

ತುಮಕೂರು : ಮಾದಿಗ ಸಮುದಾಯದ ಕುಟುಂಬವೊಂದು ದೇವಾಲಯ ಪ್ರವೇಶ ಮಾಡಿದ್ದನ್ನು ಅಡ್ಡಿಪಡಿಸಿ ಧಮ್ಮಿ ಹಾಕಿದ್ದಲ್ಲದೆ, ಜಾತಿನಿಂದನೆ ಮಾಡಿದ ಪ್ರಕರಣದಡಿ ಆರೋಪಿಯನ್ನು ತುರುವೇಕೆರೆ ಠಾಣೆಯ ಪೊಲೀಸರು ಶನಿವಾರ ಬಂಧಿಸಿದ್ದಾರೆ.ಕಿರುಕುಳಕ್ಕೊಳಗಾದ ರಂಗರಾಮು ಟಿ. ಎಂಬವರು ನೀಡಿದ ದೂರಿನನ್ವಯ ರಾಜಣ್ಣ(65) ಎಂಬಾತನನ್ನು ಜಾತಿನಿಂದನೆ ಕಾಯ್ದೆಯಡಿ ಬಂಧಿಸಿ ಕಾನೂನು ಕ್ರಮ ಜರುಗಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.



ಎಫ್‌ಐಆರ್‌ನಲ್ಲೇನಿದೆ..?: ‘
ತುಯಲಹಳ್ಳಿಗ್ರಾಮದ ರಂಗರಾಮು ಟಿ. ಹಾಗೂ ಅವರ ಕುಟುಂಬ ಮಲ್ಲೂರು ಗ್ರಾಮದಲ್ಲಿರುವ ಶ್ರೀ ರಂಗನಾಥಸ್ವಾಮಿ ದೇವಾಲಯಕ್ಕೆ ಎ.18ರಂದು ಸಂಜೆ 5:30ರ ಸುಮಾರಿಗೆ ಪೂಜೆ ಮಾಡಿಸಲು ತೆರಳಿದ್ದು, ಈ ವೇಳೆ ದೇವಾಲಯದ ಜಗಲಿ ಮೇಲೆ ಕುಳಿತಿದ್ದ ಆರೋಪಿ ಮಲ್ಲೂರು ಗ್ರಾಮದ ರಾಜಣ್ಣ ಎಂಬಾತ ಆ ದಲಿತ ಕುಟುಂಬವನ್ನು, ‘ನೀವುಗಳು ಮಾದಿಗ ಜನಾಂಗದವರು ಏಕೆ ದೇವಸ್ಥಾನದ ಒಳಗೆ ಹೋಗಿದ್ದಿರಿ, ಈ ದೇವಸ್ಥಾನ ಊರಿನ ಛತ್ರನಾ, ಇದು ನಿಮ್ಮ ಮನೆಯ ಮುಂದಿನ ದೇವಸ್ಥಾನವಾ?, ಯಾವಾಗಲೂ ಕೆಳಗಿನ ನೀರು ಕೆಳಗೆ ಹರಿಯಬೇಕು, ಮೇಲಿನ ನೀರು ಮೇಲೆಯೇ ಹರಿಯಬೇಕು, ಎರಡು ನೀರು ಒಟ್ಟಿಗೆ ಹರಿಬಾರದು’ ಎಂದು ನಿಂದಿಸಿರುವುದಾಗಿ ಎಫ್‌ಐಆರ್‌ನಲ್ಲಿ ಉಲ್ಲೇಖಿಸಲಾಗಿದೆ.
ನಮ್ಮ ಗ್ರಾಮದಲ್ಲಿ ಮೊದಲಿನಿಂದಲೂ ದಲಿತರಿಗೆ ದೇವಸ್ಥಾನ ಪ್ರವೇಶ ಕೊಡದಂತೆ ನಡೆಸಿಕೊಂಡು ಬಂದಿರುತ್ತಾರೆ, ಹಾಗೇ ನಡೆದುಕೊಂಡು ಹೋಗಬೇಕು, ದೇವಸ್ಥಾನದ ಒಳಗೆ ನಿಮ್ಮನ್ನು ಯಾರು ಬಿಟ್ಟಿದ್ದು, ನೀವು ದೇವಸ್ಥಾನಕ್ಕೆ ಹೋಗುವುದರಿಂದಲೇ ನಿಮ್ಮ ಆರೋಗ್ಯ ಹದಗೆಟ್ಟಿರುತ್ತದೆ’ ಎಂದು ಆರೋಪಿಯು ನಿಂದನೆ ಮಾಡಿರುವುದಾಗಿ ಎಫ್‌ಐಆರ್‌ನಲ್ಲಿ ತಿಳಿಸಲಾಗಿದೆ.ಆರೋಪಿಯು ‘ದೇವಾಲಯದ ಗೋಡೆಯ ಮೇಲಿರುವ ತಹಶೀಲ್ದಾರರ ನೋಟಿಸನ್ನು ಅವಹೇಳನ ಮಾಡಿದ್ದು, ನೀವು ದೇವಸ್ಥಾನದ ಪ್ರವೇಶ ಮಾಡಿರುವುದು ತಪ್ಪಾಯಿತೆಂದು ದೇವಸ್ಥಾನದ ಹೊಸ್ತಿಲಿಗೆ ಬಿದ್ದು ಹೋಗಿ’ ಎಂದು ಮಾನಸಿಕವಾಗಿ ಕಿರುಕುಳ ನೀಡಿದ್ದಾನೆ ಎಂದು ದೂರುದಾರರು ತಿಳಿಸಿದ್ದಾರೆ.ಈ ಸಂಬಂಧ ಶನಿವಾರ ಮಧ್ಯಾಹ್ನ ಘಟನಾ ಸ್ಥಳಕ್ಕೆ ಡಿವೈಎಸ್ಪಿ ಓಂ ಪ್ರಕಾಶ್‌ಗೌಡ, ಕಂದಾಯ ಅಧಿಕಾರಿಗಳು ಹಾಗೂ ತುರುವೇಕೆರೆ ಠಾಣೆಯ ಪೊಲೀಸರು ಭೇಟಿ ನೀಡಿ ಮಹಜರು ನಡೆಸಿದ್ದಾರೆ.








