




ಭೋಪಾಲ್: ಮಧ್ಯಪ್ರದೇಶದ ಡಬ್ರಾದಲ್ಲಿ 50 ಶಾಲಾ ಮಕ್ಕಳ ಎದುರೇ ಶಾಲಾ ಬಸ್ ಚಾಲಕನ ಮೇಲೆ ಗುಂಡಿನ ದಾಳಿ ನಡೆದಿದ್ದು, ಇದರಿಂದ ಮಕ್ಕಳು ಹಾಗೂ ಸಾರ್ವಜನಿಕರು ತೀವ್ರ ಆತಂಕಕ್ಕೆ ಒಳಗಾಗಿದ್ದಾರೆ.
ಟೆಕಾನ್‌ಪುರದ ‘ಗ್ಲೋರಿಯಸ್ ಕಾನ್ವೆಂಟ್ ಸ್ಕೂಲ್’ಗೆ ಮಕ್ಕಳನ್ನು ಬಸ್ ಚಾಲಕ ಖೇಮ್ ಸಿಂಗ್ ಕರೆದೊಯ್ಯುತ್ತಿದ್ದರು. ಬಸ್ ಪಿಚೋರ್ ಪೊಲೀಸ್ ಠಾಣಾ ವ್ಯಾಪ್ತಿಯ ಬಡಿ ಅಕ್ಬಾಯಿ ಗ್ರಾಮದ ಬಳಿ ಬಂದಾಗ ಈ ದಾಳಿ ನಡೆದಿದೆ.
ಗ್ರಾಮದ ರಸ್ತೆಯ ಮಧ್ಯದಲ್ಲಿ ಸ್ವಿಫ್ಟ್ ಕಾರನ್ನು ನಿಲ್ಲಿಸಲಾಗಿತ್ತು. ಈ ವೇಳೆ ಬಸ್ ಚಾಲಕ ಕಾರನ್ನು ಬದಿಗೆ ಕೊಂಡೊಯ್ಯುವಂತೆ ಕಾರಿನಲ್ಲಿರುವವರಿಗೆ ಹೇಳಲು ಕ್ಲೀನರ್‌ನ್ನು ಕಳಿಸಿದ್ದರು. ಆದರೆ ಕಾರಿನಲ್ಲಿ ಪೆಟ್ರೋಲ್ ಖಾಲಿಯಾಗಿದೆ ಎಂದು ಕಾರಲ್ಲಿದ್ದವರು ಸ್ಥಳಾಂತರಿಸಲು ನಿರಾಕರಿಸಿದ್ದಾರೆ. ಈ ವೇಳೆ ಸಿಂಗ್ ಸ್ವತಃ ಕೆಳಗಿಳಿದು, ರಸ್ತೆಯನ್ನು ತೆರವುಗೊಳಿಸಲು ಕಾರನ್ನು ಪಕ್ಕಕ್ಕೆ ತಳ್ಳುವಂತೆ ಸಲಹೆ ನೀಡಿದರು. ಇದರಿಂದ ಕಾರಲ್ಲಿದ್ದ ಯುವಕರು ಕೋಪಗೊಂಡ ಗಲಾಟೆ ನಡೆಸಿದ್ದಾರೆ.
ಯುವಕರ ಗುಂಪಲ್ಲಿದ್ದ ಒಬ್ಬ ದೇಶಿ ನಿರ್ಮಿತ ಪಿಸ್ತೂಲ್ ತೆಗೆದು ಸಿಂಗ್ ಅವರತ್ತ ನಾಲ್ಕು ಸುತ್ತು ಗುಂಡು ಹಾರಿಸಿದ್ದಾರೆ. ಗುಂಡಿನ ಚೂರುಗಳು(ಪೆಲೆಟ್ಸ್) ಅವರ ಕಣ್ಣಿನ ಹತ್ತಿರ ಮತ್ತು ಕೆನ್ನೆಗೆ ತಗುಲಿದ ಪರಿಣಾಮ ಅವರು ಗಾಯಗೊಂಡಿದ್ದು, ನಂತರ ಆರೋಪಿಗಳು ಸ್ಥಳದಿಂದ ಪರಾರಿಯಾಗಿದ್ದಾರೆ.
ಗಾಯಗೊಂಡ ಚಾಲಕನನ್ನು ಮೊದಲು ಡಬ್ರಾದ ಆಸ್ಪತ್ರೆಗೆ ಕರೆದೊಯ್ಯಲಾಯಿತು. ನಂತರ ಹೆಚ್ಚಿನ ಚಿಕಿತ್ಸೆಗಾಗಿ ಗ್ವಾಲಿಯರ್‌ಗೆ ರವಾನಿಸಲಾಯಿತು.
ಅನಿರೀಕ್ಷಿತ ಗುಂಡಿನ ಸದ್ದು ಮತ್ತು ತಮ್ಮ ಚಾಲಕನ ಮೇಲಿನ ದಾಳಿಯಿಂದಾಗಿ ಮಕ್ಕಳು ತೀವ್ರ ಭಯಭೀತರಾಗಿದ್ದರು. ಆರೋಪಿಗಳನ್ನು ಗುರುತಿಸಲು ಮತ್ತು ಬಂಧಿಸಲು ಪೊಲೀಸ್ ತಂಡಗಳನ್ನು ರಚಿಸಲಾಗಿದ್ದು, ಆರೋಪಿಗಳ ಚಲನವಲನಗಳನ್ನು ಪತ್ತೆಹಚ್ಚಲು ಆ ಪ್ರದೇಶದ ಸಿಸಿಟಿವಿ ದೃಶ್ಯಾವಳಿಗಳನ್ನು ಸಹ ಪರಿಶೀಲಿಸಲಾಗುತ್ತಿದೆ ಎಂದು ತಿಳಿದುಬಂದಿದೆ.








