Wednesday, July 22, 2026
spot_imgspot_img
spot_imgspot_img

ಮಂಗಳೂರು: ಗಣೇಶ ಹಬ್ಬದಲ್ಲಿ ಸರ್ಕಾರ ಹೊರಡಿಸಿರುವ ಮಾರ್ಗಸೂಚಿಗಳನ್ನು ಪಾಲಿಸಿ, ಸಡಗರಿದಂದ ಆಚರಿಸುವಂತೆ ಜಿಲ್ಲಾಧಿಕಾರಿ ಸಲಹೆ

- Advertisement -
- Advertisement -

ಮಂಗಳೂರು: ಸರ್ಕಾರ ಹಾಗೂ ರಾಜ್ಯ ಹೈಕೋರ್ಟ್ ಹೊರಡಿಸಿರುವ ಮಾರ್ಗಸೂಚಿಗಳನ್ನು ಪಾಲಿಸಿ ಈ ಬಾರಿಯ ಗಣೇಶ ಹಬ್ಬವನ್ನು ಸಂಭ್ರಮ ಹಾಗೂ ಸಡಗರಿದಂದ ಆಚರಿಸುವಂತೆ ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ ರವರು ಜಿಲ್ಲೆಯ ಗಣೇಶೋತ್ಸವ ಸಮಿತಿಗಳ ಮುಖಂಡರಿಗೆ ಸಲಹೆ ನೀಡಿದರು.

ಅವರು ಆ.26ರ ಶುಕ್ರವಾರ ನಗರದ ಜಿಲ್ಲಾಧಿಕಾರಿಯವರ ಕಚೇರಿ ಸಭಾಂಗಣದಲ್ಲಿ ಈ ಕುರಿತು ಹಮ್ಮಿಕೊಳ್ಳಲಾಗಿದ್ದ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಸಾರ್ವಜನಿಕವಾಗಿ ಗಣೇಶೋತ್ಸವ ಆಚರಿಸುವ ಸಮಿತಿಗಳು ಆಯಾ ವ್ಯಾಪ್ತಿಯ ಪೊಲೀಸ್ ಇಲಾಖೆ, ನಗರ ಸ್ಥಳೀಯ ಸಂಸ್ಥೆಗಳು ಹಾಗೂ ಗ್ರಾಮ ಪಂಚಾಯತ್‍ಗಳಲ್ಲಿ ಅನುಮತಿ ಪಡೆಯಬೇಕು, ಈ ಸಂದರ್ಭದಲ್ಲಿ ಸೌಹಾರ್ದತೆ ಹಾಗೂ ಸಾಮಾಜಿಕ ಸ್ವಾಸ್ಥ್ಯ ಕದಡುವಂತಹ ಬರಹಗಳ ಬ್ಯಾನರ್ ಅಥವಾ ಫ್ಲೆಕ್ಸ್‍ಗಳನ್ನು ಅಳವಡಿಸಬಾರದು, ನಗರ ಸ್ಥಳೀಯ ಸಂಸ್ಥೆಗಳು ಅಥವಾ ಪೊಲೀಸ್ ಇಲಾಖೆಯ ಅನುಮತಿ ಪಡೆದು ಶುಭ ಕೋರುವ ಬ್ಯಾನರ್ ಅಥವಾ ಫ್ಲೆಕ್ಸ್‍ಗಳನ್ನು ಅಳವಡಿಸಿಕೊಳ್ಳಬಹುದಾಗಿದೆ, ಇದೀಗ ಮಳೆಗಾಲವಾದ ಕಾರಣ ಮಳೆ ಹಾಗೂ ಗಾಳಿಗೆ ಹಾನಿಯಾಗದಂತಹ ಪೆಂಡಾಲ್‍ಗಳನ್ನು ಹಾಕಬೇಕು, ಅಲ್ಲಿ ವಿದ್ಯುತ್ ಅವಘಡಗಳಾಗದಂತೆ ಎಚ್ಚರ ವಹಿಸಬೇಕು, ವಿದ್ಯುತ್ ಸಂಪರ್ಕ ಪಡೆಯಲು ತಾತ್ಕಾಲಿಕ ಅನುಮತಿ ಪಡೆಯಬೇಕು, ದೊಡ್ಡ ದೊಡ್ಡ ಗಣೇಶ ಮೂರ್ತಿಗಳನ್ನು ಪ್ರತಿಷ್ಠಾಪಿಸುವ ಸಮಿತಿಗಳು ಕಡ್ಡಾಯವಾಗಿ ಸಿಸಿಟಿವಿಯನ್ನು ಅಳವಡಿಸಿಕೊಳ್ಳಬೇಕು, ಸಾರ್ವಜನಿಕರ ಓಡಾಟಕ್ಕೆ ಅನುಕೂಲವಾಗುವಂತೆ ನೋಡಿಕೊಳ್ಳಬೇಕು, ಆ ಪೆಂಡಾಲ್‍ಗಳಲ್ಲಿ ಯಾವುದೇ ರೀತಿಯ ಅವಘಡಗಳು ಆಗದಂತೆ ಎಚ್ಚರ ವಹಿಸಲು ತಮ್ಮ ಕಾರ್ಯಕರ್ತರನ್ನು ನಿಯೋಜಿಸುವಂತೆ ಅವರು ತಿಳಿಸಿದರು.

