
ಸೊಂಪಾದ ಕೂದಲು ಹೊಂದಿರುವುದು ಅದೃಷ್ಟನೇ ಸರಿ, ಆದರೆ ಆ ಸೊಂಪಾದ ಕೇಶ ರಾಶಿಯ ಸೌಂದರ್ಯವನ್ನು ಹಾಗೇ ಉಳಿಸಿಕೊಳ್ಳುವುದು ಇದೆಯಲ್ಲಾ ಅದು ಸವಾಲೇ ಸರಿ. ಏಕೆಂದರೆ ಅನೇಕ ವಿಷಯಗಳು ಕೂದಲಿನ ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿರುತ್ತದೆ. ವಾಯು ಮಾಲಿನ್ಯ, ಪೋಷಕಾಂಶ ಕಡಿಮೆ ಇರುವ ಆಹಾರ, ಮಾನಸಿಕ ಒತ್ತಡ, ಅನಾರೋಗ್ಯ ಇವೆಲ್ಲಾ ಕೂದಲು ಉದುರಲು ಕಾರಣವಾಗುತ್ತೆ.

ನೀವು ಕೆಲವೊಂದು ನೈಸರ್ಗಿಕವಾದ ವಸ್ತುಗಳನ್ನು ಬಳಸಿ ಕೂಲಿನ ಆರೋಗ್ಯ ಕಾಪಾಡಬಹುದು, ಅದರಲ್ಲೂ ನಿಮ್ಮ ಅಡುಗೆ ಮನೆಯಲ್ಲಿ ಕರಿಬೇವು ಇದ್ದೇ ಇರುತ್ತದೆ, ಎರಡು ಎಲೆ ಹಾಕಿದರೆ ಸಾಕು ಸಾರು ಘಮ್ಮೆನ್ನುತ್ತೆ, ಅದೇ ಕರಿಬೇವು ಸಾಕು ನಿಮ್ಮ ಕೇಶರಾಶಿಯನ್ನು ಜೋಪಾನವಾಗಿ ಕಾಪಾಡಲು.
ತುಂಬಾ ಜನರಿಗೆ ಕರಿಬೇವು ಕೂದಲಿಗೆ ಒಳ್ಳೆಯದು ಎಂದು ಗೊತ್ತಿರುತ್ತದೆ, ಆದರೆ ಅದನ್ನು ಹೇಗೆ ಬಳಸಬೇಕು ಎಂಬುವುದು ಗೊತ್ತಿರುವುದಿಲ್ಲ. ನಾವಿಲ್ಲಿ ನೀವು ಕೂದಲಿನ ಆರೋಗ್ಯ ಜೋಪಾನ ಮಾಡಲು ಏನು ಮಾಡಬೇಕು ಎಂದು ಹೇಳಿದ್ದೇವೆ ನೋಡಿ:

ಮೊಸರು ಮತ್ತು ಕರಿಬೇವಿನ ಹೇರ್ ಮಾಸ್ಕ್
ಕರಿಬೇವು ರುಬ್ಬಿ ಅದನ್ನು ಮೊಸರಿನ ಮಿಕ್ಸ್ ಮಾಡಿ. ಮೊಸರು ತಲೆಬುಡವನ್ನು ಮಾಯಿಶ್ಚರೈಸರ್ ಆಗಿಡುತ್ತೆ, ಆಗ ತಲೆಹೊಟ್ಟಿನಂಥ ಸಮಸ್ಯೆ ಉಂಟಾಗುವುದು. 2 ಚಮಚ ಮೊಸರು ತೆಗೆದು ಅದಕ್ಕೆ 1 ಚಮಚ ಕರಿಬೇವಿನ ಪೇಸ್ಟ್ ಮಿಕ್ಸ್ ಮಾಡಿ ಅದನ್ನು ತಲೆಗೆ ಹಚ್ಚಿ 30-40 ನಿಮಿಷ ಇಡಿ, ನಂತರ ಮೈಲ್ಡ್ ಶ್ಯಾಂಪೂ ಹಚ್ಚಿ ಸ್ನಾನ ಮಾಡಿ. ಕೂದಲು ತುಂಬಾ ಶೈಲಿಯಾಗಿರುತ್ತೆ.

