ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಬುಧವಾರ ಬಾಲಿಯಲ್ಲಿ ಇಂಡೋನೇಷ್ಯಾದ ಅಧ್ಯಕ್ಷ ಜೋಕೊ ವಿಡೋಡೊ ಅವರಿಂದ ಭಾರತದ ಜಿ20 ಅಧ್ಯಕ್ಷ ಸ್ಥಾನವನ್ನು ಅಧಿಕೃತವಾಗಿ ಸ್ವೀಕರಿಸಿದರು. ಜಿ 20 ರ ಸಮಾರೋಪದ ಅಧಿವೇಶನವನ್ನು ಉದ್ದೇಶಿಸಿ ಮಾತನಾಡಿದ ಅವರು, ಭಾರತದ ಜಿ 20 ಅಧ್ಯಕ್ಷ ಸ್ಥಾನವು ಎಲ್ಲರನ್ನೂ ಒಳಗೊಳ್ಳುವ, ಮಹತ್ವಾಕಾಂಕ್ಷೆಯ, ನಿರ್ಣಾಯಕ ಮತ್ತು ಕಾರ್ಯ ಆಧಾರಿತವಾಗಿರುತ್ತದೆ ಎಂದು ಹೇಳಿದರು.

”ಭಾರತ ಜಿ 20 ಅಧ್ಯಕ್ಷ ಸ್ಥಾನವನ್ನು ವಹಿಸಿಕೊಂಡಿರುವುದು ಪ್ರತಿಯೊಬ್ಬ ಭಾರತೀಯನಿಗೂ ಹೆಮ್ಮೆಯ ವಿಷಯವಾಗಿದೆ. ನಾವು ಭಾರತದ ವಿವಿಧ ರಾಜ್ಯಗಳು ಮತ್ತು ನಗರಗಳಲ್ಲಿ ಜಿ 20 ಸಭೆಗಳನ್ನು ಆಯೋಜಿಸುತ್ತೇವೆ. ಒಟ್ಟಾಗಿ ನಾವು ಜಿ 20 ಅನ್ನು ಜಾಗತಿಕ ಬದಲಾವಣೆಗೆ ವೇಗವರ್ಧಕವಾಗಿ ಮಾಡುತ್ತೇವೆ” ಎಂದು ಮೋದಿ ಹೇಳಿದರು.
ಜಗತ್ತು ಏಕಕಾಲದಲ್ಲಿ ಭೌಗೋಳಿಕ ರಾಜಕೀಯ ಉದ್ವಿಗ್ನತೆ, ಆರ್ಥಿಕ ಮಂದಗತಿ, ಆಹಾರ ಮತ್ತು ಇಂಧನ ಬೆಲೆಗಳ ಏರಿಕೆ ಮತ್ತು ದೀರ್ಘಾವಧಿಯ ಸಾಂಕ್ರಾಮಿಕದ ದುಷ್ಪರಿಣಾಮಗಳೊಂದಿಗೆ ಹೋರಾಡುತ್ತಿರುವ ಸಮಯದಲ್ಲಿ ಭಾರತವು G-20 ನ ಜವಾಬ್ದಾರಿಯನ್ನು ವಹಿಸಿಕೊಳ್ಳುತ್ತಿದೆ. ಅಂತಹ ಸಮಯದಲ್ಲಿ ಜಗತ್ತು ಜಿ -20 ಅನ್ನು ಭರವಸೆಯಿಂದ ನೋಡುತ್ತಿದೆ ಎಂದು ಮೋದಿ ಹೇಳಿದ್ದಾರೆ.