ಧ್ವನಿ ವರ್ಧಕಗಳನ್ನು ಬಳಸುವ ಮುನ್ನ ಸಂಬಂಧಪಟ್ಟವರಿಂದ ಅನುಮತಿ ಪಡೆಯಬೇಕು ಮತ್ತು ನ್ಯಾಯಾಲಯದ ಆದೇಶದಂತೆ ರಾತ್ರಿ ಹತ್ತು ಗಂಟೆಯ ನಂತರ ಧ್ವನಿ ವರ್ಧಕಗಳನ್ನು ಬಳಸಬಾರದು, ವಿದ್ಯುತ್ ಅಲಂಕಾರ, ಬೆಳಕಿನ ವ್ಯವಸ್ಥೆಯಲ್ಲಿ ಯಾವುದೇ ಲೋಪದೋಷಗಳಾಗದಂತೆ ಆಯೋಜಕರು ಗಮನ ಹರಿಸಬೇಕು. ವಿಸರ್ಜನೆ ಮೆರವಣಿಗೆಯಲ್ಲಿ ವಿದ್ಯುತ್ ತಂತಿಗಳು ಅಥವಾ ಕೇಬಲ್‍ಗಳು ಇರದಿರುವ ಬಗ್ಗೆ ಖಚಿತ ಪಡಿಸಿಕೊಂಡ ನಂತರವೇ ಮೆರವಣಿಗೆ ನಡೆಸಬೇಕು ಎಂದು ಮಾಹಿತಿ ನೀಡಿದರು.

ಕೋವಿಡ್-19 ಸೋಂಕು ಪ್ರಕರಣಗಳು ಕಡಿಮೆ ಇದ್ದಾಗ್ಯೂ ಹಬ್ಬದ ಸಂದರ್ಭದಲ್ಲಿ ಎಚ್ಚರ ವಹಿಸಬೇಕು, ಪ್ಲಾಸ್ಟ್‍ರ್ ಆಫ್ ಪ್ಯಾರಿಸ್ ಸೇರಿದಂತೆ ಪರಿಸರಕ್ಕೆ ಹಾನಿಯಾಗುವಂತಹ ಪ್ರತಿಮೆಗಳನ್ನು ಬಳಸಬಾರದು, ಶುದ್ದ ಮಣ್ಣಿನಿಂದ ಮಾಡಿದ ಗಣಪನ್ನೇ ಬಳಸುವಂತೆ ತಿಳಿಸಿದ ಅವರು ಯಾವುದೇ ರೀತಿಯ ಅಹಿತಕರ ಘಟನೆಗಳು ನಡೆಯದಂತೆ ಸರ್ಕಾರ ಮತ್ತು ನ್ಯಾಯಾಲಯದ ಆದೇಶವನ್ನು ಪಾಲಿಸುವ ಮೂಲಕ ಯಶಸ್ವಿಯಾಗಿ ಗಣೇಶೋತ್ಸವವನ್ನು ಆಚರಿಸುವಂತೆ ಅವರು ಸಲಹೆ ನೀಡಿದರು.

ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಕುಮಾರ್, ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಋಷಿಕೇಶ್ ಭಗವಾನ್ ಸೋನಾವಣೆ, ಮಹಾನಗರ ಪಾಲಿಕೆ ಆಯುಕ್ತ ಅಕ್ಷಯ್ ಶ್ರೀಧರ್, ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಡಿಸಿಪಿ ಅಂಕ್ಷು ಕುಮಾರ್ ಹಾಗೂ ಅಪರ ಜಿಲ್ಲಾಧಿಕಾರಿ ಕೃಷ್ಣಮೂರ್ತಿ ವೇದಿಕೆಯಲ್ಲಿದ್ದರು.

ಜಿಲ್ಲೆಯ ವಿವಿಧ ಗಣೇಶೋತ್ಸವ ಸಮಿತಿಯ ಅಧ್ಯಕ್ಷರು, ಸದಸ್ಯರು, ಪದಾಧಿಕಾರಿಗಳು ಹಾಗೂ ಆಯೋಜಕರು ಸಭೆಯಲ್ಲಿ ಭಾಗವಹಿಸಿ, ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡರು.

- Advertisement -

Related news

error: Content is protected !!