ಶಿರ್ವ: ಕಟಪಾಡಿ- ಶಿರ್ವ ಮುಖ್ಯರಸ್ತೆಯ ಪಂಜಿಮಾರು ಪಾಲಮೆ ಬಳಿ ಕಾರು ಮತ್ತು ಟೆಂಪೋ ಮಧ್ಯೆ ಮುಖಾಮುಖಿ ಢಿಕ್ಕಿ ಸಂಭವಿಸಿ ಕಾರಿನಲ್ಲಿದ್ದ ಮಹಿಳೆ ಸ್ಥಳದಲ್ಲೇ ಸಾವನ್ನಪ್ಪಿದ್ದು, ಯುವಕ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಗೆ ಸಾಗಿಸುವ ವೇಳೆ ಮಾರ್ಗ ಮಧ್ಯೆ ಕೊನೆಯುಸಿರೆಳೆದಿರುವ ಘಟನೆ ಶನಿವಾರ ಸಂಜೆ ನಡೆದಿದೆ.

ಶಿರ್ವ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದ್ದು, ಪೊಲೀಸ್ ಅಧಿಕಾರಿಗಳು ಸಿಬಂದಿಗಳೊಂದಿಗೆ ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸುತ್ತಿದ್ದಾರೆ.

ಮೂಡಬಿದಿರೆಯಿಂದ ಉಡುಪಿ ಕಡೆಗೆ ಬರುತ್ತಿದ್ದ ಕಾರಿಗೆ ಕಟಪಾಡಿಯಿಂದ ಶಿರ್ವ ಕಡೆಗೆ ತೆರಳುತ್ತಿದ್ದ ಟೆಂಪೋ ಮುಖಾಮುಖಿಯಾಗಿ ಡಿಕ್ಕಿ ಸಂಭವಿಸಿದೆ. ಯುವಕನ ಸ್ಥಿತಿ ಚಿಂತಾಜನಕವಾಗಿತ್ತು. ಉಡುಪಿಯ ಸರಕಾರಿ ಆಸ್ಪತ್ರೆಗೆ ಸಾಗಿಸಲಾಗಿತ್ತು. ವೈದ್ಯರು ಸಾವನ್ನಪ್ಪಿರುವುದಾಗಿ ತಿಳಿಸಿದ್ದಾರೆ.

ಅಪಘಾತಕ್ಕೊಳಗಾದ ಕಾರು ಬೆಂಗಳೂರು ಮೂಲದ್ದು ಎಂದು ತಿಳಿದು ಬಂದಿದ್ದು, ಮೃತರ ಸ್ಪಷ್ಟ ಗುರುತು ಇನ್ನಷ್ಟೇ ತಿಳಿದು ಬರಬೇಕಿದೆ.
ಸ್ಥಳದಲ್ಲಿ ದೊರೆತ ಲೈಸೆನ್ಸ್ ಪ್ರಕಾರ ಮೃತ ಯುವಕ ಬೆಂಗಳೂರಿನ ಪವನ್ ಬಿ. ಎಸ್ (27) ಎಂದು ತಿಳಿದು ಬಂದಿದೆ.
ಹೆಚ್ಚಿನ ಮಾಹಿತಿ ಇನ್ನಷ್ಟೇ ತಿಳಿದು ಬರಬೇಕಿದೆ.









