
ಬೆಂಗಳೂರು: ಆಕ್ಟೀವ್ ರೌಡಿಶೀಟರ್ ಪರವಾಗಿ ಬ್ಯಾಟ್ ಬೀಸಿದ ಸಬ್ ಇನ್ಸ್ ಪೆಕ್ಟರ್ ಸಸ್ಪೆಂಡ್ ಆಗಿದ್ದಾರೆ. ಆವಲಹಳ್ಳಿ ಪೊಲೀಸ್ ಠಾಣೆಯ ಸಬ್ ಇನ್ಸ್ ಪೆಕ್ಟರ್ ಪ್ರದೀಪ್ ಪೂಜಾರಿ, ವೈಟ್ ಫೀಲ್ಡ್ ನ ಲೋಕೇಶ್ ಎಂಬ ರೌಡಿಶೀಟರ್ ನನ್ನ ರೌಡಿಪಟ್ಟಿಯಿಂದ ಕೈಬಿಡಲು ಪಟ್ಟುಹಿಡಿದಿದ್ದರು. ಈ ಹಿನ್ನೆಲೆ ಕೇಂದ್ರ ವಲಯ ಐಜಿ ಚಂದ್ರಶೇಖರ್ ಅವರು ಪ್ರದೀಪ್ ಪೂಜಾರಿಯನ್ನು ಸಸ್ಪೆಂಡ್ ಮಾಡಿದ್ದಾರೆ.

ರೌಡಿಶೀಟರ್ ಲೋಕೇಶನ ಮೇಲೆ ಇತ್ತೀಚೆಗೂ ಕೂಡ ಕೆಲವು ಪ್ರಕರಣಗಳು ದಾಖಲಾಗಿದ್ದವು. ಹೀಗಿದ್ದರೂ ಆತನನ್ನು ರೌಡಿಪಟ್ಟಿಯಿಂದ ಕೈಬಿಡಲು ಪ್ರದೀಪ್ ಶತಾಯಗತಾಯ ಪ್ರಯತ್ನ ಮಾಡಿದ್ದರು. ವಿಚಾರ ತಿಳಿಯುತ್ತಿದ್ದಂತೆ ಕೇಂದ್ರ ವಲಯದ ಐಜಿ ಚಂದ್ರಶೇಖರ್ ಅವರು ಪಿಎಸ್ ಐ ಪ್ರದೀಪ್ ಪೂಜಾರಿ ಸಸ್ಪೆಂಡ್ ಮಾಡಿದ್ದಾರೆ.

ಪ್ರದೀಪ್ ಪೂಜಾರಿ ತನ್ನ ಠಾಣಾ ವ್ಯಾಪ್ತಿಯಲ್ಲದೆ ಬೇರೆ ಠಾಣಾ ವ್ಯಾಪ್ತಿಯ ಪ್ರಕರಣಗಳಿಗೂ ಕೈಹಾಕುತ್ತಿದ್ದರಂತೆ. ಅಕ್ರಮ ಮರಳು, ಲ್ಯಾಂಡ್ ಮಾಫಿಯಾ ಹಿನ್ನೆಲೆಯ ವ್ಯಕ್ತಿಗಳ ಜೊತೆಯೂ ಪ್ರದೀಪ್ ಪೂಜಾರಿ ಹೆಸರು ತಳುಕು ಹಾಕಿಕೊಂಡಿತ್ತಂತೆ. ಈ ಬಗ್ಗೆ ಸಾರ್ವಜನಿಕರಿಂದ ಹಿರಿಯ ಪೊಲೀಸ್ ಅಧಿಕಾರಿಗಳಿಗೆ ದೂರುಗಳು ಬಂದಿದ್ದವು, ಇದೀಗ ರೌಡಿಶೀಟರ್ ನನ್ನ ರೌಡಿಪಟ್ಟಿಯಿಂದ ಕೈ ಬಿಡಲು ಠಾಣಾಧಿಕಾರಿಗಳ ಗಮನಕ್ಕೂ ತರದೆ ಪ್ರದೀಪ್ ಡಿಎಸ್ಪಿಗೆ ವರದಿ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಪ್ರದೀಪ್ ಪೂಜಾರಿಯನ್ನು ಸಸ್ಪೆಂಡ್ ಮಾಡಲಾಗಿದೆ.











