Saturday, May 4, 2024
spot_imgspot_img
spot_imgspot_img

ಒಂದು ತಿಂಗಳೊಳಗೆ ಮಂಗಳೂರಿನಲ್ಲೂ ಸಂಚಾರಿಸಲಿದೆ ವೋಲ್ವೋ ಬಸ್‌

- Advertisement -G L Acharya panikkar
- Advertisement -

ಮಂಗಳೂರು: ಒಂದು ತಿಂಗಳೊಳಗೆ ರಾಜ್ಯದಲ್ಲಿ ಎಲೆಕ್ಟ್ರಿಕಲ್ ಬಸ್‍ಗಳು ಸಂಚರಿಸಲಿವೆ ಎಂದು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಅಧ್ಯಕ್ಷ ಎಂ. ಚಂದ್ರಪ್ಪ ಅವರು ಹೇಳಿದರು.

ಮಂಗಳವಾರ ನಗರದ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದ ಆವರಣದಲ್ಲಿರುವ ಮಂಗಳೂರು ವಿಭಾಗೀಯ ನಿಯಂತ್ರಣಾಧಿಕಾರಿಯವರ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಮುಂದಿನ ತಿಂಗಳೊಳಗೆ ಮೊದಲ ಹಂತದಲ್ಲಿ 50 ಎಲೆಕ್ಟ್ರಿಕಲ್ ಬಸ್‍ಗಳ ಸಂಚಾರ ಆರಂಭಿಸಲಾಗುವುದು, ಸದ್ಯ ತೈಲೋತ್ಪನ್ನ, ಟಯರ್ ಹಾಗೂ ಬಸ್ ಬಿಡಿ ಭಾಗಗಳ ಮೊತ್ತ ಹೆಚ್ಚಿದ್ದರೂ ಕೂಡ ಪ್ರಯಾಣಿಕರ ಹಿತ ದೃಷ್ಟಿಯಿಂದ ಪ್ರಯಾಣಿಕರ ಟಿಕೆಟ್ ದರ ಹೆಚ್ಚಿಸಿಲ್ಲ, ಅರವತ್ತು ವರ್ಷಗಳ ಇತಿಹಾಸದಲ್ಲೇ ಇದೀಗ ತಿಂಗಳ ಮೊದಲ ದಿನವೇ ರಾಜ್ಯದ ಎಲ್ಲ ಕೆ.ಎಸ್.ಆರ್.ಟಿ.ಸಿ ಉದ್ಯೋಗಿಗಳಿಗೆ ವೇತನ ನೀಡಲಾಗುತ್ತಿದೆ ಮತ್ತು 6ವೇತನ ಆಯೋಗದ ಬೇಡಿಕೆಯನ್ನು ಮುಂದಿನ ದಿನಗಳಲ್ಲಿ ಈಡೇರಿಸಲು ಕ್ರಮ ಕೈಗೊಳ್ಳಲಾಗುವುದು ಎಂದರು.

ಕೋವಿಡ್ ಹಾಗೂ ಇತರೆ ಕಾರಣಗಳಿಂದ ಈ ಹಿಂದೆ ಸರ್ಕಾರಿ ಬಸ್‍ಗಳಿಂದ ದಿನವೊಂದಕ್ಕೆ 6 ರಿಂದ 7ಕೋಟಿಗಳಷ್ಟು ಆದಾಯ ಬರುತ್ತಿತ್ತು, ಆದರೆ ಸದ್ಯ ಹಲವು ಸುಧಾರಣಾ ಕ್ರಮಗಳನ್ನು ಕೈಗೊಂಡ ಕಾರಣ ದಿನವೊಂದಕ್ಕೆ ಕನಿಷ್ಟ 12ಕೋಟಿಯಷ್ಟು ವರಮಾನ ಬರುತ್ತಿದೆ ಎಂದು ಹರ್ಷ ವ್ಯಕ್ತಪಡಿಸಿದರು.

