Thursday, April 25, 2024
spot_imgspot_img
spot_imgspot_img

ಇಡ್ಕಿದು: ಯಶಸ್ವಿಯಾಗಿ ನಡೆದ ಉಚಿತ ನೇತ್ರ ಚಿಕಿತ್ಸಾ ಶಿಬಿರ

- Advertisement -G L Acharya panikkar
- Advertisement -

576 ಜನರಿಗೆ ಉಚಿತ ಕಣ್ಣಿನ ತಪಾಸಣೆ, ಕಣ್ಣಿನ ಪೊರೆ ಚಿಕಿತ್ಸೆ (IOL ಅಳವಡಿಕೆ), 533 ಮಂದಿಗೆ ಉಚಿತ ಕನ್ನಡಕ ವಿತರಣೆ

ಇಡ್ಕಿದು ಸೇವಾ ಸಹಕಾರಿ ಸಂಘ ಹಾಗೂ ರೋಟರಿ ಕ್ಲಬ್ ಪುತ್ತೂರು ಸಿಟಿಯ ಸಾಮಾಜಿಕ ಕಳಕಳಿಯ ಕಾರ್ಯಕ್ಕೆ ವೈದ್ಯರು, ಗಣ್ಯರು ಸಾರ್ವಜನಿಕರಿಂದ ಶ್ಲಾಘನೆ

ವಿಟ್ಲ: ರೋಟರಿ ಕ್ಲಬ್ ಪುತ್ತೂರು ಸಿಟಿ, ಇಡ್ಕಿದು ಸೇವಾ ಸಹಕಾರಿ ಸಂಘ ನಿ., ಆನಂದಾಶ್ರಮ ಸೇವಾ ಟ್ರಸ್ಟ್ (ರಿ.) ಪುತ್ತೂರು, ಜಿಲ್ಲಾ ಅಂಧತ್ವ ನಿವಾರಣಾ ಸಂಸ್ಥೆ, ಮಂಗಳೂರು ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರ ಮಾಣಿ, ಇವರ ಸಹಭಾಗಿತ್ವದಲ್ಲಿ ಉಚಿತ ನೇತ್ರ ಚಿಕಿತ್ಸಾ ಸೇವಾ ಶಿಬಿರವು ಉರಿಮಜಲಿನಲ್ಲಿರುವ ಇಡ್ಕಿದು ಸೇವಾ ಸಹಕಾರಿ ಸಂಘದ ‘ಶತಾಮೃತ ಆವರಣದಲ್ಲಿ ನಡೆಯಿತು.

ಕಾರ್ಯಕ್ರಮವನ್ನು ಆನಂದ ಸೇವಾ ಟ್ರಸ್ಟ್ ನ ಸ್ಥಾಪಕಾಧ್ಯಕ್ಷರು ಡಾ. ಗೌರಿ ಪೈ ದೀಪ ಬೆಳಗಿಸಿ ಉದ್ಘಾಟಿಸಿ ಶುಭ ಹಾರೈಸಿದರು. ಇಡ್ಕಿದು ಸೇವಾ ಸಹಕಾರಿ ಸಂಘದ ಅಧ್ಯಕ್ಷರು ಹಾಗೂ ರೋಟರಿ ಕ್ಲಬ್ ಪುತ್ತೂರು ಸಿಟಿ ಇದರ ಸ್ಥಾಪಕ ಸದಸ್ಯರಾದ ಸುಧಾಕರ ಶೆಟ್ಟಿ ಬೀಡಿನಮಜಲು ಮಾತನಾಡಿ ಸುಮಾರು 100 ವರ್ಷಗಳ ಇತಿಹಾಸವಿರುವ ನಮ್ಮ ಇಡ್ಕಿದು ಸೇವಾ ಸಹಕಾರಿ ಸಂಘ ಜನರ ಸಮಸ್ಯೆಗಳಿಗೆ ಸದಾ ಸ್ಪಂದಿಸುದರ ಜೊತೆಗೆ ಹಲವು ಸಾಮಾಜಿಕ ಕಳಕಳಿಯ ಕೆಲಸಗಳನ್ನು ಮಾಡುತ್ತಾ ಬಂದಿದೆ. ನಮ್ಮ ಸಂಘದ ಶತಮಾನೋತ್ಸವದ ಅಂಗವಾಗಿ ಈಗಾಗಲೇ ಹಲವು ಯೋಜನೆಗಳನ್ನು ಕೈಗೊಳ್ಳಲಾಗಿತ್ತು. ಅವಗಳಲ್ಲಿ ಆರೋಗ್ಯಾಮೃತ ಯೋಜನೆಯು ಒಂದಾಗಿದೆ. ಆರೋಗ್ಯಾಮೃತ ಯೋಜನೆ ಹಾಗೂ ರೋಟರಿಯ ಆರೋಗ್ಯ ಸಿರಿ ಯೋಜನೆಯಡಿಯಲ್ಲಿ ಇಂದು ಇಲ್ಲಿ ಉಚಿತ ನೇತ್ರ ತಪಾಸಣೆಯನ್ನು ಆಯೋಜನೆ ಮಾಡಿರುವುದು ಸಂತಸ ತಂದಿದೆ. ಈ ಶಿಬಿರದ ಯಶಸ್ಸಿಗೆ ಸಹಕರಿಸಿದ ಎಲ್ಲರಿಗೂ ಕೃತಜ್ಞತೆಗಳು ಎಂದರು.

