



ಪುತ್ತೂರು : ಅರಿಯಡ್ಕ ಗ್ರಾಮ ಪಂಚಾಯತ್ ನೀರು ಪೂರೈಕೆಯ ಸಿಮೆಂಟ್ ಟ್ಯಾಂಕಿಯ ಒಳಗಡೆ ಯುವಕನ ಶವ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ.
ಪುತ್ತೂರು ತಾಲೂಕಿನ ಮಾಡ್ನೂರು ಗ್ರಾಮದ ತೋಟದ ಮೂಲೆ ನಿವಾಸಿ ದಿನೇಶ್ (18) ಮೃತ ಯುವಕನಾಗಿದ್ದಾನೆ.
ದಿನೇಶರಿಗೆ ಮದ್ಯಪಾನದ ಚಟವಿತ್ತು ಎನ್ನಲಾಗಿದ್ದು, ಮೂರು ದಿನಗಳ ಹಿಂದೆ ಇವರು ಮನೆಯಿಂದ ನಾಪತ್ತೆಯಾಗಿದ್ದರು. ಇದೀಗ ಅವರ ಮೃತದೇಹ ಪಂಚಾಯತ್ ನೀರು ಸರಬರಾಜಿನ ಓವರ್ ಹೆಡ್ ಟ್ಯಾಂಕ್‌ನಲ್ಲಿ ಪತ್ತೆಯಾಗಿದೆ.
ವಿದ್ಯುತ್ ಸಮಸ್ಯೆಯ ಕಾರಣದಿಂದಾಗಿ ಕಳೆದ ಮೂರು ದಿನಗಳಿಂದ ಈ ಓವರ್ ಹೆಡ್ ಟ್ಯಾಂಕ್‌ನಲ್ಲಿ ನೀರು ತುಂಬಿಸಿರಲಿಲ್ಲ. ಸೋಮವಾರ ವಿದ್ಯುತ್ ಸಮಸ್ಯೆ ಸರಿಪಡಿಸಲಾಗಿತ್ತು. ಬಳಿಕ ಟ್ಯಾಂಕ್‌ಗೆ ನೀರು ತುಂಬಿಸಲಾಗಿತ್ತು. ಮಂಗಳವಾರ ನೀರು ಬಿಡುವಾತ ನೀರು ತುಂಬಿರುವ ಬಗ್ಗೆ ಟ್ಯಾಂಕ್‌ಗೆ ಹತ್ತಿ ಪರಿಶೀಲನೆ ನಡೆಸುತ್ತಿದ್ದಾಗ ಮೃತದೇಹ ಕಂಡುಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಬಳಿಕ ಮೃತದೇಹವನ್ನು ಪುತ್ತೂರು ಸರಕಾರಿ ಆಸ್ಪತ್ರೆಗೆ ಸಾಗಿಸಿ ಮರಣೋತ್ತರ ಪರೀಕ್ಷೆ ನಡೆಸಲಾಯಿತು. ಪುತ್ತೂರು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.