

ಬೆಂಗಳೂರು: ವ್ಯಕ್ತಿಯನ್ನು ಕೊಲೆಗೈದು ಬಳಿಕ ಮೃತದೇಹವನ್ನು ಮಾಗಡಿಯ ಹೊನ್ನಾಪುರ ಕೆರೆಗೆ ಎಸೆದು ಹೋದ ಪ್ರಕರಣಕ್ಕೆ ಸಂಬಂಧಿಸಿ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿಗಳು ಮಂಜುನಾಥ್, ರಾಜು ಎನ್ನಲಾಗಿದೆ.
ಕೊಲೆಯಾದ ವ್ಯಕ್ತಿ ದಿವಾಕರ್ ಶೆಟ್ಟಿ ಎನ್ನಲಾಗಿದೆ. ಮೃತ ದಿವಾಕರ್ ಶೆಟ್ಟಿ ಚಿನ್ನದ ವ್ಯಾಪಾರ ಮಾಡಿ ಕೊಂಡಿದ್ದರು. ದಿವಾಕರ್ ನಾಪತ್ತೆಯಾಗಿರುವ ಕುರಿತು ಪುಟ್ಟೇನಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಆದರೆ ಹೊನ್ನಾಪುರ ಕೆರೆಯಲ್ಲಿ ಇದೀಗ ಶವವಾಗಿ ಪತ್ತೆಯಾಗಿದ್ದಾರೆ. ಬೆಂಗಳೂರಿನ ಬನಶಂಕರಿಯಲ್ಲಿ ಕೊಲೆಗೈದು ಮಾಗಡಿಯ ಹೊನ್ನಾಪುರ ಕೆರೆಗೆ ಶವ ಹಾಕಿದ್ದಾರೆ.

ಮಂಜುನಾಥ್ ಎಂಬುವವನು ದಿವಾಕರ್ ಶೆಟ್ಟಿ ಜೊತೆ ಕೊನೆಯದಾಗಿ ಮಾತನಾಡಿದ್ದನಂತೆ. ಈ ಹಿಂದೆ 20 ಗ್ರಾಂ ಚಿನ್ನವನ್ನ ಮಂಜುನಾಥ್ ಗಿರವಿ ಇಟ್ಟಿದ್ದ. ಹಣ ನೀಡದಿದ್ದಕ್ಕೆ ಮೃತ ದಿವಾಕರ್ ಶೆಟ್ಟಿ ಧಮ್ಕಿ ಹಾಕಿದ್ದಾರೆ. ಈ ಹಿನ್ನೆಲೆ ದಿವಾಕರ್ನ ಕತ್ತು ಹಿಸುಕಿ ಮಂಜುನಾಥ್ ಮತ್ತು ರಾಜು ಎಂಬುವವರು ಕೊಲೆ ಮಾಡಿದ್ದಾರೆ ಎನ್ನಲಾಗಿದೆ.
ಸದ್ಯ ಮಾಗಡಿಯ ಹೊನ್ನಾಪುರ ಕೆರೆಯಲ್ಲಿ ದಿವಾಕರ್ ಶೆಟ್ಟಿ ಶವ ಪತ್ತೆಯಾಗಿದ್ದು, ಸ್ಥಳಕ್ಕೆ ಮಾಗಡಿ ಹಾಗೂ ಪುಟ್ಟೇನಹಳ್ಳಿ ಪೊಲೀಸರು ಭೇಟಿ ನೀಡಿ, ಪರಿಶೀಲಿಸಿದ್ದಾರೆ. ಮೃತ ದೇಹವನ್ನು ಪೊಲೀಸರು ಕಿಮ್ಸ್ ಅಸ್ಪತ್ರೆಗೆ ಸಾಗಿಸಿದ್ದಾರೆ. ಕೆರೆಯಲ್ಲಿ ಮೃತನ ಬೈಕ್ ಸಹ ಪತ್ತೆಯಾಗಿದೆ ಎಂದು ತಿಳಿದುಬಂದಿದೆ.









