Saturday, April 27, 2024
spot_imgspot_img
spot_imgspot_img

ಟರ್ಕಿ, ಸಿರಿಯಾದಲ್ಲಿ ಬರೋಬ್ಬರಿ 78 ಬಾರಿ ಕಂಪಿಸಿದ ಭೂಮಿ..! 1200 ಕ್ಕೂ ಅಧಿಕ ಮಂದಿ ದುರ್ಮರಣ..! 84 ವರ್ಷಗಳ ಬಳಿಕ ಮರುಕಳಿಸಿದ ಭಾರೀ ದುರಂತ

- Advertisement -G L Acharya panikkar
- Advertisement -

ಟರ್ಕಿ ಹಾಗೂ ಸಿರಿಯಾ ದೇಶಗಳ ಗಡಿ ಭಾಗದಲ್ಲಿ ಇಂದು ಮುಂಜಾನೆ ಸಂಭವಿಸಿರುವ ಪ್ರಬಲ ಭೂಕಂಪನಕ್ಕೆ ಸಾವಿರಾರು ಮಂದಿ ಅಸುನೀಗಿದ ಘಟನೆ ನಡೆದಿದೆ. ಹೊಸ ವರ್ಷದ ೨ನೇ ತಿಂಗಳಲ್ಲೇ ಈ ಅವಘಡ ನಡೆದಿದೆ. ಬರೋಬ್ಬರಿ 78 ಬಾರಿ ಭೂ ಕಂಪಿಸಿದೆ. 7.8 ತೀವ್ರತೆಯ ಪ್ರಬಲ ಭೂಕಂಪದಿಂದಾಗಿ 1200 ಕ್ಕೂ ಅಧಿಕ ಮಂದಿ ಮೃತಪಟ್ಟಿದ್ದು, 6,500ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾಗಿ ಜಾಗತಿಕ ಸುದ್ದಿ ತಾಣಗಳು ವರದಿ ಮಾಡಿದೆ.

6,500ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಟರ್ಕಿ ದೇಶದಲ್ಲಿ ಸಾವಿನ ಸಂಖ್ಯೆ 912ಕ್ಕೆ ಏರಿಕೆಯಾಗಿದೆ. 5,383 ಮಂದಿ ಗಾಯಗೊಂಡಿದ್ದಾರೆ ಎಂದು ಟರ್ಕಿ ಅಧ್ಯಕ್ಷ ರೆಸೆಪ್‌ ತಯ್ಯಿಪ್‌ ಎರ್ಡಗನ್ ತಿಳಿಸಿರುವುದಾಗಿ ‘ಬಿಬಿಸಿ’ ವರದಿ ಮಾಡಿದೆ.

1,700 ಕಟ್ಟಡಗಳು ಧರೆಗುರುಳಿವೆ. ಟರ್ಕಿಯ ಪ್ರಮುಖ ನಗರ ಮತ್ತು ಪ್ರಾಂತೀಯ ರಾಜಧಾನಿಯಾದ ಗಾಜಿಯಾಂಟೆಪ್‌ನಿಂದ 33 ಕಿಲೋಮೀಟರ್ (20 ಮೈಲಿ) ದೂರದಲ್ಲಿ ಹಾಗೂ 17.9 ಕಿ.ಮೀ. ಆಳದಲ್ಲಿ ಮುಂಜಾನೆ 4.17ರ ಹೊತ್ತಿಗೆ ಭೂಕಂಪ ಸಂಭವಿಸಿದೆ. ಇದರಿಂದಾಗಿ ಹಲವು ನಗರಗಳಲ್ಲಿ ಕಟ್ಟಡಗಳು ಕುಸಿದಿವೆ.

ಸಿರಿಯಾದಲ್ಲೂ ತೀವ್ರ ಹಾನಿ
ಟರ್ಕಿಯ ನೆರೆಯ ದೇಶ ಸಿರಿಯಾದಲ್ಲೂ ತೀವ್ರ ಹಾನಿಯುಂಟಾಗಿದೆ. ಮಧ್ಯಪ್ರಾಚ್ಯ ದೇಶಗಳಾದ ಲೆಬನಾನ್‌, ಸೈಪ್ರಸ್‌ ಹಾಗೂ ಈಜಿಪ್ಟ್‌ನಲ್ಲಿಯೂ ಭೂಮಿ ಕಂಪಿಸಿದೆ. ಟರ್ಕಿಯ ಆಂತರಿಕ ಇಲಾಖೆ ಸಚಿವ ಸುಲೇಮನ್‌ ಸೋಯ್ಲು ಅವರು ಮಾಧ್ಯಮಗಳಿಗೆ ನೀಡಿರುವ ಹೇಳಿಕೆಯಲ್ಲಿ, ಗಾಜಿಯಾಂಟೆಪ್‌, ಕಹ್ರಾಮನ್ಮಾರಸ್‌, ಹಟಾಯ್‌, ಒಸ್ಮಾನಿಯಾ, ಅದಿಯಾಮನ್‌, ಮಲತ್ಯ, ಸನ್ಲಿಯುರ್ಫಾ, ಅದಾನ, ದಿಯಾರ್ಬಕಿರ್ ಹಾಗೂ ಕಿಲಿಸ್‌ನಲ್ಲಿ ಅಪಾರ ಹಾನಿಯಾಗಿವೆ ಎಂದು ತಿಳಿಸಿದ್ದಾರೆ.

ಸಿರಿಯಾದಲ್ಲಿ 470 ಮಂದಿ ಮೃತಪಟ್ಟಿದ್ದು, ಈವರೆಗೆ ಸುಮಾರು ಸಾವಿರ ಜನರು ಗಾಯಗೊಂಡಿದ್ದಾರೆ. ಅಲೆಪ್ಪೊ, ಹಮಾ, ಟರ್ಟಸ್ ಹಾಗೂ ಲಕಾಟಿಯಾ ಪ್ರದೇಶಗಳಲ್ಲಿಯೇ 239 ಜನರು ಮೃತಪಟ್ಟಿದ್ದಾರೆ ಎಂದು ಸಿರಿಯಾ ಅರೋಗ್ಯ ಸಚಿವಾಲಯ ಮಾಹಿತಿ ನೀಡಿದೆ.

ಬಂಡುಕೋರರ ನಿಯಂತ್ರಣದಲ್ಲಿರುವ ಸಿರಿಯಾದ ವಾಯವ್ಯ ಭಾಗಗಳಲ್ಲಿ ಕನಿಷ್ಠ 147 ಮಂದಿ ಮೃತಪಟ್ಟಿದ್ದು, 340 ಮಂದಿ ಗಾಯಗೊಂಡಿದ್ದಾರೆ ಎಂದು ‘ದಿ ವೈಟ್‌ ಹೆಲ್ಮೆಟ್ಸ್‌’ ರಕ್ಷಣಾ ಪಡೆ ಟ್ವೀಟ್‌ ಮಾಡಿದೆ.

ಟರ್ಕಿಯಲ್ಲಿ 1939ರಲ್ಲಿ 7.9 ತೀವ್ರತೆಯ ಭೂಕಂಪ ಸಂಭವಿಸಿತ್ತು. ಆಗ 33,000 ಜನರು ಪ್ರಾಣ ಕಳೆದುಕೊಂಡಿದ್ದರು. ಅದಾದ ನಂತರ ಇಲ್ಲಿ ವರದಿಯಾದ ಪ್ರಬಲ ಭೂಕಂಪ ಇಂದು ಸಂಭವಿಸಿದೆ ಎನ್ನಲಾಗಿದೆ.

- Advertisement -

Related news

error: Content is protected !!