
ನವದೆಹಲಿ: ಭಾರತದಲ್ಲಿ ಈಗ ಜನರ ಆರೋಗ್ಯ ದಾಖಲೆಗಳನ್ನು ಸಂಪೂರ್ಣವಾಗಿ ಡಿಜಿಟಲೈಸ್ ಮಾಡಲಾಗುತ್ತಿದೆ. ಜನರು ಸ್ವಯಂಪ್ರೇರಿತರಾಗಿ ರಾಷ್ಟ್ರೀಯ ಡಿಜಿಟಲ್ ಆರೋಗ್ಯ ಮಿಷನ್ ವೆಬ್ಸೈಟ್ನಲ್ಲಿ ತಮ್ಮ ಆರೋಗ್ಯಕ್ಕೆ ಸಂಬಂಧಿಸಿದ ದಾಖಲೆಗಳನ್ನು ಅಪ್ ಲೋಡ್ ಮಾಡಬಹುದು. ಇದರಿಂದಾಗಿ ಆಸ್ಪತ್ರೆಗೆ ಹೋದಾಗ ಆರೋಗ್ಯ ದಾಖಲೆಗಳನ್ನು ತೆಗೆದುಕೊಂಡು ಹೋಗಬೇಕಾದ ಅನಿವಾರ್ಯತೆ ಇರೋದಿಲ್ಲ. ಆಸ್ಪತ್ರೆಯ ವೈದ್ಯರು ವೆಬ್ ಸೈಟ್ಗೆ ಲಾಗಿನ್ ಆಗಿ ರೋಗಿಯ ಆರೋಗ್ಯ ದಾಖಲೆಗಳನ್ನು ಪರಿಶೀಲಿಸಿ ಅಪ್ಡೇಟ್ ಮಾಡಲು ಅವಕಾಶ ಇರುತ್ತದೆ. ಇಂತಹ ರಾಷ್ಟ್ರೀಯ ಡಿಜಿಟಲ್ ಆರೋಗ್ಯ ಮಿಷನ್ನಡಿ 14 ಕೋಟಿ ಜನರು ತಮ್ಮ ಆರೋಗ್ಯ ದಾಖಲೆಗಳನ್ನು ರಿಜಿಸ್ಟರ್ ಮಾಡಿಸಿದ್ದಾರೆ.

ಭಾರತದಲ್ಲಿ ರಾಷ್ಟ್ರೀಯ ಡಿಜಿಟಲ್ ಆರೋಗ್ಯ ಮಿಷನ್ (NDHM) ಅಡಿಯಲ್ಲಿ ಸುಮಾರು 14 ಕೋಟಿ ಆರೋಗ್ಯ IDಗಳನ್ನು ಇದುವರೆಗೂ ಜನರೇಟ್ ಮಾಡಲಾಗಿದೆ. ಈ ಯೋಜನೆಯು ಭಾರತೀಯರಿಗೆ ಡಿಜಿಟಲ್ ಆರೋಗ್ಯ ದಾಖಲೆಗಳನ್ನು ರಚಿಸಲು ಮತ್ತು ಡಿಜಿಟಲ್ ಆರೋಗ್ಯ ದಾಖಲೆಗಳನ್ನು ಪಡೆಯಲು ಅವಕಾಶ ಮಾಡಿಕೊಡುತ್ತದೆ. ನರೇಂದ್ರ ಮೋದಿ ಸರ್ಕಾರದ ಪ್ರಮುಖ ಯೋಜನೆಯನ್ನು ಜನರ ಸಾರ್ವತ್ರಿಕ ಆರೋಗ್ಯ ರಕ್ಷಣೆಯ ಮೊದಲ ಹೆಜ್ಜೆಯಾಗಿ ರೂಪಿಸಲಾಗಿದೆ.
ರಾಷ್ಟ್ರೀಯ ಆರೋಗ್ಯ ಪ್ರಾಧಿಕಾರದ (ಎನ್ಎಚ್ಎ) ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಆರ್.ಎಸ್. ಶರ್ಮಾ ಅವರ ಪ್ರಕಾರ, ಸೆಪ್ಟೆಂಬರ್ 27ರಂದು ಪ್ರಧಾನಿ ನರೇಂದ್ರ ಮೋದಿ ಆರಂಭಿಸಿದ ರಾಷ್ಟ್ರೀಯ ಕಾರ್ಯಕ್ರಮವು ಉತ್ತಮ ಪ್ರಗತಿಯನ್ನು ತೋರಿಸಿದೆ. ಇದರ ಪೈಲಟ್ ಯೋಜನೆಯನ್ನು ಕೇಂದ್ರಾಡಳಿತ ಪ್ರದೇಶಗಳಲ್ಲಿ ಜಾರಿಗೊಳಿಸಲಾಗಿತ್ತು. 2020ರ ಆಗಸ್ಟ್ 15 ರಂದು ಪ್ರಧಾನಿ ಮೋದಿ ರಾಷ್ಟ್ರೀಯ ಡಿಜಿಟಲ್ ಆರೋಗ್ಯ ಮಿಷನ್ ಯೋಜನೆಯನ್ನು ದೆಹಲಿಯ ಕೆಂಪುಕೋಟೆಯ ಭಾಷಣದಲ್ಲಿ ಘೋಷಿಸಿದ್ದರು.