ಪುತ್ತೂರು ರೋಟರಿ ಸಿಟಿ ಅಧ್ಯಕ್ಷ ರೊ. ಕೆ.ಪ್ರಶಾಂತ್ ಶೆಣೈ ಮಾತನಾಡಿ ರೋಟರಿಯು ಆರೋಗ್ಯ ಸಿರಿ ಯೋಜನೆಯಡಿಯಲ್ಲಿ ಹಲವಾರು ಯಶಸ್ವಿ ಕಾರ್ಯಕ್ರಮಗಳನ್ನು ನೀಡಲಾಗಿದೆ, ಇಂದಿನ ಈ ಕಾರ್ಯಕ್ರಮದ ಆಯೋಜನೆಗೆ ಸಹಕರಿಸಿದ ರೋಟರಿಯ ಜಿಲ್ಲಾ ಗವರ್ನರ್ ಪ್ರಕಾಶ್ ಕಾರಂತ್ ಹಾಗೂ ರೋಟರಿ ಜಿಲ್ಲೆ 3181 ಇದರ ಝೋನ್-4 ಅಸಿಸ್ಟೆಂಟ್ ಗವರ್ನರ್ ಮಂಜುನಾಥ ಆಚಾರ್ಯರವರಿಗೆ ಅಭಿನಂದನೆ ಸಲ್ಲಿಸಿದರು. ಈ ಸಂಧರ್ಭದಲ್ಲಿ ಕಣ್ಣಿನ ಬಗ್ಗೆ ಹಿರಿಯ ನೇತ್ರಾಧಿಕಾರಿ ರೊ. ಶಾಂತರಾಜ ಮಾಹಿತಿ ನೀಡಿದರು.

ರೋಟರಿ ಕ್ಲಬ್ ಪುತ್ತೂರು ಸಿಟಿ ಕಾರ್ಯದರ್ಶಿ ಜಯಗುರು ಆಚಾರ್ ಝೋನಲ್ ಲೆಫ್ಟಿನೆಂಟ್ ಪ್ರಮೋದ್ ಮಲ್ಲಾರ, ಹಿರಿಯ ನೇತ್ರಾಧಿಕಾರಿ ರೊ. ಶಾಂತರಾಜ, ಇಡ್ಕಿದು ಸೇವಾ ಸಹಕಾರಿ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಈಶ್ವರ ನಾಯ್ಕ್ ಮೊದಲಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಡಾ. ಗೌರಿ ಪೈಯವರನ್ನು ಸನ್ಮಾನಿಸಲಾಯಿತು. ಸಂಸ್ಥೆಯ ಸಿಬ್ಬಂದಿ ರತ್ನಾವತಿ ಪ್ರಾರ್ಥಿಸಿದರು.

ರೋಟರಿ ಸಿಟಿಯ ಸದಸ್ಯರು, ಇಡ್ಕಿದು ಗ್ರಾಮ ಪಂಚಾಯತ್ ಅಧ್ಯಕ್ಷರು, ಸದಸ್ಯರು, ಇಡ್ಕಿದು ಸೇವಾ ಸಂಘದ ನಿರ್ದೇಶಕರು, ಸಿಬ್ಬಂದಿಗಳು, ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು, ನವೋದಯ ಗುಂಪಿನ ಪ್ರೇರಕರು ಹಾಗೂ ಸದಸ್ಯರು ಸೇರಿದಂತೆ ನೂರಾರು ಮಂದಿ ಉಪಸ್ಥಿತರಿದ್ದರು.

