

ಮಂಗಳೂರು: ಬಸ್’ನಲ್ಲಿ ಪ್ರಯಾಣಿಸುತ್ತಿದ್ದ ವ್ಯಕ್ತಿಯೋರ್ವ ಯುವತಿಯರಿಬ್ಬರ ವೀಡಿಯೋ ಮಾಡಿ ಸಾರ್ವಜನಿಕವಾಗಿ ಗೂಸಾ ತಿಂದ ಘಟನೆ ಜಪ್ಪಿನಮೊಗರುವಿನಲ್ಲಿ ನಡೆದಿದೆ. ಮೊಬೈಲ್ ಮೂಲಕ ಚಿತ್ರೀಕರಿಸಿರುವ ಕಾಮುಕನೋರ್ವನನ್ನು ಪ್ರಯಾಣಿಕರೇ ಸೇರಿ ಥಳಿಸಿ ಪೊಲೀಸರಿಗೆ ಒಪ್ಪಿಸಿದ್ದಾರೆ.
ಆರೋಪಿಯನ್ನು ಮಡಿಕೇರಿ ಮೂಲದ ಮಹಮ್ಮದ್ ಯೂಸುಫ್ ಎನ್ನಲಾಗಿದೆ. ಯುವತಿಯರಿಬ್ಬರು ತಲಪಾಡಿಯಿಂದ ಮಂಗಳೂರು ಕಡೆಗೆ ಬಸ್ ನಲ್ಲಿ ತೆರಳುತ್ತಿದ್ದ ವೇಳೆ ಯೂಸುಫ್ ತೊಕ್ಕೊಟ್ಟಿನಲ್ಲಿ ಬಸ್ ಹತ್ತಿದ್ದು, ಬಳಿಕ ಚಾಲಕನ ಹತ್ತಿರದ ಕ್ಯಾಬಿನ್ ಸೀಟಲ್ಲಿ ಕುಳಿತಿದ್ದ. ಈ ವೇಳೆ ತನ್ನ ಮೊಬೈಲ್ ನಲ್ಲಿ ವೀಡಿಯೋ ತೆಗೆದಿದ್ದಾನೆ. ಇದನ್ನು ಗಮನಿಸಿದ ಪ್ರಯಾಣಿಕನೋರ್ವ ಆರೋಪಿಯ ಕೃತ್ಯವನ್ನು ಯುವತಿಯರ ಗಮನಕ್ಕೆ ತಂದಿದ್ದಾನೆ.
ತಕ್ಷಣವೇ ವಿಷಯ ತಿಳಿದ ಇತರ ಪ್ರಯಾಣಿಕರು ವ್ಯಕ್ತಿಯನ್ನು ಚೆನ್ನಾಗಿ ತರಾಟೆಗೆ ತೆಗೆದುಕೊಂಡು, ಜಪ್ಪಿನಮೊಗರು ಎಂಬಲ್ಲಿ ಆತನನ್ನು ಬಸ್ ನಿಂದ ಇಳಿಸಿ ಥಳಿಸಿದ್ದಾರೆ. ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಲಾಗಿದ್ದು, ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದುಕೊಂಡಿದ್ದಾರೆ.











