

ಕಳೆದ ಯುಗಾದಿಯ ವೇಳೆ ಕನ್ನಡಿಗರ ಕಾರು ಚಾಲಕರ ಮೇಲೆ ಶ್ರೀಶೈಲದಲ್ಲಿ ಹಲ್ಲೆ ನಡೆಸಿ, ದೌರ್ಜನ್ಯ ನಡೆಸಲಾಗಿತ್ತು. ಆ ಬಳಿಕ ಈಗ ಮತ್ತೆ ಕನ್ನಡಿಗರ ಮೇಲೆ ದೌರ್ಜನ್ಯ ಮುಂದುವರೆದಿದೆ. ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಬಸ್ ಚಾಲಕ, ನಿರ್ವಾಹಕನ ಮೇಲೆ ಹಲ್ಲೆಗೈದಿದ್ದಾರೆ ದುಷ್ಕರ್ಮಿಗಳು. ಅಲ್ಲದೇ ಸಾರಿಗೆ ಬಸ್ ಗ್ಲಾಸ್ ಹೊಡೆದು ಪುಡಿ ಪುಡಿ ಮಾಡಲಾಗಿದೆ.
ಕೆಎಸ್ಆರ್ಟಿಸಿ ಬಸ್ ಚಾಲಕ ಬಸವರಾಜ್ ಬಿರಾದಾರ್ ಮತ್ತು ನಿರ್ವಾಹಕ ಜೆಡಿ ಮಾದರ್ ಹಲ್ಲೆಗೆ ಒಳಗಾಗಿದ್ದು, ದುಷ್ಕರ್ಮಿಗಳು ವಿಜಯಪುರ ಡಿಪೋಗೆ ಸೇರಿದ ಬಸ್ ಕಿಟಕಿ ಗಾಜುಗಳನ್ನ ಒಡೆದು ಹಾಕಿದ್ದಾರೆ. ಜೂನ್ 2 ರ ಮಧ್ಯರಾತ್ರಿ ಈ ಘಟನೆ ನಡೆದಿದ್ದು, ಶ್ರೀಶೈಲದಲ್ಲಿ ಬಸ್ ನಿಲ್ದಾಣದ ಬಳಿ ಬಸ್ ನಿಲ್ಲಿಸಿ ಊಟ ಮಾಡಿ ಕಟ್ಟೆಯ ಮೇಲೆ ಮಲಗಿದ್ದಾಗ ಏಕಾಏಕಿ ಪುಂಡರ ಗುಂಪೊಂದು ಬಂದು ಹಲ್ಲೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ.

ಬಸ್ ಚಾಲಕ ಬಸವರಾಜ ಬಿರದಾರನನ್ನು ಅವಾಚ್ಯ ಶಬ್ದಗಳಿಂದ ಕನ್ನಡಿಗ ಎನ್ನುವ ಕಾರಣದಿಂದ ನಿಂದಿಸಿ, ಬೈಯ್ಯಲಾಗಿದೆ. ಇದಷ್ಟೇ ಅಲ್ಲದೇ ಚಾಲಕನ ಮೇಲೆ ಹಲ್ಲೆ ಮಾಡಿದ್ದರ ಪರಿಣಾಮ, ಮುಖ, ಕಾಲಿಗೆ ಗಾಯಗಳಾಗಿವೆ. ಈ ಸಂದರ್ಭದಲ್ಲಿ ಚಾಲಕ ಬಸವರಾಜ ಬಿರದಾರ ರಕ್ಷಣೆಗಾಗಿ ಕೂಗಿಕೊಂಡಾಗ, ನಿರ್ವಾಹಕ ಕೂಡ ರಕ್ಷಣೆಗೆ ಧಾವಿಸಿದ್ದಾರೆ. ಅವರ ಮೇಲಿಯೂ ದುಷ್ಕರ್ಮಿಗಳು ಹಲ್ಲೆ ನಡೆಸಿದ್ದಾರೆ. ಈ ವೇಳೆ ಹೆಚ್ಚು ಜನರು ಸಾರಿಗೆ ಬಸ್ ಚಾಲಕ-ನಿರ್ವಾಹಕರ ರಕ್ಷಣೆಗೆ ಆಗಮಿಸಿದಾಗ, ಕಿಡಿಗೇಡಿಗಳು ಅಲ್ಲಿಂದ ಕಾಲ್ ಕಿತ್ತಿದ್ದಾರೆ. ಈ ಸಂಬಂಧ ಶ್ರೀಶೈಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

