

ಉಡುಪಿ: ದಿನನಿತ್ಯ ಪೆಟ್ರೋಲ್, ಡೀಸೆಲ್ ದರ ಏರುಗತಿಯಲ್ಲೇ ಸಾಗುತ್ತ ಇದೀಗ ಗಗನಕ್ಕೇರಿದೆ. ಬಡಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಇನ್ನು ಕೆಲವು ಪೆಟ್ರೋಲ್ ಬಂಕ್ ಗಳೇ ಬಂದ್ ಆಗಿವೆ. ಇದರಿಂದ ವಾಹನ ಸವಾರರು ಪೆಟ್ರೋಲ್ ಡಿಸೇಲ್ ಗಾಗಿ ಪರದಾಡುವಂತಾಗಿದೆ.
ಹೌದು, ಇಂತಹ ಸ್ಥಿತಿ ಉಡುಪಿ ಜಿಲ್ಲೆಯಲ್ಲಿ ಕಂಡುಬಂದಿದೆ. ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುವ ಎಸ್ಆರ್ ಹಾಗೂ ನಯರಾ ಪೆಟ್ರೋಲ್ ಬಂಕ್ ಗಳು ಬಂದ್ ಮಾಡಲಾಗಿದೆ. ಸುಮಾರು 15 ದಿನಗಳಿಂದ ಹಂತ ಹಂತವಾಗಿ ಒಂದೊಂದೇ ಪೆಟ್ರೋಲ್ ಬಂಕ್ ಸೇವೆ ಸ್ಥಗಿತಗೊಳಿಸಿವೆ. ಅಷ್ಟಕ್ಕೂ, ಹೀಗೆ ದಿಢೀರ್ ಕ್ಲೋಸ್ ಮಾಡಲು ಕಾರಣ ಪೂರೈಕೆದಾರರು ಮತ್ತು ಡೀಲರ್ ಗಳ ನಡುವಿನ ತಿಕ್ಕಾಟ.
ಬೆಲೆ ಏರಿಕೆಯಿಂದಾಗಿ ಪೆಟ್ರೋಲ್ ಡಿಸೇಲ್ ಪೂರೈಕೆದಾರರು ಮತ್ತು ಡೀಲರ್ ನಡುವಿನ ತಿಕ್ಕಾಟ ಜೋರಾಗಿದೆ. ಪೆಟ್ರೋಲ್, ಡೀಸೆಲ್ ದರ ಏರಿಕೆ ಆಗುವುದರ ಮುನ್ಸೂಚನೆ ಅರಿತ, ಪೂರೈಕೆದಾರರು ಮೊದಲೇ ಸ್ಟಾಕ್ ಮಾಡಿಟ್ಟು ಡೀಲರ್ ಗಳಿಗೆ ಸರಬರಾಜು ನಿಲ್ಲಿಸಿದ್ದರು. ಇದರಿಂದ ತೀವ್ರ ಸಂಕಷ್ಟ ಅನುಭವಿಸಿದ ಪೆಟ್ರೋಲ್ ಬಂಕ್ ಡೀಲರ್ ಗಳು ಕಂಗಾಲಾಗಿದ್ದರು. ಸರಬರಾಜು ಸಾಗುತ್ತಿದ್ದರೂ ಉಳಿದ ಬಂಕ್ ಗಳಿಗಿಂತ 2 ರೂಪಾಯಿ ಹೆಚ್ಚಿನ ದರ ನಿಗದಿಯಾಗಿದ್ದರಿಂದ ಡೀಲರ್ ಗಳು ಬಂಕ್ ಗಳನ್ನೇ ಬಂದ್ ಮಾಡಿದ್ದಾರೆ. ನಿಗದಿತ ದರ ಹೆಚ್ಚಳ ಮಾಡಿ ಪೆಟ್ರೋಲ್ ಮಾರಿದರೆ ಬಂಕ್ ಗಳ ವಿಶ್ವಾಸಾರ್ಹತೆ ಹಾಳಾಗುತ್ತದೆ. ಹೀಗಾಗಿ ಬಂಕ್ ಕ್ಲೋಸ್ ಆಗಿದ್ದು ವಾಹನ ಸವಾರರು ಬಂಕ್ ಕ್ಲೋಸ್ ಆಗಿದ್ದನ್ನು ನೋಡಿ ಖಾಲಿ ಕೈಯಲ್ಲಿ ವಾಪಸ್ಸಾಗುತ್ತಿದ್ದಾರೆ.










