Sunday, May 5, 2024
spot_imgspot_img
spot_imgspot_img

ಬ್ರಹ್ಮಾವರ: ಗೂಳಿ ತಂದ ಅವಾಂತರ; ಓರ್ವ ಮಹಿಳೆ ಮೃತ್ಯು

- Advertisement -G L Acharya panikkar
- Advertisement -

ಬ್ರಹ್ಮಾವರ: ದೈತ್ಯ ಗೂಳಿಯೊಂದು ಬ್ರಹ್ಮಾವರ ಪೇಟೆಯ ಸುತ್ತಮುತ್ತ ಅಡ್ಡಾಡುತ್ತ, ಜನರಲ್ಲಿ ಭೀತಿಯನ್ನು ಉಂಟು ಮಾಡುತ್ತಿದೆ. ಇದರ ಜವಾಬ್ದಾರಿಯನ್ನು ಯಾರು ಹೊರಬೇಕಿತ್ತು ಅವರೇ ಕೈಚೆಲ್ಲಿ ಅಸಹಾಯಕರಂತೆ ಕೂತಿದ್ದಾರೆ. ಬ್ರಹ್ಮಾವರದ ಒಂಟಿ ಸಲಗ ಎಂದು ಕರೆಯುವ ದೈತ್ಯ ಗೂಳಿಯೊಂದರಿಂದ ಹಲವಾರು ಬಾರಿ ತೊಂದರೆ ಉಂಟು ಮಾಡಿದ್ದರಾದರೂ ಯಾರು ಕೂಡ ಈ ಬಗ್ಗೆ ಕ್ರಮ ತೆಗೆದುಕೊಂಡಿಲ್ಲ.

ಪ್ರಾಣಿ ಪ್ರಿಯರಿಗೆ ಇದು ಸಾಧು ಪ್ರಾಣಿ, ಕೆಲವರು ಅದನ್ನು ನೋಡಿ ಕರೆದು ಬೇಕಾದ ತಿನಿಸು ಕೊಟ್ಟವರೂ ಇದ್ದಾರೆ. ಇನ್ನು ಕೆಲವರಿಗೆ ಇದು ಸಮಸ್ಯೆ ತಂದಿಕ್ಕಿದೆ. ಈ ಒಂಟಿ ಸಲಗದ ದಾಳಿಯಿಂದ ಓರ್ವ ಮಹಿಳೆ ಮೃತ ಪಟ್ಟಿದ್ದು, ಇಬ್ಬರು ಮಹಿಳೆಯರು ತೀರಾ ಗಂಭಿರ ಸ್ಥಿತಿಯಲ್ಲಿದ್ದಾರೆ. ಬಹುಶಃ ಈ ಬಗ್ಗೆ ಕೆಲವು ಮಂದಿಗಷ್ಟೇ ಅರಿವಿರುತ್ತದೆ.

ಶ್ರೀ ಮಹಾಲಿಂಗೇಶ್ವರ ದೇವಸ್ಥಾನಕ್ಕೆ ಸಂಭಂದಪಟ್ಟಿರುವ ಈ ಗೂಳಿಯನ್ನು ಕಟ್ಟಿ ಹಾಕುವ ಬದಲು ತಿರುಗಾಡಲು ಬಿಟ್ಟಿದ್ದಾರೆ. ನಗರವೆಲ್ಲಾ ಸಂಚರಿಸಿ ಇಲ್ಲಿನ ಹಣ್ಣು, ತರಕಾರಿ ಅಂಗಡಿಗೆ ನುಗ್ಗಿ ಹೊಟ್ಟೆ ತುಂಬುವಷ್ಟು ತಿಂದು , ರಸ್ತೆ ಬದಿಯಲ್ಲಿ ನಿಲ್ಲಿಸಿದ ಅದೆಷ್ಟೋ ದ್ವಿಚಕ್ರ ವಾಹನ, ಕಾರು ಇನ್ನಿತರ ವಾಹನಗಳನ್ನು ಜಖಂ ಮಾಡಿದೆ.

