ಬೆಳಗಾವಿ: ರಾಜ್ಯದಲ್ಲಿ ಕೋಮು ಸಂಘರ್ಷದ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ನಡುವೆಯೇ ಇದೀಗ ಬೆಳಗಾವಿಯಲ್ಲಿಯೂ ಕೋಮು ದ್ವೇಷದ ಜ್ವಾಲೆ ಹೊತ್ತಿರುವ ಅನುಮಾನ ಮೂಡಿದೆ. ಈ ಮಾತಿಗೆ ಪುಷ್ಠಿ ಎಂಬಂತೆ ಹಿಂದೂ ಮುಖಂಡ ಹಾಗೂ ಶ್ರೀರಾಮ ಸೇನೆ ಜಿಲ್ಲಾಧ್ಯಕ್ಷನ ಮೇಲೆ ಫೈರಿಂಗ್ ನಡೆದಿರುವ ವಿಚಾರವೊಂದು ಬೆಳಕಿಗೆ ಬಂದಿದೆ. ಬೆಳಗಾವಿ ತಾಲೂಕಿನ ಹಿಂಡಲಗಾ ಗ್ರಾಮದ ಬಳಿಯಲ್ಲಿ ಬೆಳಗಾವಿಯ ಶ್ರೀರಾಮ ಸೇನೆ ಜಿಲ್ಲಾಧ್ಯಕ್ಷ ರವಿ ಕೋಕಿತಕರ್ ಮೇಲೆ ಅಪರಿಚಿತರು ಫೈರಿಂಗ್ ನಡೆಸಿದ್ದಾರೆ
ಕಾರಿನಲ್ಲಿ ಪ್ರಯಾಣಿಸುತ್ತಿದ್ದ ರವಿ ರೋಡ್ ಹಂಪ್ನಲ್ಲಿ ವಾಹನದ ವೇಗವನ್ನು ಸ್ಲೋ ಮಾಡಿದ ಸಂದರ್ಭದಲ್ಲಿ ಅಪರಿಚಿತರು ಫೈರಿಂಗ್ ಮಾಡಿದ್ದಾರೆ. ರವಿ ಕೋಕಿತಕರ್ನ ಗದ್ದಕ್ಕೆ ಬುಲೆಟ್ ತಗುಲಿದ್ದು ಬಳಿಕ ಇದೇ ಗುಂಡು ಚಾಲಕನ ಕೈಗೂ ತಗುಲಿದೆ. ಚಾಲಕನ ಕೈಯಲ್ಲಿ ಬುಲೆಟ್ ಸಿಲುಕಿದ್ದು ರವಿ ಹಾಗೂ ಅವರ ಚಾಲಕ ಇಬ್ಬರನ್ನು ಬೆಳಗಾವಿ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಘಟನೆಯಲ್ಲಿ ರವಿ ಕೋಕಿತಕರ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಬೆಳಗಾವಿ ಗ್ರಾಮೀಣ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ಸಂಭವಿಸಿದೆ. ಇನ್ನು ಶ್ರೀರಾಮ ಸೇನೆ ಬೆಳಗಾವಿ ಜಿಲ್ಲಾಧ್ಯಕ್ಷ ರವಿ ಕೋಕಿತಕರ್ ಮೇಲೆ ಫೈರಿಂಗ್ ನಡೆಸಿದ ವಿಚಾರ ಬೆಳಕಿಗೆ ಬರುತ್ತಿದ್ದಂತೆಯೇ ಹಿಂದೂಪರ ಸಂಘಟನಾ ಕಾರ್ಯಕರ್ತರು ರವಿಯನ್ನು ದಾಖಲು ಮಾಡಲಾದ ಖಾಸಗಿ ಆಸ್ಪತ್ರೆಯತ್ತ ಧಾವಿಸಿದ್ದಾರೆ. ಅದೃಷ್ಟವಶಾತ್ ರವಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಗುಂಡೇಟಿಗೆ ರವಿ ಕಾರು ಚಾಲಕ ಮನೋಜ್ ದೇಸೂರಕರ್ರಿಗೂ ಗಾಯಗಳಾಗಿದ್ದು ಇದೇ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿದಿದೆ. ಬೈಕ್ನಲ್ಲಿ ಬಂದಿದ್ದ ಇಬ್ಬರು ಅಪರಿಚಿತ ಯುವಕರು ಈ ಕೃತ್ಯ ಎಸಗಿದ್ದಾರೆ ಎನ್ನಲಾಗಿದೆ. ಘಟನೆ ಬಗ್ಗೆ ಮಾಹಿತಿ ತಿಳಿಯುತ್ತಿದ್ದಂತೆಯೇ ಬೆಳಗಾವಿ ಖಾಸಗಿ ಆಸ್ಪತ್ರೆಗೆ ಡಿಸಿಪಿ ರವೀಂದ್ರ ಗಡಾದಿ ಭೇಟಿ ನೀಡಿದ್ದು ರವಿ ಹಾಗೂ ಚಾಲಕನ ಆರೋಗ್ಯ ವಿಚಾರಿಸಿದ್ದಾರೆ. ಮಾತ್ರವಲ್ಲದೇ ಮುಂಜಾಗ್ರತಾ ಕ್ರಮವಾಗಿ ಖಾಸಗಿ ಆಸ್ಪತ್ರೆ ಬಳಿಯಲ್ಲಿ ಒಂದು ಕೆಎಸ್ಆರ್ಪಿ ತುಕಡಿ ನಿಯೋಜನೆ ಮಾಡಲಾಗಿದೆ.