ಪ್ರತಿಯೊಬ್ಬ ಭಾರತೀಯನು ವಿಶಿಷ್ಟವಾದ 14 ಅಂಕಿಯ ಆರೋಗ್ಯ ಗುರುತಿನ (ID) ಸಂಖ್ಯೆಯನ್ನು ಪಡೆಯುವ ಈ ಮಿಷನ್ ಅನ್ನು NDHM ನಿಂದ ಆಯುಷ್ಮಾನ್ ಭಾರತ್ ಡಿಜಿಟಲ್ ಮಿಷನ್ ಎಂದು ಮರುನಾಮಕರಣ ಮಾಡಲಾಗಿದೆ. ಪ್ರತಿಯೊಬ್ಬ ಭಾರತೀಯನ ವೈಯಕ್ತಿಕ ಆರೋಗ್ಯ ID ಯೊಂದಿಗೆ ಡಿಜಿಟಲ್ ಆರೋಗ್ಯ ವ್ಯವಸ್ಥೆಯನ್ನು ಸೃಷ್ಟಿಸಲಾಗುತ್ತೆ. ವೈದ್ಯರು ಮತ್ತು ಆರೋಗ್ಯ ಸಿಬ್ಬಂದಿ ಕಂಪ್ಯೂಟರ್ ಗೆ ಲಾಗಿನ್ ಆಗುವ ಮೂಲಕ ಜನರ ವೈಯಕ್ತಿಕ ಆರೋಗ್ಯ ದಾಖಲೆಗಳನ್ನು ಜನರ ಒಪ್ಪಿಗೆಯ ಮೇರೆಗೆ ಪರಿಶೀಲಿಸಬಹುದು.
ಈ ಯೋಜನೆಯು ಸ್ವಯಂಪ್ರೇರಿತ ಕಾರ್ಯಕ್ರಮವಾಗಿದೆ. ಡಾಕ್ಟರ್ ಆರ್.ಎಸ್. ಶರ್ಮಾ ಪ್ರಕಾರ, ನಾಗರಿಕರಿಗೆ ತಮ್ಮ ಡಿಜಿಟಲ್ ಆರೋಗ್ಯ ಐಡಿಗಳನ್ನು ನಿರ್ಮಿಸಲು ಮತ್ತು ಅವರ ವೈದ್ಯಕೀಯ ದಾಖಲೆಗಳನ್ನು ಲಿಂಕ್ ಮಾಡಲು ಆಯ್ಕೆಯನ್ನು ನೀಡುತ್ತದೆ.

“ಕೇಂದ್ರಾಡಳಿತ ಪ್ರದೇಶಗಳಲ್ಲಿನ ಅನುಭವವು ತುಂಬ ಉತ್ತಮವಾಗಿದೆ. ಡಿಜಿಟಲ್ ಮಿಷನ್ಗಾಗಿ ಘಟಕಗಳನ್ನು ಮತ್ತು ಬಿಲ್ಡಿಂಗ್ ಬ್ಲಾಕ್ಗಳನ್ನು ರಚಿಸಲು ಈ ಸಮಯವನ್ನು ಫಲಪ್ರದವಾಗಿ ಬಳಸಿಕೊಳ್ಳಲಾಗಿದೆ” ಎಂದು ಅವರು ಹೇಳಿದರು. ಈಗಾಗಲೇ 13 ಕೋಟಿಗೂ ಹೆಚ್ಚು ಹೆಲ್ತ್ ಐಡಿಗಳನ್ನು ರಚಿಸಲಾಗಿದ್ದು, ಹೆಚ್ಚಿನದನ್ನು ಸಾಧಿಸಲು ಯಾವುದೇ ಗುರಿ ಮತ್ತು ಗಡುವು ಇಲ್ಲ. “ನಾವು ಗುರಿಯನ್ನು ಹೊಂದಿಲ್ಲ, ಏಕೆಂದರೆ ಇದು ಅಂತಿಮವಾಗಿ ಸ್ವಯಂಪ್ರೇರಿತವಾಗಿದೆ. ಜನರು ಇದನ್ನು ಎಷ್ಟು ಉಪಯುಕ್ತ ಮತ್ತು ಆಕರ್ಷಕವಾಗಿ ಕಂಡುಕೊಳ್ಳುತ್ತಾರೆ ಎಂಬುದರ ಮೇಲೆ ಇದು ಅವಲಂಬಿತವಾಗಿರುತ್ತದೆ” ಎಂದು ಡಾಕ್ಟರ್ ಆರ್.ಎಸ್. ಶರ್ಮಾ ಹೇಳಿದರು. ಇದು ಜನರನ್ನು ಆಕರ್ಷಿಸುತ್ತದೆ ಎಂದು ನನಗೆ ಖಾತ್ರಿಯಿದೆ. ಏಕೆಂದರೆ ಇದು ಆರೋಗ್ಯ ದಾಖಲೆಗಳನ್ನು ಲಿಂಕ್ ಮಾಡಲು ಅನುವು ಮಾಡಿಕೊಡುತ್ತದೆ, ಒಂದು ರೀತಿಯಲ್ಲಿ ಉತ್ತಮ ರೋಗ ನಿರ್ಣಯ, ಕೈಗೆಟುಕುವ ಚಿಕಿತ್ಸೆಗೆ ಸಹಾಯ ಮಾಡುತ್ತದೆ.

