


ಬಂಟ್ವಾಳ ತಾಲೂಕಿನ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ ಪೆರುವಾಯಿ ಇಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಮರಾಟಿ ಸಂರಕ್ಷಣಾ ಸಮಿತಿ (ರಿ ) ಮಂಗಳೂರು ಇದರ ವತಿಯಿಂದ ಸ್ವಚ್ಛತಾ ಆಂದೋಲನ, ಶಾಲಾ ಕೈ ತೋಟ ನಿರ್ಮಾಣ ಕಾರ್ಯಕ್ರಮ ನಡೆಯಿತು. ಪೆರುವಾಯಿ ಪಂಚಾಯತ್ ಅಧ್ಯಕ್ಷ ಬಾಲಕೃಷ್ಣ ಪೂಜಾರಿ ಹಾಗೂ ದ. ಕ. ಜಿಲ್ಲಾ ಮರಾಟಿ ಸಂರಕ್ಷಣಾ ಸಮಿತಿ ಅಧ್ಯಕ್ಷ ಅಶೋಕ್ ನಾಯ್ಕ್ ಕೆದಿಲ ಇವರ ಅಧ್ಯಕ್ಷತೆಯಲ್ಲಿ ನಡೆಯಿತು.
ಶಾಲಾ ಮಕ್ಕಳ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ಪ್ರಾರಂಭವಾಯಿತು. ಬಂದಿರುವ ಎಲ್ಲಾ ಶ್ರಮದಾನಿಗಳನ್ನು ಶಾಲಾ ಮುಖ್ಯ ಗುರುಗಳು ಪ್ರಾಸ್ತಾವಿಕ ಮಾತುಗಳೊಂದಿಗೆ ಸ್ವಾಗತಿಸಿದರು.

ಜಿಲ್ಲಾ ಅಧ್ಯಕ್ಷರು ಮಾತನಾಡುತ್ತಾ ಪ್ರತಿ ವರ್ಷವು ಕೆಲವು ಗ್ರಾಮಾಂತರ ಶಾಲೆಗಳನ್ನು ಆಯ್ಕೆ ಮಾಡಿ ಸ್ವಚ್ಛತೆ, ಗಿಡ ನೆಡುವ ಕಾರ್ಯಕ್ರಮ ವನ್ನು ಮಾಡುತಿದ್ದೆವು ಆದರೆ ಈ ವರ್ಷ ದಿಂದ ಶಾಲಾ ಮಕ್ಕಳಲ್ಲಿ ಸಾವಯವ ತರಕಾರಿ ಬೆಳೆಯುವ ಬಗ್ಗೆ ಅರಿವು ಮೂಡಿಸಲು ಶಾಲಾ ಆವರಣದಲ್ಲಿ ತರಕಾರಿ ಬೀಜ ಹಾಗೂ ತರಕಾರಿ ಗಿಡ ಗಳನ್ನು ನೆಡುವ ಕಾರ್ಯಕ್ರಮವನ್ನು ಅಳವಡಿಸಿದ್ದೇವೆ ಎಂದರು.

ಪಂಚಾಯತ್ ಅಧ್ಯಕ್ಷ ಬಾಲಕೃಷ್ಣ ಪೂಜಾರಿ ಮಾತನಾಡಿ ಜಿಲ್ಲಾ ಅಧ್ಯಕ್ಷರು ಹಲವು ಭಾರಿ ನನ್ನನು ಸಂಪರ್ಕಿಸಿ ಕೆಲವು ವಿಚಾರಗಳ ಬಗ್ಗೆ ಸಲಹೆಯನ್ನು ಕೊಟ್ಟಿದ್ದಾರೆ. ಅಲ್ಲದೆ ಕೇರಳ ಕರ್ನಾಟಕ ಗಡಿ ನಾಡಿನಲ್ಲಿ ನಾವು ಇರುವುದರಿಂದ ಜಾತಿ ಪ್ರಮಾಣ ಪತ್ರದ ಸಮಸ್ಯೆ ಆಗುತಿದ್ದು ಇದನ್ನು ಸರಿಪಡಿಸುವಲ್ಲಿ ಸಂರಕ್ಷಣಾ ಸಮಿತಿ ಯ ಸಹಕಾರಬೇಕು ಎಂದರು.

ವೇದಿಕೆಯಲ್ಲಿ ಶಾಲಾ ಸಂಚಾಲಕ ಕೃಷ್ಣರಾಜೇಶ್ವರಿ,, ಸಂರಕ್ಷಣಾ ಸಮಿತಿ ಸಂಚಾಲಕ ಶ್ರೀಧರ್ ಯಂ, ಸ್ವಚ್ಛತಾ ಸಂಚಾಲಕ ತಿರುಮಲೇಶ್ವರ ಪೆರುವಾಯಿ, ಜಿಲ್ಲಾ ಕಾರ್ಯದರ್ಶಿ ವಿಮಲಾ ದೈತೋಟ, ಶಾಲಾ ಮುಖ್ಯ ಗುರುಗಳು ಉಪಸ್ಥಿತರಿದ್ದರು. ಶಾಲಾ ಸಹ ಶಿಕ್ಷಕರರು ಧನ್ಯವಾದವಿತ್ತರು. ಶ್ರಮದಾನದಲ್ಲಿ ಶಾಲಾ ಪೋಷಕರು, ಶಾಲಾ ಮಕ್ಕಳು ಸಹಕರಿಸಿದರು. ಶಾಲಾ ವತಿಯಿಂದ ಬೆಳಗ್ಗಿನ ಉಪಹಾರ, ಮಧ್ಯಾಹ್ನ ದ ಊಟ ವ್ಯವಸ್ಥೆ ಮಾಡಿದ್ದರು. ಶಾಲಾ ಗೌರವ ಶಿಕ್ಷಕಿಯರು ಸಹಕರಿಸಿದರು.

