Tuesday, April 30, 2024
spot_imgspot_img
spot_imgspot_img

ಮಂಗಳೂರು: ಕೋವಿಡ್ 3ನೇ ಅಲೆ ಭೀತಿ; ದಸರಾ ಹಬ್ಬದವರೆಗೆ ಸಾರ್ವಜನಿಕವಾಗಿ ಸೇರಲು ಅವಕಾಶವಿಲ್ಲ- ಜಿಲ್ಲಾಧಿಕಾರಿ

- Advertisement -G L Acharya panikkar
- Advertisement -

ಮಂಗಳೂರು: ಜಿಲ್ಲೆಯಲ್ಲಿ ಕೋವಿಡ್ 3ನೇ ಅಲೆಯ ಭೀತಿ ಹಿನ್ನೆಲೆಯಲ್ಲಿ ದಸರಾ ಹಬ್ಬದವರೆಗೆ ಸಾರ್ವಜನಿಕರ ಸಾಮೂಹಿಕ ಭಾಗವಹಿಸುವಿಕೆಯೊಂದಿಗೆ ಹಬ್ಬ ಹರಿದಿನಗಳ ಆಚರಣೆಗೆ ಅವಕಾಶವಿರುವುದಿಲ್ಲ ಎಂದು ದ.ಕ. ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ. ಹೇಳಿದ್ದಾರೆ.

ದ.ಕ. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಪ್ರೆಸ್‌ಕ್ಲಬ್‌ನಲ್ಲಿ ಆಯೋಜಿಸಲಾದ ಸಂವಾದ ಕಾರ್ಯಕ್ರಮದಲ್ಲಿ ಅವರು ಕೋವಿಡ್ 3ನೆ ಅಲೆಗೆ ಸಂಬಂಧಿಸಿ ದ.ಕ. ಜಿಲ್ಲಾಡಳಿತ ಕೈಗೊಂಡಿರುವ ಸಿದ್ಧತೆಗಳ ಬಗ್ಗೆ ಮಾಹಿತಿ ನೀಡಿದರು.

ನಾಗರ ಪಂಚಮಿಯ ದಿನದಂದು ದೇವಾಲಯಗಳಲ್ಲಿ ಭಕ್ತರಿಂದ ವಿಶೇಷ ಪೂಜೆ ಹಾಗೂ ಸೇವೆಗಳಿಗೆ ಅವಕಾಶವಿರುವುದಿಲ್ಲ. ಸಾಂಪ್ರದಾಯಿಕವಾಗಿ ದೇವಸ್ಥಾನಗಳ ಅರ್ಚಕರಿಂದ ನಡೆಯುವ ಧಾರ್ಮಿಕ ಆಚರಣೆಗಳು ನಡೆಯಲಿದ್ದು, ಜಿಲ್ಲೆಯಲ್ಲಿ ಕೋವಿಡ್ ಮಾರ್ಗಸೂಚಿಯೊಂದಿಗೆ ನಾಗಬನ ಹಾಗೂ ಕುಟುಂಬದ ಮನೆಗಳಲ್ಲಿ ಆಚರಿಸಲಾಗುವ ಪೂಜೆಗಳನ್ನು ಯಾವುದೇ ರೀತಿಯಲ್ಲಿ ಜನ ಸಮೂಹವಾಗದಂತೆ ಜಾಗೃತಿಯೊಂದಿಗೆ ನೆರವೇರಿಸಲು ಸ್ಥಳೀಯ ಪಿಡಿಒಗಳ ಮೇಲ್ವಿಚಾರಣೆಯಲ್ಲಿ ನಡೆಸುವಂತೆ ಸೂಚಿಸಲಾಗಿದೆ.

ಸ್ವಾತಂತ್ರ ದಿನಾಚರಣೆಯು ಸೀಮಿತ ಸಿಬ್ಬಂದಿ ಹಾಗೂ ಜನಪ್ರತಿನಿಧಿಗಳ ಸಮ್ಮುಖದಲ್ಲಿ ಸಾರ್ವಜನಿಕರ ಭಾಗವಹಿಸುವಿಕೆ ಇಲ್ಲದೆ ನಡೆಸಲಾಗುತ್ತದೆ. ಕೃಷ್ಣ ಜನ್ಮಾಷ್ಠಮಿ, ಗಣೇಶ ಹಬ್ಬದ ಸಂದರ್ಭದಲ್ಲೂ ಸಾರ್ವಜನಿಕವಾಗಿ ಚಪ್ಪರ, ಶಾಮಿಯಾನ ಹಾಕಿಕೊಂಡು, ಮೆರವಣಿಗೆಯೊಂದಿಗೆ ಯಾವುದೇ ಕಾರ್ಯಕ್ರಮಕ್ಕೆ ಅವಕಾಶ ನೀಡದಿರಲು ಈಗಾಗಲೇ ಚಿಂತನೆ ಮಾಡಲಾಗಿದೆ ಎಂದು ಡಾ. ರಾಜೇಂದ್ರ ಕೆ.ವಿ. ತಿಳಿಸಿದರು. ಈ ವಾರಂತ್ಯದಲ್ಲೂ ವೀಕೆಂಡ್ ಕರ್ಫ್ಯೂ ಇರಲಿದೆ.

ಪರೀಕ್ಷೆಗೆ ತೆರಳುವವರು ಇದ್ದರೆ ಹಾಲ್ ಟಿಕೆಟ್ ತೋರಿಸಿ ಪ್ರಯಾಣ ಮಾಡಬಹುದು ಎಂದು ಅವರು ತಿಳಿಸಿದ್ದಾರೆ.