ಸಮಾರೋಪ ಸಮಾರಂಭದಲ್ಲಿ ಮೋದಿ, ಜಿ20 ಕಾರ್ಯಸೂಚಿಯಲ್ಲಿ ಮಹಿಳಾ ನೇತೃತ್ವದ ಅಭಿವೃದ್ಧಿಗೆ ಆದ್ಯತೆ ನೀಡಬೇಕು ಎಂದು ಪ್ರತಿಪಾದಿಸಿದರು. ಭಾರತವು ಡಿಸೆಂಬರ್ 1, 2022 ರಿಂದ ಒಂದು ವರ್ಷದವರೆಗೆ G20 ಅಧ್ಯಕ್ಷ ಸ್ಥಾನವನ್ನು ವಹಿಸಿಕೊಳ್ಳಲಿದೆ.
ಮುಂದಿನ ಒಂದು ವರ್ಷದಲ್ಲಿ ಹೊಸ ಯೋಚನೆಗಳನ್ನು ರೂಪಿಸಲು ಮತ್ತು ಸಾಮೂಹಿಕ ಕ್ರಿಯೆಯನ್ನು ವೇಗಗೊಳಿಸಲು G-20 ಜಾಗತಿಕ ಪ್ರಧಾನ ಮೂವರ್ ಆಗಿ ಕಾರ್ಯನಿರ್ವಹಿಸುತ್ತದೆ ಎಂದು ಖಚಿತಪಡಿಸಿಕೊಳ್ಳಲು ನಾವು ಶ್ರಮಿಸುತ್ತೇವೆ. ನೈಸರ್ಗಿಕ ಸಂಪನ್ಮೂಲಗಳ ಮೇಲಿನ ಮಾಲೀಕತ್ವದ ಭಾವನೆ ಇಂದು ಸಂಘರ್ಷಕ್ಕೆ ಕಾರಣವಾಗುತ್ತಿದೆ. ಇದು ಪರಿಸರದ ದುಸ್ಥಿತಿಗೆ ಮುಖ್ಯ ಕಾರಣವಾಗಿದೆ. ಗ್ರಹದ ಸುರಕ್ಷಿತ ಭವಿಷ್ಯಕ್ಕಾಗಿ, ಟ್ರಸ್ಟಿಶಿಪ್ ಪ್ರಜ್ಞೆಯು ಪರಿಹಾರವಾಗಿದೆ. LiFE ಅಂದರೆ ‘ಪರಿಸರಕ್ಕಾಗಿ ಜೀವನಶೈಲಿ’ ಅಭಿಯಾನವು ಇದಕ್ಕೆ ದೊಡ್ಡ ಕೊಡುಗೆಯನ್ನು ನೀಡಬಹುದು. ಸುಸ್ಥಿರ ಜೀವನಶೈಲಿಯನ್ನು ಸಾಮೂಹಿಕ ಚಳುವಳಿಯನ್ನಾಗಿ ಮಾಡುವುದು ಇದರ ಉದ್ದೇಶವಾಗಿದೆ.

ಜಿ-20 ಅಧ್ಯಕ್ಷ ಸ್ಥಾನದ ಥೀಮ್ ಒಂದು ಭೂಮಿ, ಒಂದು ಕುಟುಂಬ, ಒಂದು ಭವಿಷ್ಯವನ್ನು ಹೈಲೈಟ್ ಮಾಡಿದ ಮೋದಿ ನಮ್ಮ ಮುಂದಿನ ಪೀಳಿಗೆಗಳು ಶಾಂತಿ ಮತ್ತು ಭದ್ರತೆಯಿಲ್ಲದೆ ಆರ್ಥಿಕ ಬೆಳವಣಿಗೆ ಅಥವಾ ತಾಂತ್ರಿಕ ಆವಿಷ್ಕಾರದ ಲಾಭವನ್ನು ಪಡೆಯಲು ಸಾಧ್ಯವಾಗುವುದಿಲ್ಲ ಎಂದು ಹೇಳಿದರು.
ಎರಡು ದಿನಗಳ G20 ಶೃಂಗಸಭೆಯ ಮುಕ್ತಾಯದ ಹೊತ್ತಲ್ಲಿ ಹಸ್ತಾಂತರ ಸಮಾರಂಭ ನಡೆದಿದೆ. ವಿದೇಶಾಂಗ ಕಾರ್ಯದರ್ಶಿ ವಿನಯ್ ಕ್ವಾತ್ರಾ ಅವರು ಜಿ 20 ‘ಫಲಿತಾಂಶದ ದಾಖಲೆ’ ಕರಡು ರಚನೆಗೆ ಭಾರತ ‘ರಚನಾತ್ಮಕ’ ಕೊಡುಗೆ ನೀಡಿದೆ ಎಂದು ಹೇಳಿದರು.









