


ಬೆಂಗಳೂರು: ಬೆಸ್ಕಾಂ ಕಚೇರಿಯಲ್ಲಿ ಹಾಡಹಗಲೇ ಹಣ ಕಳ್ಳತನ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿ ಗುತ್ತಿಗೆ ನೌಕರನೊಬ್ಬನನ್ನು ಕೆಂಗೇರಿ ಠಾಣೆ ಪೊಲೀಸರು ಬಂಧಿಸಿ 1.40 ಲಕ್ಷ ಹಣ ವಶ ಪಡಿಸಿಕೊಂಡಿದ್ದಾರೆ. ಬಂಧಿತ ಆರೋಪಿ ಮಂಡ್ಯ ಜಿಲ್ಲೆಯ ಹೇಮಂತ್ ಎನ್ನಲಾಗಿದೆ.

ಕೆಂಗೇರಿ ಉಪನಗರದ 5ನೇ ಮುಖ್ಯರಸ್ತೆ, 5ನೇ ಕ್ರಾಸ್ನಲ್ಲಿ ಬೆಸ್ಕಾಂ ಕಚೇರಿ ಇದೆ. ಕಳೆದ ಶುಕ್ರವಾರ ಬೆಳಗ್ಗೆ 8 ಗಂಟೆ ಸುಮಾರಿಗೆ ಕ್ಯಾಶ್ ಕಲೆಕ್ಟರ್ ಕವಿತಾ ಅವರು ಬಂದಿದ್ದಾರೆ. ಎಟಿಪಿ ಯಂತ್ರದಲ್ಲಿ ಹಿಂದಿನ ದಿನ ಸಂಗ್ರಹವಾಗಿದ್ದ ಹಣವನ್ನು ಬಾಕ್ಸ್ ನಲ್ಲಿಟ್ಟು ಕೊಠಡಿ ಲಾಕ್ ಮಾಡಿದ್ದರು.
ಅದೇ ಸಮಯಕ್ಕೆ ಸಹೋದ್ಯೋಗಿ ಹೇಮಂತ್ ಶುಕ್ರವಾರದ ಪೂಜೆ ನಿಮಿತ್ತ ಕವಿತಾ ಅವರಿಗೆ ಪ್ರಸಾದ ಕೊಡಲು ಬಂದಿದ್ದಾನೆ. ಕವಿತಾ ಅವರು ಪ್ರಸಾದವನ್ನು ಹಣವಿರುವ ಕೊಠಡಿಯಲ್ಲಿರಿಸಿ ಬರುವಂತೆ ಬೀಗದ ಕೀ ಕೊಟ್ಟು ಹೇಮಂತ್ಗೆ ಕಳುಹಿಸಿದ್ದರು.

ಆ ಸಂದರ್ಭದಲ್ಲಿ ಹೇಮಂತ್ ಪ್ರಸಾದವನ್ನು ಕೊಠಡಿಯಲ್ಲಿರಿಸಿ ಕೀಯನ್ನು ವಾಪಸ್ ಕವಿತಾಗೆ ನೀಡಿದ್ದಾನೆ. ಅಂದು 11.30ರ ಸುಮಾರಿಗೆ ಹಣ ಸಂಗ್ರಹಿಸಲು ಬಂದಿದ್ದ ಮಂಜುನಾಥ್ ಎಂಬುವವರು ಹಣವಿದ್ದ ಕೊಠಡಿಯ ಬಾಗಿಲು ತೆರೆದಿರುವ ಬಗ್ಗೆ ಕವಿತಾ ಗಮನಕ್ಕೆ ತಂದಿದ್ದಾರೆ.
ತಕ್ಷಣವೇ ಕವಿತಾ ಅವರು ಕೊಠಡಿಗೆ ಬಂದು ನೋಡಿದಾಗ 1.40 ಲಕ್ಷ ಹಣ ಕಳುವಾಗಿರುವುದು ಕಂಡುಬಂದಿದೆ. ಈ ಬಗ್ಗೆ ಕೆಂಗೇರಿ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಇದೀಗ ಆರೋಪಿಯನ್ನು ಬಂಧಿಸಿ ಹಣ ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.










