Monday, May 6, 2024
spot_imgspot_img
spot_imgspot_img

ದುಬೈ ಯಕ್ಷೋತ್ಸವ 2022 “ಲಲಿತೋಪಖ್ಯಾನ” ಯಕ್ಷಗಾನ ಪ್ರದರ್ಶನಕ್ಕೆ ಸಿದ್ದತೆ ಪೂರ್ಣ

- Advertisement -G L Acharya panikkar
- Advertisement -

ದುಬೈ ಯಕ್ಷಗಾನ ಅಭ್ಯಾಸ ತರಗತಿ ಪ್ರಾಯೋಜಿತ ಜೂನ್ 11ರ ಶನಿವಾರದಂದು ಜರಗಲಿರುವ ಅಭೂತಪೂರ್ವ ಕನ್ನಡ ಪೌರಾಣಿಕ ಯಕ್ಷಗಾನ ಪ್ರದರ್ಶನ ಲಲಿತೋಪಖ್ಯಾನ ದ ಪೂರ್ವಸಿದ್ಧತೆಗಳು ಭರದಿಂದ ಪೂರ್ಣಗೊಳ್ಳುತ್ತಿವೆ.

ಅಭ್ಯಾಗತರಾಗಿ ಯುವ ಮಹಿಳಾ ಭಾಗವತೆ ಅಮೃತಾ ಅಡಿಗ, ಮದ್ದಳೆಗಾರರಾದ ಕೌಶಿಕ್ ರಾವ್ ಪುತ್ತಿಗೆ, ಸವಿನಯ ನೆಲ್ಲಿತೀರ್ಥ, ಪ್ರಮುಖ ಸ್ತ್ರೀಪಾತ್ರದಲ್ಲಿ ದೀಪಕ್ ರಾವ್ ಪೇಜಾವರ, ವಸ್ತ್ರಾಲಂಕಾರದ ಗಂಗಾಧರ ಡಿ. ಶೆಟ್ಟಿಗಾರ್ ಕಿನ್ನಿಗೋಳಿ, ವರ್ಣಾಲಂಕಾರದ ನಿತಿನ್ ಕುಂಪಲ ಮೊದಲಾದವರು ಈಗಾಗಲೇ ಯಕ್ಷಗಾನ ಅಭ್ಯಾಸ ತರಗತಿ ದುಬೈ ತಂಡವನ್ನು ಸೇರಿಕೊಂಡು ಪೂರ್ವ ತಯಾರಿಯಲ್ಲಿ ತೊಡಗಿಸಿಕೊಂಡಿದ್ದಾರೆ. ಯಕ್ಷರಂಗದ ಮಿನುಗುತಾರೆ, ಸ್ವರ ಸಾಮ್ರಾಟ ಯಕ್ಷಧ್ರುವ ಪಟ್ಲ ಸತೀಶ್ ಶೆಟ್ಟಿಯವರು ಈ ವಾರ ಆಗಮಿಸಲಿದ್ದಾರೆ.

ಅಭ್ಯಾಗತರೂ ಸೇರಿ ದಾಖಲೆಯ 49 ಮಂದಿ ಕಲಾವಿದರು ಸಂಚಾಲಕ ಕೊಟ್ಟಿಂಜ ದಿನೇಶ ಶೆಟ್ಟಿ ಅವರ ನೇತೃತ್ವದಲ್ಲಿ ಸಂಯೋಜನೆಗೊಂಡು ಪ್ರದರ್ಶನಕ್ಕೆ ಸಿದ್ಧರಾಗಿದ್ದಾರೆ. ತಂಡದ ಗುರು ಯಕ್ಷಮಯೂರ ಶೇಖರ್ ಡಿ. ಶೆಟ್ಟಿಗಾರ್‌ ಅವರ ನಿರ್ದೇಶನದಲ್ಲಿ, ನಾಟ್ಯಗುರು ಶರತ್ ಕುಡ್ಲರ ಮಾರ್ಗದರ್ಶನದಲ್ಲಿ ಸಿದ್ಧಗೊಂಡ ಸರ್ವ ಕಲಾವಿದರು ಸರಿಸುಮಾರು 72 ಪಾತ್ರಗಳನ್ನು ಕಲಾಭಿಮಾನಿಗಳ ಮುಂದೆ ಪ್ರದರ್ಶಿಸಲಿದ್ದಾರೆ.

ಬಹುಸಂಖ್ಯೆಯ ಸ್ವಯಂಸೇವಕರ ತಂಡ ರಂಗಸ್ಥಳ, ವೇಷಭೂಷಣ, ಆಸನ ವ್ಯವಸ್ಥೆ, ಅಲಂಕಾರ ಮುಂತಾದ ಸಿದ್ಧತೆ – ಸಡಗರಗಳಲ್ಲಿ ತೊಡಗಿಸಿಕೊಂಡಿದ್ದಾರೆ. ದುಬೈ ಯಕ್ಷಗಾನ ಅಭ್ಯಾಸ ತರಗತಿ ಪ್ರಾಯೋಜಿತ ಚೊಚ್ಚಲ ಯಕ್ಷರಕ್ಷಾ ವಿಶೇಷ ವಾರ್ಷಿಕ ಪ್ರಶಸ್ತಿಯನ್ನು ಯಕ್ಷಗಾನ ಕಲಾವಿದ – ಸಂಘಟಕ ಪ್ರಭಾಕರ ಡಿ. ಸುವರ್ಣ ಅವರಿಗೆ – ಗಣ್ಯರ ಸಮಕ್ಷ ಪ್ರದಾನ ಮಾಡಲಾಗುವುದು. ಜೂನ್ 11ರ ಸಂಜೆ 4 ಗಂಟೆಗೆ ಸರಿಯಾಗಿ ಚೌಕಿಪೂಜೆ, 4.30ಕ್ಕೆ ಪೂರ್ವರಂಗ ಚೆಂಡೆ ಜುಗಲ್ಬಂದಿ, 5ಕ್ಕೆ ಸರಿಯಾಗಿ ಕಥಾರಂಭವಾಗಲಿದೆ. ರಾತ್ರಿ 9 ಗಂಟೆಗೆ ಮಹಾದಾನಿಗಳ ನೆರವಿನಿಂದ ಸಾರ್ವಜನಿಕ ಅನ್ನ ಸಂತರ್ಪಣೆ ಜರಗಲಿದೆ ಎಂದು ದುಬೈ ಯಕ್ಷಗಾನ ಅಭ್ಯಾಸ ತರಗತಿಯ ಮುದ್ರಣ- ಮಾಧ್ಯಮ- ಪ್ರಸಾರಗಳ ನೇತೃತ್ವ ವಹಿಸಿರುವ ಗಿರೀಶ್ ನಾರಾಯಣ್ ಕಾಟಿಪಳ್ಳ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

- Advertisement -

Related news

error: Content is protected !!