ದ.ಕ. ಜಿಲ್ಲೆಯಲ್ಲಿ ಶಾಲೆ- ಕಾಲೇಜು ವಿಳಂಬ ಸಾಧ್ಯತೆ ;

ಈಗಾಗಲೇ ಮುಖ್ಯಮಂತ್ರಿಯವರು ಶಾಲೆ ಕಾಲೇಜು ಆರಂಭದ ಬಗ್ಗೆ ಮಾಹಿತಿ ನೀಡಿದ್ದಾರೆ. ಆದರೆ ಉಳಿದ ಜಿಲ್ಲೆಗಳಲ್ಲಿ ಶಾಲಾ ಕಾಲೇಜು ಆರಂಭವಾದರೂ ದ.ಕ. ಸೇರಿದಂತೆ ಕೋವಿಡ್ ಪಾಸಿಟಿವಿಟಿ ಹೆಚ್ಚಿರುವ ಜಿಲ್ಲೆಗಳಲ್ಲಿ ಸ್ವಲ್ಪ ವಿಳಂಬವಾಗುವ ಸಾಧ್ಯತೆ ಇದೆ ಎಂದು ಜಿಲ್ಲಾಧಿಕಾರಿ ಹೇಳಿದರು.

ದ.ಕ. ಜಿಲ್ಲಾಸ್ಪತ್ರೆಯಾದ ವೆನ್‌ಲಾಕ್‌ನಲ್ಲಿ 32 ಬೆಡ್‌ಗಳ ಹೈಟೆಕ್ ಐಸಿಯು ಸಿದ್ಧಗೊಂಡಿದ್ದು, ಸಿಎಂ ಆಗಿ ಮೊದಲ ಬಾರಿಗೆ ಜಿಲ್ಲೆಗೆ ಗುರುವಾರ ಭೇಟಿ ನೀಡಲಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಐಸಿಯು ಘಟಕವನ್ನು ಉದ್ಘಾಟಿಸಲಿದ್ದಾರೆ ಎಂದು ದ.ಕ. ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ. ತಿಳಿಸಿದರು.

ಆ.15ರಿಂದ ಮತ್ತೆ ಲಾಕ್‌ಡೌನ್ ಮಾಡುವ ಪರಿಸ್ಥಿತಿ ಬಂದಿಲ್ಲ

ರಾಜ್ಯದ ಇತರ ಜಿಲ್ಲೆಗಳಿಗೆ ಹೋಲಿಕೆ ಮಾಡಿದರೆ ಜಿಲ್ಲೆಯಲ್ಲಿ ಕೋವಿಡ್ ಸೋಂಕಿತರ ಸಂಖ್ಯೆ ಹೆಚ್ಚಿರುವುದು ನಿಜ. ಆದರೆ ಅತ್ಯಂತ ಸುಸಜ್ಜಿತ

ಆಧುನಿಕ ಆಸ್ಪತ್ರೆಗಳು, ಕೋವಿಡ್ ಸೋಂಕಿತರ ಸಂಖ್ಯೆ ಹೆಚ್ಚಿರುವ ಕಾಸರಗೋಡು ಸೇರಿದಂತೆ ಕೇರಳ ರಾಜ್ಯದ ಜತೆ ದ.ಕ. ಜಿಲ್ಲೆ ಗಡಿ ಹಂಚಿಕೊಂಡಿರುವುದರಿಂದ ಸಹಜವಾಗಿ ಪಾಸಿಟಿವಿಟಿ ದರದಲ್ಲಿ ಹೆಚ್ಚಳ ಕಂಡುಬರುತ್ತಿದೆ. ಆದರೆ ಜಿಲ್ಲೆಯಲ್ಲಿ ಪ್ರತಿನಿತ್ಯ ಕೋವಿಡ್ ತಪಾಸಣಾ ಸಂಖ್ಯೆಯೂ ಹೆಚ್ಚುತ್ತಿದೆ. ನಿನ್ನೆ ಒಂದು ದಿನದಲ್ಲಿ 9900 ಮಂದಿಗೆ ಕೋವಿಡ್ ತಪಾಸಣೆ ಮಾಡಲಾಗಿದೆ. ಆದರೆ ಸದ್ಯದ ಪರಿಸ್ಥಿತಿಯಲ್ಲಿ ಮತ್ತೆ ಲಾಕ್‌ಡೌನ್ ಮಾಡುವಂತಹ ಪರಿಸ್ಥಿತಿ ಇಲ್ಲ. ಪರಿಸ್ಥಿತಿಯನ್ನು ಅವಲೋಕಿಸಿ ರಾಜ್ಯ ಸರಕಾರದ ನಿರ್ದೇಶನದ ಮೇರೆಗೆ ಕ್ರಮ ವಹಿಸಲಾಗುತ್ತದೆ ಎಂದು ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ. ಪ್ರತಿಕ್ರಿಯಿಸಿದ್ದಾರೆ.

ದ.ಕ. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ ನಾಯಕ್ ಇಂದಾಜೆ ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ಇಬ್ರಾಹಿಂ ಅಡ್ಕಸ್ಥಳ ವಂದಿಸಿದರು. ವಿಜಯ್ ಕೋಟ್ಯಾನ್ ಕಾರ್ಯಕ್ರಮ ನಿರೂಪಿಸಿದರು.

- Advertisement -

Related news

error: Content is protected !!