Tuesday, September 1, 2026
spot_imgspot_img
spot_imgspot_img

ಪುನೀತ್​ಗೆ ಹೃದಯಸ್ಪರ್ಶಿ ವಿದಾಯ; ಭೂತಾಯಿ ಮಡಿಲು ಸೇರಿದ ‘ರಾಜಕುಮಾರ’

- Advertisement -
- Advertisement -

ಬೆಂಗಳೂರು: ಮೊನ್ನೆ ನಿಧನರಾಗಿದ್ದ ಕನ್ನಡದ ಖ್ಯಾತ ನಟ ಪವರ್​ಸ್ಟಾರ್​ ಪುನೀತ್​ ರಾಜ್​ಕುಮಾರ್​ ಅವರ ಅಂತ್ಯಕ್ರಿಯೆಯು ಇಂದು ಬೆಳಿಗ್ಗೆ ಕಂಠೀರವ ಸ್ಟುಡಿಯೋದಲ್ಲಿ ಸಕಲ ವಿಧಿವಿಧಾನಗಳೊಂದಿಗೆ ನೆರವೇರಿತು. ಡಾ.ರಾಜ್​​ಕುಮಾರ್ ಸಮಾಧಿಯ ಪಕ್ಕದಲ್ಲೆ ಪುನೀತ್​ ಅಂತ್ಯಕ್ರಿಯೆ ನಡೆಸಲಾಯಿತು.

ಕುಶಾಲತೋಪು ಸಿಡಿಸಿ, ರಾಷ್ಟ್ರಗೀತೆ ಮೂಲಕ ಪುನೀತ್​ ಪಾರ್ಥಿವ ಶರೀರಕ್ಕೆ ಸಕಲ ಸರ್ಕಾರಿ ಗೌರವಗಳನ್ನು ಸಲ್ಲಿಸಲಾಯಿತು. ಇನ್ನು ಈಡಿಗ ಸಮುದಾಯದ ಸಂಪ್ರದಾಯದಂತೆ ಪುನೀತ್​​ ಅಂತ್ಯಕ್ರಿಯೆ ನಡೆದಿದ್ದು ರಾಘವೇಂದ್ರ ರಾಜ್​ಕುಮಾರ್ ಹಿರಿಯ ಪುತ್ರ ವಿನಯ್​​ ರಾಜ್​ಕುಮಾರ್ ಅಂತಿಮ ವಿಧಿವಿಧಾನ ಕಾರ್ಯವನ್ನು ರಾಣೆಬೆನ್ನೂರಿನ ಶರಣಬಸವೇಶ್ವರ ಮಠದ ಡಾ. ಪರಮಾನಂದ ಸ್ವಾಮೀ ನೇತೃತ್ವದಲ್ಲಿ ನೆರವೇರಿಸಿದರು.

ಹೂವಿನ ಪಲ್ಲಕ್ಕಿಯಲ್ಲಿ ಇಡಲಾಗಿದ್ದ ಪಾರ್ಥಿವ ಶರೀರವನ್ನು ಮೂರು ಪ್ರದಕ್ಷಿಣೆ ಹಾಕಿಸಿ ಅಂತಿಮ ಯಾತ್ರೆ ನಡೆಸಿದರು, ವಿನಯ್ ರಾಜ್‌ಕುಮಾರ್ ಪಾರ್ಥಿವ ಶರೀರದ ಅಂತಿಮ ವಿಧಿಗಳನ್ನು ನೆರವೇರಿಸಿದರು. ಮೊದಲು ಉಪ್ಪನ್ನು ಗುಂಡಿಯೊಳಗೆ ಸುರಿದು, ಬಳಿಕ ಪಾರ್ಥಿವ ಶರೀರವನ್ನಿಟ್ಟು, ಅದರ ಮೇಲೆ ಬಾಳೆ ಎಲೆಗಳಿಂದ ಮುಚ್ಚಿ ಬಳಿಕ ಕಸ್ತೂರಿ, ತುಳಸಿ ಕಾಷ್ಠ ಹಾಗೂ ಉಪ್ಪನ್ನು ಹಾಕಿದರು. ಸ್ಟುಡಿಯೋ ಒಳಗೆ ಅಂತ್ಯ ಸಂಸ್ಕಾರ ಕಾರ್ಯ ನಡೆಯುತ್ತಿದ್ದರೇ, ಹೊರ ಭಾಗದಲ್ಲಿ ಅಭಿಮಾನಿಗಳು ಅಪ್ಪು ಮತ್ತೆ ಹುಟ್ಟಿ ಬಾ ಎಂಬ ಘೋಷಣೆಗಳನ್ನು ಮೊಳಗಿಸಿದರು.

ಇದಕ್ಕೂ ಮುನ್ನ ಪುನೀತ್​ ಪಾರ್ಥಿವ ಶರೀರವನ್ನು ಮೆರವಣಿಗೆ ಮೂಲಕ ಕಂಠೀರವ ಸ್ಟುಡಿಯೋಗೆ ತರಲಾಯಿತು. ಪುನೀತ್ ರಾಜ್ ಕುಮಾರ್ ಅವರ ಕುಟುಂಬದವರ ಇಚ್ಛೆಯಂತೆ ಕಂಠೀರವ ಸ್ಟುಡಿಯೋದಲ್ಲಿ ಅಂತ್ಯಕ್ರಿಯೆಗೆ ಕುಟುಂಬದ ಸದಸ್ಯರು ಹಾಗೂ ಕೆಲವು ಗಣ್ಯರು ಮಾತ್ರ ಭಾಗವಹಿಸಿದ್ದರು.

- Advertisement -

Related news

error: Content is protected !!