ನೆಲ್ಲಿಕಾಯಿ, ಮೆಂತೆ ಮತ್ತು ಕರಿಬೇವಿನ ಎಲೆ
ನೆಲ್ಲಿಕಾಯಿ, ಮೆಂತೆ ಮತ್ತು ಕರಿಬೇವಿನ ಎಲೆ
ಕರಿಬೇವನ್ನು ನೆಲ್ಲಿಕಾಯಿ ಹಾಗೂ ಮೆಂತೆ ಜೊತೆ ಮಿಕ್ಸ್ ಮಾಡಿ ಹಚ್ಚಿದರೆ ಕೂದಲಿನ ಬೆಳವಣಿಗೆಗೆ ತುಂಬಾ ಸಹಕಾರಿ. ಕರಿಬೇವಿನ ಎಲೆಯಲ್ಲಿ ವಿಟಮಿನ್ ಬಿ ಇದ್ದು ಅದು ಕೂದಲಿನ ಬುಡವನ್ನು ಬೆಳವಣಿಗೆಗೆ ಸಹಕಾರಿಯಾಗಿದೆ. ಅದರ ಜೊತೆಗೆ ಮೆಂತೆ ಮತ್ತು ನೆಲ್ಲಿಕಾಯಿ ಸೇರಿದರೆ ಕೂದಲಿನ ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು. ಈ ಪೇಸ್ಟ್ ಹಚ್ಚಿ 20-30 ನಿಮಿಷ ಬಿಟ್ಟು ನಂತರ ಹದ ಬಿಸಿ ನೀರಿನಿಂದ ಕೂದಲನ್ನು ತೊಳೆಯಿರಿ. ಈ ಕಾಂಬಿನೇಷನ್ ಕೂದಲು ಉದ್ದ ಬೆಳೆಯಲು ಸಹಕಾರಿಯಾಗಿದೆ.

ತೆಂಗಿನೆಣ್ಣೆ ಮತ್ತು ಕರಿಬೇವಿನ ಎಲೆಯ ಟಾನಿಕ್
ತೆಂಗಿನೆಣ್ಣೆ ಮತ್ತು ಕರಿಬೇವಿನ ಎಲೆಯ ಟಾನಿಕ್
ಕೂದಲು ಸೊಂಪಾಗಿ ಬೆಳೆಯಲು ಈ ಟಾನಿಕ್ ತುಂಬಾನೇ ಸಹಕಾರಿ. ತೆಂಗಿನೆಣ್ಣೆ ಕೂದಲಿನ ಒಟ್ಟು ಮೊತ್ತ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಒಂದು ಕಪ್ ತೆಂಗಿನೆಣ್ಣೆಗೆ ಒಂದು ಹಿಡಿ ಕರಿಬೇವು ಹಾಕಿ ಕುದಿಸಿ, ತಣ್ಣಗಾಗಲು ಬಿಡಿ, ತಣ್ಣಗಾದ ಮೇಲೆ ಅದನ್ನು ಎಣ್ಣೆ ಹಚ್ಚುವಾಗ ಬಳಸಿ.

ಕೂದಲು ಉದುರುವುದನ್ನು ತಡೆಗಟ್ಟಲು ಈರುಳ್ಳಿ ಮತ್ತು ಕರಿಬೇವಿನ ಎಲೆಯ ಚಿಕಿತ್ಸೆ
ಈಗ ಎಷ್ಟೋ ಜನರಿಗೆ ಅಕಾಲಿಕ ನೆರೆ ಕೂದಲಿನ ಸಮಸ್ಯೆ ಕಾಣುತ್ತದೆ. ಇನ್ನು ಕೂದಲು ಉದುರುವುದು ಬಹುತೇಕರ ಸಮಸ್ಯೆಯಾಗಿದೆ. ಈ ಸಮಸ್ಯೆಗೆಲ್ಲಾ ಪರಿಹಾರ ಈರುಳ್ಳಿ ಹಾಗೂ ಕರಿಬೇವಿನ ಎಲೆ ಕಾಂಬಿನೇಷನ್‌ನಲ್ಲಿದೆ. 15-20 ಕರಿಬೇವಿನ ಎಲೆ ತೆಗೆದು ಪೇಸ್ಟ್ ಮಾಡಿ ಅದಕ್ಕೆ ಈರುಳ್ಳಿ ರಸ ಹಾಕಿ ಮಿಕ್ಸ್ ಮಾಡಿ ಅದನ್ನು ತಲೆಗೆ ಹಚ್ಚಿ, ಈ ರೀತಿ ವಾರದಲ್ಲಿ 2-3 ರೀತಿ ಮಾಡಿ, ಕೂದಲು ಉದುರುವ ಸಮಸ್ಯೆ ತುಂಬಾ ಕಡಿಮೆಯಾಗುವುದು.
