


ದೆಹಲಿ: ಜನಕಪುರಿಯಲ್ಲಿ ಜಲಮಂಡಳಿ ಅಗೆದಿದ್ದ ಆಳವಾದ ಹೊಂಡಕ್ಕೆ ಬಿದ್ದು ಯುವಕನೋರ್ವ ಸಾವನ್ನಪ್ಪಿರುವ ಘಟನೆ ನಡೆದಿದೆ. ಕೈಲಾಶ್‌ಪುರಿ ನಿವಾಸಿ, ಕಮಲ್ ಜೈನ್(25) ಮೃತ ಯುವಕ.
ಪಶ್ಚಿಮ ದೆಹಲಿಯ ಜನಕಪುರಿ ಡಿಸ್ಟ್ರಿಕ್ಟ್ ಸೆಂಟರ್ ಬಳಿ ಜಲಮಂಡಳಿಯ ದುರಸ್ತಿ ಕಾರ್ಯಕ್ಕಾಗಿ ರಸ್ತೆಯಲ್ಲಿ ಹೊಂಡ ಅಗೆಯಲಾಗಿತ್ತು. ಕಮಲ್ ಗುರುವಾರ ರಾತ್ರಿ ಕೆಲಸ ಮುಗಿಸಿ ರೋಹಿಣಿಯಿಂದ ಮನೆಗೆ ವಾಪಸ್ ಆಗುತ್ತಿದ್ದಾಗ ಈ ಘಟನೆ ಸಂಭವಿಸಿದ್ದು, ಕಮಲ್ ಹೆಲೈಟ್ ಮತ್ತು ರೈಡಿಂಗ್ ಜಾಕೆಟ್ ಧರಿಸಿದ್ದರೂ ಕೂಡ ಗುಂಡಿಯ ಆಳ ಮತ್ತು ಅದಕ್ಕೆ ಸರಿಯಾದ ಸುರಕ್ಷತಾ ಕ್ರಮಗಳಿಲ್ಲದ ಕಾರಣ ಪ್ರಾಣಾಪಾಯ ಸಂಭವಿಸಿದೆ.
ಗುರುವಾರ ತಡರಾತ್ರಿ ಕಮಲ್ ಮನೆಗೆ ಬಾರದಿದ್ದಾಗ ಅವರ ಕುಟುಂಬಸ್ಥರು ಆತಂಕಕ್ಕೊಳಗಾಗಿ, ಇಡೀ ರಾತ್ರಿ ಜನಕಪುರಿ, ಸಾಗರ್‌ಪುರ, ವಿಕಾಸಪುರಿ ಮತ್ತು ರೋಹಿಣಿ ಸೇರಿ ಹಲವು ಪೊಲೀಸ್ ಠಾಣೆಗಳಿಗೆ ಭೇಟಿ ನೀಡಿದ್ದಾರೆ. ಆದರೆ ಪೊಲೀಸರು ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿರಲಿಲ್ಲ.
ಶುಕ್ರವಾರ ಬೆಳಗ್ಗೆ ಸುಮಾರು 7:30ಕ್ಕೆ ಶವ ಪತ್ತೆಯಾಗಿದೆ ಎಂದು ಪೊಲೀಸರು ಕರೆಮಾಡಿ ಮಾಹಿತಿ ನೀಡಿದ್ದು, ಕಮಲ್ ಸಾವಿಗೆ ಜಲಮಂಡಳಿ ಅಧಿಕಾರಿಗಳ ನಿರ್ಲಕ್ಷ್ಯವೇ ಕಾರಣ ಎಂದು ಆರೋಪಿಸಿದ್ದಾರೆ. ಆರೋಪ ಬೆನ್ನಲ್ಲೇ ದೆಹಲಿ ಸರ್ಕಾರ ಪ್ರಕರಣ ಸಂಬಂಧ ತನಿಖೆಗೆ ಆದೇಶ ನೀಡಿದ್ದಾರೆ.