ಈ ಶಿಬಿರದಲ್ಲಿ ಜಿಲ್ಲಾ ಅಂಧತ್ವ ನಿವಾರಣಾ ಸಂಸ್ಥೆ ಮಂಗಳೂರು, ಜಿಲ್ಲಾ ಸಂಚಾರಿ ನೇತ್ರ ಚಿಕಿತ್ಸಾ ಘಟಕ ಹಾಗೂ ಮಂಗಳೂರಿನ ಖ್ಯಾತ ಜಿಲ್ಲಾ ಆಸ್ಪತ್ರೆ (Wenlock) ಇದರ ಸಹಯೋಗದಲ್ಲಿ ಕೆ.ಎಂ.ಸಿ.ಯ ಪ್ರಸಿದ್ಧ ನೇತ್ರ ತಜ್ಞರು ಭಾಗವಹಿಸಿದ್ದರು.

576 ಜನರಿಗೆ ಉಚಿತ ಕಣ್ಣಿನ ತಪಾಸಣೆ ಹಾಗೂ ಕಣ್ಣಿನ ಪೊರೆ ಚಿಕಿತ್ಸೆ ಮಾಡಲಾಯಿತು. ಆನಂದಾಶ್ರಮ ಸೇವಾ ಟ್ರಸ್ಟ್ (ರಿ.) ಪುತ್ತೂರು – ಇವರ ವತಿಯಿಂದ ದೃಷ್ಟಿದೋಷ ಇರುವ 533 ಜನರಿಗೆ ಉಚಿತವಾಗಿ ಕನ್ನಡಕಗಳನ್ನು ವಿತರಿಸಲಾಯಿತು. 38 ಜನರ ಚಿಕಿತ್ಸೆಗೆ ಪೂರಕ ವ್ಯವಸ್ಥೆ ಮಾಡಲಾಯಿತು. ಅದರಲ್ಲಿ ಅತೀ ಅಗತ್ಯ ಚಿಕಿತ್ಸೆ ಬೇಕಾಗುವ 9 ಜನರನ್ನು ಮಂಗಳೂರಿನ ವೆನ್‌ಲಾಕ್‌ ಆಸ್ಪತ್ರೆಗೆ ಕಳುಹಿಸಿ ತಜ್ಞ ವೈದ್ಯರಿಂದ ಉಚಿತವಾಗಿ ಶಸ್ತ್ರಚಿಕಿತ್ಸೆಯ ಅಗತ್ಯತೆ ಇರುವವರಿಗೆ ಅಚ್ಚುಕಟ್ಟಾದ ವ್ಯವಸ್ಥೆಯನ್ನು ಮಾಡಲಾಯಿತು. ಈ ಶಿಬಿರದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರ ಮಾಣಿ ಇವರಿಂದ ಉಚಿತ ಆರೋಗ್ಯ ತಪಾಸಣೆ ನಡೆಸಲಾಯಿತು.

ಇಡ್ಕಿದು ಸೇವಾ ಸಹಕಾರಿ ಸಂಘದ ಶತಾಮೃತ ಆವರಣದಲ್ಲಿ ನಡೆದ ಬೃಹತ್ ಶಿಬಿರದಲ್ಲಿ ಸೇರಿದ ಜನಸಂದಣಿ ಹಾಗೂ ಕಾರ್ಯಕ್ರಮ ಅಚ್ಚುಕಟ್ಟಿನ ವ್ಯವಸ್ಥೆ ಕಂಡ ವೈದ್ಯರುಗಳು ಶಿಬಿರದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದು, ಆಗಮಿಸಿದ ಎಲ್ಲಾ ಗಣ್ಯರು ಇಡ್ಕಿದು ಸೇವಾ ಸಹಕಾರಿ ಸಂಘ ಹಾಗೂ ರೋಟರಿ ಕ್ಲಬ್ ಪುತ್ತೂರು ಸಿಟಿಯ ಈ ಕಾರ್ಯಕ್ರಮದ ಬಗ್ಗೆ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.

- Advertisement -

Related news

error: Content is protected !!