ಪುತ್ತೂರು: ಕೇವಲ 8 ಸದಸ್ಯರು ಸೇರಿಕೊಂಡು ಪುತ್ತೂರು ತಾಲೂಕು ಪತ್ರಕರ್ತರ ಸಂಘದ ಚುನಾವಣೆ ನಡೆಸಿದ್ದರಿಂದ ಪುತ್ತೂರು ತಾಲೂಕು ಪತ್ರಕರ್ತರ ಸಂಘದ ಚುನಾವಣಾ ಪ್ರಕ್ರಿಯೆಗೆ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘ ತಡೆನೀಡಿದ್ದು, ಈ ಚುನಾವಣಾ ಪ್ರಕ್ರೀಯೆಯೇ ಅಸಿಂಧು ಎಂದು ಘೋಷಿಸಿದೆ. ಈ ಮೂಲಕ ಅಧ್ಯಕ್ಷ, ಕಾರ್ಯದರ್ಶಿ, ಕೋಶಾಧಿಕಾರಿ ಸೇರಿದಂತೆ ಪ್ರಮುಖ ಜವಾಬ್ದಾರಿ ವಹಿಸಿಕೊಂಡ ಸಂದೀಪ್, ಅಜಿತ್, ಪ್ರಸಾದ್ ನೇತೃತ್ವದ ತಂಡ ಸಂಘದ ಇತಿಹಾಸದಲ್ಲೇ ಕೇವಲ 4 ಗಂಟೆ ಮಾತ್ರ ಅಧಿಕಾರ ಅನುಭವಿಸಿದಂತಾಗಿದೆ.

ಪುತ್ತೂರು ತಾಲೂಕು ಪತ್ರಕರ್ತರ ಸಂಘದಲ್ಲಿ ಒಟ್ಟು ೨೨ ಈ ಹಿಂದಿನ ಸದಸ್ಯರು ಹಾಗೂ ೧೭ ಹೊಸ ಸದಸ್ಯರು ಸೇರಿದಂತೆ ಒಟ್ಟು ೩೯ ಸದಸ್ಯರಿದ್ದಾರೆ. ಈ ಎಲ್ಲಾ ಸದಸ್ಯರು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಅಧೀನದಲ್ಲಿ ಸದಸ್ಯತ್ವ ಪಡೆದಿದ್ದಾರೆ. ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಘಟಕ ಮುಂದಿನ ತಿಂಗಳು ಪುತ್ತೂರು ಹಾಗೂ ಉಳ್ಳಾಲ ತಾಲೂಕು ಪತ್ರಕರ್ತರ ಸಂಘದ ಚುನಾವಣೆಗೆ ಸಿದ್ದತೆ ನಡೆಸಿತ್ತು. ಒಂದು ವೇಳೆ ಚುನಾವಣೆ ನಡೆದರೆ ಪುತ್ತೂರು ಪತ್ರಿಕಾಭವನದಲ್ಲಿ ಅವ್ಯವಹಾರ ನಡೆಸಲು ಸಾಧ್ಯವಾಗದ ಹಿನ್ನೆಲೆಯಲ್ಲಿ ೮ ಸದಸ್ಯರು ಸೇರಿಕೊಂಡು ಜಿಲ್ಲಾ, ರಾಜ್ಯ ಸಂಘಕ್ಕೆ ಹಾಗೂ ಹಿರಿಯ ಪತ್ರಕರ್ತರಿಗೆ ಮಾಹಿತಿಯೂ ನೀಡದೆ ಗೌಪ್ಯವಾಗಿ ಚುನಾವಣೆ ನಡೆಸಿ ಸಾಮಾಜಿಕ ಜಾಲತಾಣದಲ್ಲಿ ಪ್ರಚಾರ ಮಾಡಿತ್ತು.

ಕರ್ನಾಟಕ ರಾಜ್ಯ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಬೈಲಾದಂತೆ ಸಂಘದ ನಿರ್ಧೇಶನವನ್ನು ಮೀರಿ ನಡೆಯುವ ಪತ್ರಕರ್ತರ ಸದಸ್ಯತ್ವವು ರದ್ದುಗೊಳ್ಳುತ್ತದೆ. ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದದ ಸದಸ್ಯರು ಬೇರೊಂದು ಸಂಘ ರಚಿಸುವಂತಿಲ್ಲ ಹಾಗೂ ಸದಸ್ಯತ್ವ ಪಡೆಯುವಂತಿಲ್ಲ. ಪ್ರಸ್ತುತ ಅನಧಿಕೃತವಾಗಿ ನಡೆದ ಚುನಾವಣಾ ಪ್ರಕ್ರೀಯೆಯಲ್ಲಿ ಭಾಗವಹಿಸಿದ ಎಲ್ಲಾ ಸದಸ್ಯರ ಸದಸ್ಯತ್ವವು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘವು ಅನರ್ಹಗೊಳಿಸುವ ಸಾಧ್ಯತೆ ಇದೆ.

ಚುನಾವಣೆ ನಡೆಯುವವರೆಗೆ ಶ್ರವಣ್ ಕುಮಾರ್ ನಾಳ ಅವರೇ ಅಧ್ಯಕ್ಷ
ಕಾರ್ಮಿಕ ಇಲಾಖೆಯ ನಿರ್ಧೇಶನದಂತೆ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘವು ಪುತ್ತೂರು ತಾಲೂಕು ಪತ್ರಕರ್ತರ ಸಂಘದ ಚುನಾವಣೆ ನಡೆಯುವವರೆಗೆ ಹಾಲಿ ಅಧ್ಯಕ್ಷ ಹಾಗೂ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಕಾರ್ಯಕಾರಣಿ ಸದಸ್ಯ ಶ್ರವಣ್ ಕುಮಾರ್ ನಾಳ ಅವರೇ ಅಧ್ಯಕ್ಷರಾಗು ಮುಂದುವರಿಯಲಿದ್ದಾರೆ, ಹಾಲಿ ಅಧ್ಯಕ್ಷ ಶ್ರವಣ್ ಕುಮಾರ್ ನಾಳ ನೇತೃತ್ವದಲ್ಲಿ ನಡೆದ ಪುತ್ತೂರು ತಾಲೂಕು ಪತ್ರಕರ್ತರ ಸಂಘದ ಸಭೆಗಳು ಮಾತ್ರ ಅಧಿಕೃತ ಎಂದು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶಿವಾನಂದ ತಗಡೂರು ತಿಳಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ಸಂಘದ ಸದಸ್ಯರು ಹಾಗೂ ಸಾರ್ವಜನಿಕರು ಯಾವುದೇ ಗೊಂದಲಗಳಿಗೆ ಕಿವಿಗೊಡದಂತೆ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರವಣ್ ಕುಮಾರ್ ನಾಳ ತಿಳಿಸಿದ್ದಾರೆ.









