ಮಂಗಳೂರು: ಉಕ್ರೇನ್ ನಿಂದ ಆಗಮಿಸಿದ ಮಂಗಳೂರು ತಾಲೂಕಿನ ಅನನ್ಯಾ ಅನ್ನಾ, ಕ್ಲಾಟಸ್ ಒಸ್ಮಂಡ್ ಡಿಸೋಜಾ, ಅಹಮದ್ ಸಾದ್ ಅರ್ಷಾದ್, ಲಕ್ಷಣ ಪುರುಷೊತ್ತಮ ಹಾಗೂ ಮೂಡುಬಿದ್ರೆ ತಾಲೂಕಿನ ಶಲ್ವಿನ್ ಪ್ರೀತಿ ಅರ್ನಾ ಎಂಬ ಐವರು ವಿದ್ಯಾರ್ಥಿಗಳು ಮಾ.7ರ ಸೋಮವಾರ ನಗರದಲ್ಲಿರುವ ಜಿಲ್ಲಾಧಿಕಾರಿಗಳ ಕಚೇರಿಗೆ ಆಗಮಿಸಿ, ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ. ಅವರನ್ನು ಭೇಟಿ ಮಾಡಿ ಧನ್ಯವಾದ ತಿಳಿಸಿದರು.
ಇದೇ ಸಂದರ್ಭದಲ್ಲಿ ತಮ್ಮ ಅನುಭವಗಳನ್ನು ಜಿಲ್ಲಾಧಿಕಾರಿಯವರೊಂದಿಗೆ ಹಂಚಿಕೊಂಡರು.
ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ. ಅವರು ವಿದ್ಯಾರ್ಥಿಗಳನ್ನು ಆತ್ಮೀಯವಾಗಿ ಬರಮಾಡಿಕೊಂಡು ಅವರಿಗೆ ಹೂಗುಚ್ಛ ಹಾಗೂ ಪುಸ್ತಕ ನೀಡಿ ಸ್ವಾಗತಿಸಿದರು.
ವಿದ್ಯಾರ್ಥಿಗಳು ಮನೆಗೆ ಹೋಗದೇ ವಿಮಾನನಿಲ್ದಾಣದಿಂದ ನೇರವಾಗಿ ಜಿಲ್ಲಾಧಿಕಾರಿ ಕಚೇರಿಗೆ ಬಂದು, ಜಿಲ್ಲಾಧಿಕಾರಿಯವರೊಂದಿಗೆ ಕೇಕ್ ಕತ್ತರಿಸಿದ್ದು, ವಿಶೇಷವಾಗಿತ್ತು.
ಈ ಸಂದರ್ಭದಲ್ಲಿ ವಿದ್ಯಾರ್ಥಿಗಳ ಪೋಷಕರು ಕೂಡ ಇದ್ದರು.
ಮಂಗಳೂರಿಗೆ ಈ ವಿದ್ಯಾರ್ಥಿಗಳನ್ನು ಕರೆತರುವಲ್ಲಿ ಜಿಲ್ಲಾಧಿಕಾರಿಯವರು ವಹಿಸಿದ ಮಹತ್ತರ ಪಾತ್ರದ ಬಗ್ಗೆ ವಿದ್ಯಾರ್ಥಿಗಳು ಸ್ಮರಿಸಿಕೊಂಡರು.