Sunday, May 5, 2024
spot_imgspot_img
spot_imgspot_img

ಆಧುನಿಕ ಶಿಕ್ಷಣ ವ್ಯವಸ್ಥೆ ಗುರುಸ್ಥಾನಕ್ಕೆ ಧಕ್ಕೆ ತರುತ್ತಿದೆಯೇ?

- Advertisement -G L Acharya panikkar
- Advertisement -

✍️ರಾಧಾಕೃಷ್ಣ ಎರುಂಬು

ನಹಿ ಜ್ಞಾನೇನ ಸದೃಶಂ ಪವಿತ್ರಮಿಹ ವಿದ್ಯತೇ ।ತತ್ ಸ್ವಯಂ ಯೋಗಸಂಸಿದ್ಧಃ ಕಾಲೇನಾತ್ಮನಿ ವಿಂದತಿ ಎಂಬಂತೆ ಜ್ಞಾನ ಮಹಾಪವಿತ್ರವಾದದ್ದು. ಅದಕ್ಕೆ ಸಾಟಿಯಾದ ಇನ್ನೊಂದು ಈ ಪ್ರಪಂಚದಲ್ಲಿಲ್ಲ. ಯಾಕೆಂದರೆ ಜ್ಞಾನವೆಂದರೆ ಭಗವಂತ. ಆದ್ದರಿಂದ “ಜ್ಞಾನ ಮಾರ್ಗವನ್ನು ಹಿಡಿ, ಕಾಲ ಪರಿಪಕ್ವವಾದಾಗ ನೀನು ಸಿದ್ಧಿಯನ್ನು ಪಡೆದೇ ಪಡೆಯುತ್ತಿ “. ಈ ಪವಿತ್ರ ಜ್ಞಾನ ಸಂಪಾದನೆಗೆ ಗುರುವಿನ ಆಯ್ಕೆಯು ಮುಖ್ಯವಾದುದೇ ಆಗಿದೆ. ಸಮರ್ಥ ಗುರುವೆಂದು ಆರಿಸಲ್ಪಟ್ಟ ಗುರು ಗಡಣಕ್ಕೆ ಶಿಕ್ಷಕರ ದಿನಾಚರಣೆಯ ಶುಭಾಶಯಗಳು.

ಗುರುಕುಲ ಶಿಕ್ಷಣ ಪದ್ಧತಿಯಲ್ಲಿ ಗುರುವಿಗೆ ದೇವರ ಸ್ಥಾನ. ಶ್ರೇಷ್ಟ ಕುಲಕ್ಕೆ ಸೀಮಿತವಾಗಿ ಬದುಕಲು ದಾರಿ ದೀವಿಗೆ ತೋರಿ ಅನ್ನ ದಾಹ, ಅಕ್ಷರ ದಾಹ, ಸ್ವ ರಕ್ಷಣೆ ಗಳೇ ಮೊದಲಾದ ದಾಸೋಹ ಗಳ ಕೇಂದ್ರಸ್ಥಾನ ಗುರುವಿನದ್ದೇ. ಕ್ರಮೇಣ ಇವೆಲ್ಲ ಬದಿ ಸರಿದು, ಮನೆ – ಮಠ ಗಳಲ್ಲಿ ಆರಂಭವಾದ ಶಿಕ್ಷಣ ಕ್ರಮ ಶಿಕ್ಷಕ “ಗುರುಗಳು” ಎನ್ನುವಲ್ಲಿ ತೃಪ್ತಿ ಪಡೆದು ರಾಜಾಜ್ಞೆ ಯಂತೆ ನಡೆಯಬೇಕಾಯಿತು. ಅಲ್ಲಿ ಶಿಷ್ಯನಿಗೆ ಕೇವಲ ಯುದ್ಧ ವಿದ್ಯೆ, ಅಕ್ಷರ ವಿದ್ಯೆ ಮೂಲವಾಗಿ ಗುರು ರಾಜಾಜ್ಞೆಗೆ ಒಳಪಟ್ಟ. ಬಳಿಕ ಸರಕಾರದ ಕೃಪಾಪೋಷಿತವಾಗಿ ಮನೆ ಜಗಲಿ, ದೇವಾಲಯ, ಮಠಗಳಲ್ಲಿರುವ ಶಿಕ್ಷಣಾಲಯ ಅಕ್ಷರನೀಡಲು ಸ್ವ ಕಟ್ಟಡದಲ್ಲಿ ಆರಂಭವಾಗಿ ‘ಗುರು’ ಸರಕಾರದಿಂದ ಅನುಮೋದಿತ “ಮೇಸ್ಟ್ರು”ಎಂಬ ಪಾತ್ರದಾರಿಯಾದ.