450 ನೂತನ ಬಸ್ ಖರೀದಿಗೆ ಕ್ರಮಕೈಗೊಳ್ಳಲಾಗುತ್ತಿದೆ, ಅವುಗಳಲ್ಲಿ ಅತ್ಯುತ್ತಮ ಸೌಲಭ್ಯವಿರುವ 50 ವೋಲ್ವೋ ಹಾಗೂ ಎಲೆಕ್ಟ್ರಿಕಲ್ ಬಸ್‍ಗಳಿರಲಿವೆ. ಒಂದು ತಿಂಗಳಿನೊಳಗೆ ರಾಜ್ಯದಲ್ಲಿ ಪರಿಸರ ಸ್ನೇಹಿ ಎಲೆಕ್ಟ್ರಿಕಲ್ ಬಸ್‍ಗಳು ಓಡಾಡಲಿವೆ, ಮಂಗಳೂರು ವಿಭಾಗದಲ್ಲಿ ಸದ್ಯ 490 ಬಸ್‍ಗಳು ಪ್ರತಿದಿನ ಸಂಚರಿಸುತ್ತಿದ್ದು, ದಿನನಿತ್ಯ 1 ಕೋಟಿಯಷ್ಟು ವರಮಾನವಿದೆ, ಆದರೆ ಪುತ್ತೂರು ವಿಭಾಗದಲ್ಲಿ ವರಮಾನ ಕಡಿಮೆಯಿದ್ದರೂ ಧಾರ್ಮಿಕ ಕ್ಷೇತ್ರಗಳಿಗೆ ತೆರಳುವ ಪ್ರಯಾಣಿಕರು ಮತ್ತು ವಿದ್ಯಾರ್ಥಿಗಳು ಹೆಚ್ಚಿರುವ ಕಾರಣ ಬಸ್‍ಗಳನ್ನು ಕಡಿತಗೊಳಿಸಿಲ್ಲ ಎಂದು ಹೇಳಿದರು.

ರಾಜ್ಯ ಸರಕಾರ ಮೂರು ತಿಂಗಳ ಅವಧಿಗೆ ಕಟ್ಟಡ ಕಾರ್ಮಿಕರಿಗೆ ಉಚಿತ ಬಸ್ ಪಾಸ್ ಗಳನ್ನು ನೀಡಿದೆ. ಇದನ್ನು ಮೂರು ತಿಂಗಳ ನಂತರ ಆಯಾ ಡಿಪೋ ವ್ಯಾಪ್ತಿಯಲ್ಲಿ ನವೀಕರಣ ಮಾಡಬಹುದು, ಮಂಗಳೂರು, ಉಡುಪಿ, ಕುಂದಾಪುರ ವ್ಯಾಪ್ತಿಯ ಮಂಗಳೂರು ವಿಭಾಗದಲ್ಲಿ 672 ಕಾರ್ಮಿಕರು ನೋಂದಣಿ ಮಾಡಿದ್ದು ಇದರ ಪ್ರಯೋಜನ ಪಡೆಯಲಿದ್ದಾರೆ. ಮೊದಲಿಗೆ 296 ಕಾರ್ಡ್‌ ಗಳನ್ನು ಪ್ರಿಂಟ್ ಮಾಡಿದ್ದು 376 ಕಾರ್ಡ್ ಪ್ರಿಂಟ್ ಆಗಲು ಬಾಕಿಯಿದೆ ಪುತ್ತೂರು, ಮಡಿಕೇರಿ, ಸುಳ್ಯ, ಧರ್ಮಸ್ಥಳ ಡಿಪೋ ವ್ಯಾಪ್ತಿ ಒಳಗೊಂಡ ಪುತ್ತೂರು ವಿಭಾಗದಲ್ಲಿ 1268 ಕಾರ್ಮಿಕರು ನೋಂದಣಿ ಮಾಡಿದ್ದು ಆ ಪೈಕಿ 366 ಕಾರ್ಡ್ ಗಳನ್ನು ಪ್ರಿಂಟ್ ಮಾಡಲಾಗಿದೆ.902 ಕಾರ್ಡ್ ಪ್ರಿಂಟ್ ಆಗಬೇಕಷ್ಟೇ. ಶೀಘ್ರದಲ್ಲಿ ಕಾರ್ಡ್‌ ಕಾರ್ಮಿಕರ ಕೈಸೇರಲಿದೆ ಎಂದು ತಿಳಿಸಿದ್ದಾರೆ.

ಈ ಬಾರಿ ಹಬ್ಬದ ಸೀಸನಲ್ಲಿ KSRTC ದಿನವೊಂದಕ್ಕೆ 22.54 ಕೋಟಿ ರೂಪಾಯಿ ಆದಾಯ ಗಳಿಸಿದೆ. ಬಾಕಿ ದಿನಗಳಲ್ಲಿ 8 ಕೋಟಿ ಇರುತ್ತಿದ್ದ ಕಲೆಕ್ಷನಿಗೆ ಹೋಲಿಸಿದರೆ ಇದು ಉತ್ತಮ ಸಾಧನೆ ಎಂದು ಚಂದ್ರಪ್ಪ ಹೇಳಿದರು.

ಮಂಗಳೂರು ವಿಭಾಗೀಯ ನಿಯಂತ್ರಣಾಧಿಕಾರಿ ರಾಜೇಶ್ ಶೆಟ್ಟಿ ಹಾಗೂ ಪುತ್ತೂರು ವಿಭಾಗಿಯ ನಿಯಂತ್ರಣಾಧಿಕಾರಿ ಜಯಕರ ಶೆಟ್ಟಿ ಪತ್ರಿಕಾಗೋಷ್ಠಿಯಲ್ಲಿದ್ದರು.

- Advertisement -

Related news

error: Content is protected !!