

ಇಬ್ಬರು ವ್ಯಕ್ತಿಗಳು 32 ವರ್ಷದ ವ್ಯಕ್ತಿಯ ಮೇಲೆ ಹಲ್ಲೆ ನಡೆಸಿ ಕೊಂದಿರುವ ಘಟನೆ ಬೆಂಗಳೂರಿನ ಕೋಡಿಹಳ್ಳಿ ಜಂಕ್ಷನ್ ಬಳಿ ನಡೆದಿದೆ. ಮಂಜುನಾಥ್ ಮೃತ ವ್ಯಕ್ತಿ.
ಘಟನಾ ಸ್ಥಳಕ್ಕೆ ಆಗಮಿಸಿದ ಪೊಲೀಸರಿಗೆ ಇದು ಅಪಘಾತದಿಂದ ಆಗಿರುವ ಗಾಯಗಳಲ್ಲ. ಇದು ಕೊಲೆ ಎಂದು ಸ್ಪಷ್ಟವಾಗಿದೆ. ತನಿಖೆ ಕೈಗೊಂಡ ಜೀವನ್ ಬಿಮಾ ನಗರ ಠಾಣೆ ಪೊಲೀಸರು ಆರೋಪಿಗಳನ್ನು ಪತ್ತೆಹಚ್ಚಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ರಾಮನಗರ ತಾಲ್ಲೂಕಿನ ಕೈಲಾಂಚ ಗ್ರಾಮದ ಎಸ್. ಮಧುಸೂದನ್ (29) ಹಾಗೂ ಕುಣಿಗಲ್ ತಾಲ್ಲೂಕಿನ ಹುಲಿಯೂರು ದುರ್ಗದ ಯತೀಶ್ ಗೌಡ (25) ಬಂಧಿತರು.
ಮೃತ ವ್ಯಕ್ತಿಯು ದೊಮ್ಮಲೂರಿನ ದೂಪನಹಳ್ಳಿ ನಿವಾಸಿಯಾಗಿದ್ದು, ಮಂಜುನಾಥ್ ಆಟೋರಿಕ್ಷಾ ಚಾಲಕರಾಗಿದ್ದರು. ಮಾರ್ಚ್. ೧೪ರ ರಾತ್ರಿ ದೂಪನಹಳ್ಳಿಯ ಬಾರ್‌ಗೆ ಹೋಗಿದ್ದ ಅವರು ಮಧ್ಯರಾತ್ರಿಯವರೆಗೆ ಬಾರ್ ಮುಚ್ಚುವವರೆಗೂ ಪಾರ್ಟಿ ಮಾಡಿದ್ದಾರೆ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ.

ಅಟ್ಟಾಡಿಸಿ ಕೊಂದರು: ಮಂಜುನಾಥ್ ಅವರು ಜೆ.ಡಿ. ಬಾರ್ ಆ್ಯಂಡ್ ರೆಸ್ಟೋರೆಂಟ್‌ಗೆ ಸೋಮವಾರ ರಾತ್ರಿ ಹೋಗಿದ್ದರು. ಬಾರ್‌ನಲ್ಲಿದ್ದ ಆರೋಪಿಗಳು, ಮಂಜುನಾಥ್ ಜೊತೆ ಜಗಳ ತೆಗೆದಿದ್ದರು. ಪರಸ್ಪರ ಮಾತಿನ ಚಕಮಕಿ ನಡೆದಿತ್ತು. ಬಾರ್ ಸಿಬ್ಬಂದಿ ಜಗಳ ಬಿಡಿಸಿದ್ದರು
ಬಾರ್‌ನಿಂದ ಹೊರಬಂದಿದ್ದ ಮಂಜುನಾಥ್, ರಸ್ತೆ ಪಕ್ಕದಲ್ಲಿ ನಿಲ್ಲಿಸಿದ್ದ ತಮ್ಮ ಆಟೊದಲ್ಲಿ ಕುಳಿತಿದ್ದರು. ಸ್ಥಳಕ್ಕೆ ಬಂದಿದ್ದ ಆರೋಪಿಗಳು, ಪುನಃ ಜಗಳ ತೆಗೆದು ಹಲ್ಲೆ ನಡೆಸಲು ಮುಂದಾಗಿದ್ದರು. ಆಟೊದಿಂದ ಇಳಿದಿದ್ದ ಮಂಜುನಾಥ್, ತಪ್ಪಿಸಿಕೊಂಡು ಓಡಲಾರಂಭಿಸಿದ್ದರು. ಅವರನ್ನು ಆರೋಪಿಗಳು ಬೆನ್ನಟ್ಟಿದ್ದರು. ಕೋಡಿಹಳ್ಳಿ ಜಂಕ್ಷನ್ ಬಳಿ ಮಂಜುನಾಥ್ ಎಡವಿ ಬಿದ್ದಿದ್ದರು. ಅವರನ್ನು ಸುತ್ತುವರೆದಿದ್ದ ಆರೋಪಿಗಳು ಹಲ್ಲೆ ಮಾಡಿದ್ದರು. ತಲೆ ಮೇಲೆ ಸಿಮೆಂಟ್ ಇಟ್ಟಿಗೆ ಎತ್ತಿ ಹಾಕಿದ್ದರು. ಕಬ್ಬಿಣದ ಪೈಪ್‌ನಿಂದಲೂ ತಲೆಗೆ ಹೊಡೆದಿದ್ದರು. ತೀವ್ರ ರಕ್ತಸ್ರಾವದಿಂದ ಮಂಜುನಾಥ್ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.