ಎಲ್ಲ ಕಡೆ ಅವಿದ್ಯಾವಂತರೇ ಹೆಚ್ಚಿದ್ದ ಕಾಲಕ್ಕೆ ಸ್ವಲ್ಪ ಗೌರವ ಹೆಚ್ಚಿಸಿಕೊಂಡಿದ್ದ ‘ಗುರು’ ಸಾಮಾಜಿಕವಾಗಿ ಮನ್ನಣೆ ಗಳಿಸಿದ್ದ. ತದನಂತರ ಸರಕಾರಿ ಹಾಗೂ ಖಾಸಗಿ ಸಂಸ್ಥೆಗಳೆಂಬ ವಿಭಾಗದಲ್ಲಿ ಸರಕಾರಿ ಯಾ ಖಾಸಗಿ ವೇತನ ,ಭಡ್ತಿ ನೀತಿ ಜೊತೆಗೆ ವಿದ್ಯೆ ನೀಡುವ ಬಗ್ಗೆ ನಿಯಮ ನಿಬಂದನೆಗಳು ಹೆಚ್ಚಾದಾಗ ಗುರುವು ಶಕ್ತಿ ಕಳೆದುಕೊಂಡು ಸರಕಾರದ ಯಾ ಖಾಸಗಿ ಸಂಸ್ಥೆಗಳ ನಿಯೋಜಿತ ನೌಕರನಾಗಿಬಿಟ್ಟ. ಶಿಕ್ಷಣ ನೀತಿಯ ಆಧುನೀಕರಣ ಗುರುವಿನ ಮೇಲಿದ್ದ ಅಪಾರ ನಂಬಿಕೆ ಗೌರವವನ್ನು ಕಸಿದುಕೊಂಡಿತೋ ಎಂದೇ ಭಾಸವಾಗಿದೆ. ‘ಹೇಳಿದಷ್ಟು ಮಾಡಿ’ ಎಂಬ ತರಬೇತಿ ಒಂದು ಕಡೆಯಾದರೆ, ಸರಕಾರದ ನಿಯಮ ಏನು ಹೇಳುತ್ತದೆ ಎಂಬ ಹೆತ್ತವರ ಆದೇಶದ ಮಾತುಗಳು, ವಿದ್ಯಾರ್ಥಿಗಳು ಶಿಕ್ಷಕರ ಮೌಲ್ಯ ಮಾಪಕರಾಗಿ ಬಿಟ್ಟಿದ್ದಾರೆ. ಈ ಪದ್ಧತಿಯಲ್ಲಿ ಗುರುವಿನ ಗೌರವ ಸ್ಥಾನ ಬಿಡಿ, ಸಾಮಾನ್ಯ ಕೂಲಿ ನೌಕರನ ಕ್ರಿಯಾಶೀಲತೆಯ ಸ್ವಾತಂತ್ರ ಶಿಕ್ಷಕನಿಗಿದೆಯಾ? ಎಂಬ ಚಿಂತನೆ ಮಾಡಬೇಕಿದೆ. ಶಿಕ್ಷಕ ದಿನ ಬೆಳಗಾದರೆ ಒಮ್ಮೆ ಸಂಜೆಯಾಗಲಿ ಎಂದು ಅವಧಿಗಳ ನಡುವೆ ಚಪ್ಪಟೆಯಾಗುತ್ತಿದ್ದಾರೆ.

