Sunday, April 28, 2024
spot_imgspot_img
spot_imgspot_img

ಉಳ್ಳಾಲ: ಇಸ್ತ್ರಿ ಪೆಟ್ಟಿಗೆಯನ್ನು ಹಾಸಿಗೆ ಮೇಲೆ ಇಟ್ಟು ತೆರಳಿದ್ದ ವಿದ್ಯಾರ್ಥಿನಿಯರು; ಮ್ಯಾನೇಜರ್‌ನ ಸಮಯಪ್ರಜ್ಞೆಯಿಂದ ತಪ್ಪಿದ ಅನಾಹುತ

- Advertisement -G L Acharya panikkar
- Advertisement -
vtv vitla

ಉಳ್ಳಾಲ: ಫ್ಲ್ಯಾಟ್‌ವೊಂದರಲ್ಲಿ ವಿದ್ಯಾರ್ಥಿನಿಯರು ಬಿಸಿಯಾಗಿದ್ದ ಇಸ್ತ್ರಿ ಪೆಟ್ಟಿಗೆಯನ್ನು ಹಾಸಿಗೆ ಮೇಲೆ ಇಟ್ಟು ತೆರಳಿದ್ದು, ಹಾಸಿಗೆಗೆ ಬೆಂಕಿ ಹೊತ್ತಿಕೊಂಡು ದಟ್ಟ ಹೊಗೆ ಆವರಿಸಿ ಫ್ಲ್ಯಾಟ್ ಮ್ಯಾನೇಜರ್‌ನ ಸಮಯ ಪ್ರಜ್ಞೆಯಿಂದಾಗಿ ಭಾರೀ ಅವಘಡ ತಪ್ಪಿದೆ.

ದೇರಳಕಟ್ಟೆ ಕ್ಷೇಮ ಆಸ್ಪತ್ರೆ ಬಳಿಯಿರುವ ಫ್ಲಾಮ ನೆಸ್ಟ್ ಫ್ಲ್ಯಾಟ್‌ನಲ್ಲಿ ಈ ಅವಘಡ ಸಂಭವಿಸಿದೆ. ಇಲ್ಲಿಯ ರೂಂ.ವೊಂದರಲ್ಲಿ ವಾಸಿಸುತ್ತಿರುವ ದಂತ ವೈದ್ಯಕೀಯ ವಿದ್ಯಾರ್ಥಿನಿಯರಿಬ್ಬರು ಬೆಳಗ್ಗೆ ಕಾಲೇಜಿನಲ್ಲಿ ಕಾರ್ಯಾಗಾರವಿದೆಯೆಂದು ಬಟ್ಟೆಗೆ ಇಸ್ತ್ರಿ ಮಾಡಿ ಬೇಗನೇ ಕಾಲೇಜಿಗೆ ತೆರಳಿದ್ದರು. ಇಸ್ತ್ರಿ ಹಾಕಿದ ಬಳಿಕ ಸ್ವಿಚ್ ಆಫ್ ಮಾಡಿ ಬಿಸಿಯಾಗಿದ್ದ ಇಸ್ತ್ರಿಪೆಟ್ಟಿಗೆಯನ್ನು ಮಲಗುವ ಹಾಸಿಗೆಯ ಮೇಲೆಯೇ ಇಟ್ಟು ಹೋಗಿದ್ದರು.

ಇಸ್ತ್ರಿ ಪೆಟ್ಟಿಗೆ ಬಿಸಿ ಇದ್ದುದರಿಂದ ಹಾಸಿಗೆ ಸುಟ್ಟು ಫ್ಲ್ಯಾಟ್‌ನಲ್ಲಿ ಹೊಗೆ ಆವರಿಸಿತ್ತು. ಹೊಗೆಯ ವಾಸನೆ ಬಂದ ಹಿನ್ನೆಲೆಯಲ್ಲಿ ಫ್ಲ್ಯಾಟ್ ಮ್ಯಾನೇಜರ್, ಕುತ್ತಾರು ನಿವಾಸಿ ಮಹಮ್ಮದ್ ಶಾಹಿದ್ ಶಫೀಕ್ ಅವರು ಫ್ಲ್ಯಾಟ್‌ನ ಎಲ್ಲಾ ಕೊಠಡಿಗಳನ್ನು ಹುಡುಕಾಡಿದರು. ಈ ವೇಳೆ ಕೊಠಡಿಯೊಂದರಲ್ಲಿ ಹೊಗೆ ಕಾಣಿಸಿದ್ದು, ಬಾಗಿಲು ಹಾಕಿದ್ದರಿಂದ ಕೂಡಲೇ ಆ ಕೊಠಡಿಯಲ್ಲಿ ವಾಸವಾಗಿದ್ದ ವಿದ್ಯಾರ್ಥಿನಿಯರಿಗೆ ಕರೆ ಮಾಡಿ ತತ್‌ಕ್ಷಣ ಆಗಮಿಸುವಂತೆ ಹೇಳಿದ್ದರು.

ಕೂಡಲೇ ವಿದ್ಯಾರ್ಥಿನಿಯರು ಆಗಮಿಸಿ ಕೊಠಡಿ ಬಾಗಿಲು ತೆರೆದರು. ಬಳಿಕ ಮ್ಯಾನೇಜರ್ ಶಫೀಕ್ ಕೊಠಡಿಯೊಳಗೆ ನುಗ್ಗಿ ಕಿಟಕಿ ಬಾಗಿಲು ತೆರೆದಿದ್ದಾರೆ. ಹೊಗೆ ನಿಧಾನವಾಗಿ ಹೊರ ಹೋದ ಬಳಿಕ ಹೊಗೆಗೆ ನಿಖರ ಕಾರಣ ಗೊತ್ತಾಗಿ ವಾಚ್‌ಮನ್ ಲೋಕೇಶ್ ಅವರನ್ನು ಕರೆದು ಬೆಂಕಿ ಆವರಿಸಿದ ಹಾಸಿಗೆಯನ್ನು ಕಿಟಕಿಯ ಮೂಲಕ ಹೊರಗೆಸೆದು ಬೆಂಕಿ ನಂದಿಸಿದ್ದಾರೆ. ಮ್ಯಾನೇಜರ್ ಶಫೀಕ್ ಅವರ ಸಮಯಪ್ರಜ್ಞೆಯಿಂದ ಫ್ಲ್ಯಾಟ್‌ನಲ್ಲಿದ್ದ ಇತರ ನಿವಾಸಿಗಳು ಅಪಾಯದಿಂದ ಪಾರಾಗಿದ್ದಾರೆ.

- Advertisement -

Related news

error: Content is protected !!