ಬ್ರಹ್ಮಾವರದ ಇಂದಿರಾನಗರದ ನಿವಾಸಿ 71 ವರ್ಷದ ವಿಮಲ ನಾಯಕ್ ರನ್ನು ಇದೇ ಗೂಳಿ ಕೆಡವಿ ಹಾಕಿದ್ದು, ಚಿಕಿತ್ಸೆಗಾಗಿ ಮನೆಯವರು ಲಕ್ಷಾಂತರ ರೂ ಖರ್ಚು ಮಾಡಿದರೂ ಫಲಕಾರಿಯಾಗದೆ ಅಗಸ್ಟ 29 ರಂದು ಮೃತರಾದರು.

ಮತ್ತೊಂದು ಘಟನೆಯಲ್ಲಿ, ರಥ ಬೀದಿಯ ಬಳಿ ವಾಸ ಮಾಡುವ 71 ವರ್ಷದ ಗೌರಿ ನಾಯಕರ ಮನೆಗೆ ನುಗ್ಗಿದ ಗೂಳಿ, ಅವರನ್ನು ಕೆಡವಿದ್ದು ಹಲವು ದಿನ ಕೋಮಾ ಸ್ಥಿತಿಯಲ್ಲಿದ್ದರು. ಕೂಲಿ ಕೆಲಸ ಮಾಡಿ ಬದುಕುವ ಅವರ ಮಗ ಶಿವಾನಂದ ಲಕ್ಷಾಂತರ ರೂ ಸಾಲ ಮಾಡಿ ಚಿಕಿತ್ಸೆ ಮಾಡಿದರೂ ಫಲಕಾರಿಯಾಗದೆ ಇದೀಗ ಜೀವನ್ಮರಣ ಸ್ಥಿತಿಯಲ್ಲಿದ್ದಾರೆ ಗೌರಿ ಬಾಯಿ.

ಇನ್ನೊಬ್ಬರು ಇಂದಿರಾನಗರದ ಬಿಲ್ಲಿ ಬಾಯಿ ಎನ್ನುವ ಮಹಿಳೆ, ಇವರು ಕೂಡಾ ಗೂಳಿಯ ಏಟು ತಿಂದು ಮನೆಯಲ್ಲಿ ನಡೆದಾಡದ ಸ್ಥಿತಿಯಲ್ಲಿದ್ದಾರೆ.

ಕೆಲವು ಸಮಯದ ಹಿಂದೆ ಇಲ್ಲಿನ ಯುವಕರು ಗೂಳಿಯನ್ನು ಹಿಡಿದು ಎರಡು ತಿಂಗಳು ಕಟ್ಟಿ ಸಾಕಿ ಪುನ ಬಿಡುಗಡೆಗೊಳಿಸಿದ ಬಳಿಕ ಬ್ರಹ್ಮಾವರ ರಥ ಬೀದಿ ಬಿಟ್ಟು ,ಇಂದಿರಾ ನಗರಕ್ಕೆ ಲಗ್ಗೆ ಇಟ್ಟು ಜನರಿಗೆ ತೊಂದರೆ ಕೊಡಲು ಆರಂಭಿಸಿದೆ, ಎಂದು ಸ್ಥಳೀಯರು ದೂರಿದ್ದಾರೆ.

ಹಲವಾರು ಮಂದಿಯ ಪ್ರಾಣಕ್ಕೆ ಸಂಚಕಾರ ತಂದ ಗೂಳಿಯನ್ನು ಗೋ ಸಂರಕ್ಷಕರು ಜನರಿಗೆ ತೊಂದರೆ ಕೊಡದಂತೆ ಸೂಕ್ತ ವ್ಯವಸ್ಥೆ ಮಾಡಬೇಕಾಗಿದೆ. ಮುಂದೊಂದು ದಿನ ಇಂತಹ ಘಟನೆ ಮರುಕಳಿಸದಿರಲಿ ಎನ್ನುವುದು ಸಾರ್ವಜನಿಕರ ಕಳಕಳಿ.

- Advertisement -

Related news

error: Content is protected !!