ನಲಿಕಲಿ, ಕಲಿಕಾ ಚೇತರಿಕೆ,ಶಿಕ್ಷಣ ನೀತಿ ಪರೀಕ್ಷೆಗಳು, ವಿಶೇಷ ದಿನಾಚರಣೆ ನಡುವೆ, ಕಾರಂಜಿಯಂತೆ ದಿನಕ್ಕೊಂದು ಸ್ಪರ್ಧೆಗಳನ್ನು ಮಾಡುತ್ತ ಮಾಡುತ್ತ ತನ್ನ ಸಂಸಾರದ ಚುಕ್ಕಾಣಿ ಹಿಡಿದು FA ಗಳು SA ಗಳಿಗೆ ಸಿದ್ದ ಗೊಳಿಸಿ 100% ಫಲಿತಾಂಶ ತೆಗೆಸಿ ಕೊಡಬೇಕಾದ “ಆಲ್ ಇನ್ ಒನ್” ಯಂತ್ರವಾಗಿ ಬಿಟ್ಟಿದ್ದಾನೆ. ಕೊನೆಗೂ “ಚೆನ್ನಾಗಿ ಮಾಡಿದ್ದಾರೆ ಶಿಕ್ಷಕರು” ಎಂಬ ಮಾತು ಬಂದರೆ ಅದೇ ಬಲುದೊಡ್ಡ ಬಹುಮಾನವಾಗುತ್ತದೆ. ಪ್ರಸ್ತುತ ಶಿಕ್ಷಣ ಮುಗಿಸಿ ಹೋದ ವಿದ್ಯಾರ್ಥಿ ಮರುದಿನದಿಂದಲೇ ಶಿಕ್ಷಕರನ್ನು ಶುಲ್ಕಕೊಟ್ಟದ್ದಕ್ಕೆ ಮಾಡಿದ್ದಾರೆಂದರೆ, ಆಳುವವರು ನಿಮ್ಮ ಪ್ರಯತ್ನ ಏನೂ ಸಾಲದೆನ್ನುವರು, ಹೆತ್ತವರು ತನ್ನ ಮಗನಿಗೆ/ಳಿಗೆ ನೀಡಿದ ಶಿಕ್ಷೆಗಳನ್ನು ನೆನಪಿಸುವುದರ ಪೊಟ್ಟಣಗಳೇ ಬಹುಮಾನಗಳಾಗುತ್ತದೆ.

ಬಹುಷಃ ಸರ್ವಪಲ್ಲಿ ರಾಧಾಕೃಷ್ಣನ್ ರವರ ಜನ್ಮದಿನ ವಿಲ್ಲದಿರುತಿದ್ದರೆ ಶಿಕ್ಷಕರಿಗೆ ಮಾನ್ಯತೆಯಿರುತ್ತಿತ್ತೋ?ಎಂಬ ಪ್ರಶ್ನೆಯಿದೆ. ಹಾಗೆಂದು 10%ದಷ್ಟು ವಿದ್ಯಾರ್ಥಿಗಳು, ಪೋಷಕರು, ಖಾಸಗಿ -ಸರಕಾರಿ ಸಂಸ್ಥೆಗಳು ನೀಡುತ್ತಿರುವ ಗೌರವವನ್ನು ಮರೆಯಲಾಗದು. ಅದು ಶಿಕ್ಷಕನ ಹೃದಯದ ಎಲ್ಲಾ ನೋವನ್ನು ತಣಿಸುತ್ತದೆ ಮತ್ತು ನುಂಗಲಾರದ ನೋವಿಗೆ ಸಹಿಸುವ ಶಕ್ತಿ ಕೊಡುತ್ತದೆ. ಪ್ರಸ್ತುತ ಎಲ್ಲ ವ್ಯವಸ್ಥೆ ಶಿಕ್ಷಕರ ಸಾಧನೆಗೆ ಗೌರವ ನೀಡುವ ಕೈಂಕರ್ಯಕ್ಕೆ ಪ್ರಾಶಸ್ತ್ಯ ನೀಡುತಿದೆ. ಗೌರವಾನ್ವಿತ ಶಿಕ್ಷಕರೇ, ನಿಮ್ಮ ಕ್ಷಮಾಗುಣಕ್ಕೆ ಸಮಾನ ಇನ್ನಾವುದು ಇಲ್ಲ. ಎಲ್ಲಾ ಮನ್ನಿಸಿ ಗುರುಸ್ಥಾನಕ್ಕೆ ಸಲ್ಲಿಸುವ ಗೌರವವನ್ನು ಸ್ವೀಕರಿಸೋಣ, ಗುರುಸ್ಥಾನವನ್ನು ಉಳಿಸಲು ಕ್ರಿಯಾಶೀಲತೆಯ ಶತಪಥ ಪ್ರಯತ್ನ ಮಾಡೋಣ. ಅಪಾರ ಶಿಷ್ಯ ವರ್ಗ ಪಡೆದು ಜ್ಞಾನಿಗಳ, ಮಾನವೀಯತೆಯ ಜಗತ್ತನ್ನು ಕಟ್ಟೋಣ.

- Advertisement -

Related news

error: Content is protected !!