ಛತ್ತೀಸಗಢ: ಶಿಕ್ಷಕಿಯ ಖಾತೆಯಿಂದ ಬರೋಬ್ಬರಿ 3.22 ಲಕ್ಷ ರೂ ಕಳೆದುಕೊಂಡ ಘಟನೆ ಛತ್ತೀಸಗಢದ ಕಾಂಕರ್ ಜಿಲ್ಲೆಯ ಪಂಖಜೂರ್ ಊರಿನಲ್ಲಿ ನಡೆದಿದೆ.

ಶಿಕ್ಷಕಿ ಶುಭ್ರಾ ಪಾಲ್ ಅವರ ಬ್ಯಾಂಕ್ ಖಾತೆಯಿಂದ 3.22 ಲಕ್ಷ ರೂಪಾಯಿ ನಾಪತ್ತೆಯಾಗಿತ್ತು. ಅವರು ಬ್ಯಾಂಕ್ ವಹಿವಾಟು ನಡೆಸದಿದ್ದ ಹಿನ್ನೆಲೆಯಲ್ಲಿ ಅವರಿಗೆ ಈ ವಿಷಯ ತಿಳಿದುಬಂದಿರಲಿಲ್ಲ. ಆದರೆ ನಿನ್ನೆ ಬ್ಯಾಂಕ್ ಬ್ಯಾಲೆನ್ಸ್ ಚೆಕ್ ಮಾಡಿದಾಗ ಹಣ ನಾಪತ್ತೆಯಾಗಿರುವುದು ತಿಳಿದಿದೆ. ಮೂರು ತಿಂಗಳಿನ ಅಂತರದಲ್ಲಿ ಇಷ್ಟು ಹಣ ಮಾಯವಾಗಿದೆ. ಕಕ್ಕಾಬಿಕ್ಕಿಯಾದ ಅವರು, ಸೈಬರ್ ಕ್ರೈಂ ಪೊಲೀಸರಿಗೆ ದೂರು ನೀಡಿದ್ದಾರೆ. ಅಚ್ಚರಿ ವಿಷಯವೆಂದರೆ ಯಾರಾದರೂ ದುಡ್ಡನ್ನು ಡ್ರಾ ಮಾಡಿಕೊಂಡರೆ ಸಹಜವಾಗಿ ಮೊಬೈಲ್ಫೋನ್ಗೆ ಓಟಿಪಿ ಬರುತ್ತದೆ. ಆದರೆ ಮಹಿಳೆ ಫೋನ್ ಚೆಕ್ ಮಾಡಿದಾಗ ಅದರಲ್ಲಿ ಓಟಿಪಿ ಕೂಡ ಇರಲಿಲ್ಲ. ಓಟಿಪಿಯೂ ಇಲ್ಲದೇ ಹಣ ಕದ್ದಿದ್ದಾರೆ ಎಂದು ಇವರು ಭಾರಿ ಸೈಬರ್ಕ್ರಿಮಿನಲ್ ಇರಬೇಕು ಎಂದು ಪೊಲೀಸರು ತಲೆಕೆಡಿಸಿಕೊಂಡಿದ್ದರು. ಪೊಲೀಸರು ಎಲ್ಲಾ ರೀತಿಯ ತನಿಖೆ ನಡೆಸಿದರೂ ಆಗ ಅವರಿಗೆ ಶಿಕ್ಷಕಿಯ ಖಾತೆಯಿಂದ 278 ವಹಿವಾಟುಗಳನ್ನು ಮಾಡಲಾಗಿದೆ ಎಂದು ತಿಳಿದುಬಂತು. ನಂತರ ಇನ್ನಷ್ಟು ತನಿಖೆ ನಡೆಸಿದಾಗ ಪೊಲೀಸರು ಮನೆಯಲ್ಲಿಯೇ ‘ಕಳ್ಳ’ ಇರುವುದಾಗಿ ಹೇಳಿದ್ದು ವಿಚಾರಣೆ ನಡೆಸಿದಾಗ ಅವರ 12 ವರ್ಷದ ಮಗನೇ ಈ ಕೃತ್ಯ ಎಸಗಿದ್ದಾನೆ ಎಂದು ತಿಳಿದುಬಂದಿದೆ.

ತನಿಖೆ ಬಳಿಕ ಈತ ‘ಫ್ರೀ ಫೈರ್’ ಎಂಬ ಆಟವಾಡಲು ಹೀಗೆ ಮಾಡಿದ್ದು ಆಟದಲ್ಲಿ ಮುಂದಿನ ಸ್ಟೆಪ್ ಹೋಗಲು ಹಣವನ್ನು ನೀಡಬೇಕಿತ್ತು. ಆಗ ಆನ್ಲೈನ್ ವ್ಯವಹಾರವನ್ನು ತಿಳಿದಿದ್ದ ಮಗ, ಅಮ್ಮನ ಮೊಬೈಲ್ನಲ್ಲಿಯೇ ಆಟವಾಡುತ್ತಿದ್ದರಿಂದ ಸುಲಭದಲ್ಲಿ ಅಲ್ಲಿಂದ ಹಣವನ್ನು ವರ್ಗಾಯಿಸುತ್ತಾ ಬಂದಿದ್ದಾನೆ. ಓಟಿಪಿ ಬಂದಾಗ ಅದನ್ನು ಡಿಲೀಟ್ ಮಾಡಿದ್ದಾನೆ. ವಿಷಯ ತಿಳಿದ ಪೊಲೀಸರೂ ಸುಸ್ತು, ಶಿಕ್ಷಕಿಯೂ ಸುಸ್ತು. ಹಣ ಕಳೆದುಕೊಂಡಿರುವ ಸಂಕಟದ ಜತೆಗೆ ಮಗನೇ ಕಳ್ಳ ಎಂದು ತಿಳಿದು ಬೆಚ್ಚಿ ಬಿದ್ದ ಅಮ್ಮ.