ಡಾಕ್ಟರ್ ಆರ್.ಎಸ್. ಶರ್ಮಾ ಅವರ ಪ್ರಕಾರ, ಆಯುಷ್ಮಾನ್ ಭಾರತ್ ಖಂಡಿತವಾಗಿಯೂ ಈ ಮಿಷನ್ನ ಭಾಗವಾಗಲಿದೆ ಎಂದು ನಂಬುತ್ತಾರೆ. ನಾವು ಆರೋಗ್ಯ ಹಕ್ಕು ವಿನಿಮಯವನ್ನು ನಿರ್ಮಿಸುತ್ತಿದ್ದೇವೆ. ಅದು ವಿಮಾ ಉದ್ಯಮ, ಸ್ಟಾರ್ಟ್-ಅಪ್ಗಳು ಮತ್ತು ರೋಗಿಗಳಿಗೆ ಸಹಾಯ ಮಾಡುತ್ತದೆ. ಇದು ಎಲ್ಲರಿಗೂ ಗೆಲುವು-ಗೆಲುವಿನ ಸನ್ನಿವೇಶವಾಗಿದೆ. ರಾಷ್ಟ್ರೀಯ ಡಿಜಿಟಲ್ ಆರೋಗ್ಯ ಮಿಷನ್ ಪ್ಲಾಟ್ಫಾರ್ಮ್ ನಲ್ಲಿ ಈಗ 3,000 ಕ್ಕೂ ಹೆಚ್ಚು ಆಸ್ಪತ್ರೆಗಳು ಮತ್ತು 3,400 ವೈದ್ಯರನ್ನು ಹೊಂದಿದೆ ಎಂದು ಸರ್ಕಾರದ ಅಂಕಿ ಅಂಶಗಳು ಹೇಳುತ್ತಿವೆ.
ಮುಂಬರುವ ತಿಂಗಳುಗಳಲ್ಲಿ, PM-DHM ಅನ್ನು ಆಯುಷ್ಮಾನ್ ಭಾರತ್ ಎಂದೂ ಕರೆಯಲ್ಪಡುವ ಸರ್ಕಾರದ ಆರೋಗ್ಯ ವಿಮಾ ಯೋಜನೆಯಾದ ಪ್ರಧಾನ ಮಂತ್ರಿ ಜನ ಆರೋಗ್ಯ ಯೋಜನೆಗೆ ಲಿಂಕ್ ಮಾಡಲಾಗುತ್ತದೆ. ಆರು ಕೇಂದ್ರಾಡಳಿತ ಪ್ರದೇಶಗಳಲ್ಲಿ ಪ್ರಾಯೋಗಿಕ ಯೋಜನೆಗಳ ಸಮಯದಲ್ಲಿ ಈ ಎಲ್ಲಾ ಘಟಕಗಳನ್ನು ಒಟ್ಟುಗೂಡಿಸಿ ಪರೀಕ್ಷಿಸಲಾಗಿದೆ ಎಂದು ಶರ್ಮಾ ಹೇಳಿದರು. ಡಾಕ್ಟರ್ ಆರ್.ಎಸ್. ಶರ್ಮಾ ಪ್ರಕಾರ, ವೈದ್ಯರ ಕೊರತೆಯಿಂದ ಬಳಲುತ್ತಿರುವ ಭಾರತದ ದೂರದ ಸ್ಥಳಗಳಲ್ಲಿ ಆರೋಗ್ಯ ಸೇವೆಯ ಲಭ್ಯತೆಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.










