು ಸೇರಿದಂತೆ ನಾಲ್ವರು ಪೊಲೀಸರ ಬಲೆಗೆ ಬಿದ್ದಿದ್ದಾರೆ.27 ವರ್ಷದ ಸಿವಿಲ್ ಎಂಜಿನಿಯರ್ ನೀಡಿದ ದೂರಿನ ಆಧಾರದಲ್ಲಿ ತನಿಖೆ ನಡೆಸಿದ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದು, ಇವರು ಇದೇ ರೀತಿಯಲ್ಲಿ ಕನಿಷ್ಠ ಎಂಟು ಮಂದಿಯನ್ನು ಗುರಿಯಾಗಿಸಿ ದರೋಡೆ ನಡೆಸಿರುವುದು ಬೆಳಕಿಗೆ ಬಂದಿದೆ.ಮೇ 1ರಂದು ಸಂಜೆ ವೆಂಕಟಾಲದ ಜಯಮುನಿ ಲೇಔಟ್ ರಸ್ತೆಯ ಪಾಲನಹಳ್ಳಿ ಗೇಟ್ ಸಮೀಪ ಘಟನೆ ನಡೆದಿದೆ. ಚಿಕ್ಕಜಾಲದ ಬೃಂದಾವನ ಲೇಔಟ್ ನಿವಾಸಿಯಾಗಿರುವ ಯುವಕ ಕಳೆದ ಮೂರು ವರ್ಷಗಳಿಂದ ಡೇಟಿಂಗ್ ಆ್ಯಪ್ ಬಳಸುತ್ತಿದ್ದು, ಆ್ಯಪ್‌ನಲ್ಲಿ ಪರಿಚಯವಾದ ವ್ಯಕ್ತಿಯನ್ನು ಭೇಟಿ ಮಾಡಲು ತೆರಳಿದ್ದನು.

ಘಟನಾ ಸ್ಥಳಕ್ಕೆ ತೆರಳಿದ ವೇಳೆ ನಾಲ್ವರು ಆರೋಪಿಗಳು ಆತನನ್ನು ಸಂಪರ್ಕಿಸಿ, ವೆಂಕಟಾಲ ಅಂಡರ್‌ಪಾಸ್ ಮೂಲಕ ಜಯಮುನಿ ಲೇಔಟ್ ರಸ್ತೆಯತ್ತ ಕರೆದೊಯ್ದಿದ್ದಾರೆ. ಬಳಿಕ “ನಿನ್ನ ಸ್ನೇಹಿತರು ಹಾಗೂ ಪೋಷಕರಿಗೆ ವಿಷಯ ತಿಳಿಸುತ್ತೇವೆ” ಎಂದು ಬೆದರಿಸಿ ಹಣಕ್ಕೆ ಒತ್ತಾಯಿಸಿದ್ದಾರೆ.ಆರೋಪಿಗಳು ಯುವಕನ ಮೊಬೈಲ್ ಕಸಿದುಕೊಂಡು, ಖಾಸಗಿ ಶಾಲೆ ಸಮೀಪದ ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಚಾಕು ತೋರಿಸಿ ಯುಪಿಐ ಪಾಸ್‌ವರ್ಡ್ ಕೇಳಿದ್ದಾರೆ. ತಪ್ಪಿಸಿಕೊಳ್ಳಲು ಯತ್ನಿಸಿದಾಗ ಹಲ್ಲೆ ನಡೆಸಿ, ಬಲವಂತವಾಗಿ ಮೊಬೈಲ್ ಪಾಸ್‌ವರ್ಡ್ ಪಡೆದು ಯುಪಿಐ ಮೂಲಕ ₹16 ಸಾವಿರ ವರ್ಗಾವಣೆ ಮಾಡಿಕೊಂಡಿದ್ದಾರೆ.ಘಟನೆಯ ಬಳಿಕ ಆರೋಪಿಗಳು ಮೊಬೈಲ್ ಅಲ್ಲೇ ಬಿಟ್ಟು ಪರಾರಿಯಾಗಿದ್ದು, ಗಾಯಗೊಂಡ ಯುವಕನನ್ನು ಸ್ನೇಹಿತ ಆಸ್ಪತ್ರೆಗೆ ದಾಖಲಿಸಿದ್ದಾನೆ. ಆಸ್ಪತ್ರೆಯಿಂದ ಮೆಡಿಕೋ-ಲೀಗಲ್ ಪ್ರಕರಣದ ಮಾಹಿತಿ ಪೊಲೀಸರಿಗೆ ನೀಡಲಾಗಿದೆ.

ಬಂಧಿತರು ಡೇಟಿಂಗ್ ಆ್ಯಪ್ ಬಳಕೆದಾರರನ್ನೇ ಗುರಿಯಾಗಿಸಿಕೊಂಡು ಇದೇ ಮಾದರಿಯಲ್ಲಿ ದರೋಡೆ ನಡೆಸುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. “ಇವರು ರೂಢಿಗತ ಅಪರಾಧಿಗಳಾಗಿದ್ದು, ಆ್ಯಪ್ ಮೂಲಕ ಪರಿಚಯ ಬೆಳೆಸಿ ಬಳಿಕ ಭೇಟಿಗೆ ಕರೆಸಿ ದರೋಡೆ ಮಾಡುತ್ತಿದ್ದರು” ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

- Advertisement -

Related news

error: Content is protected !!