Wednesday, May 8, 2024
spot_imgspot_img
spot_imgspot_img

ಮಂಗಳೂರು: ಮಗು ಅದಲು-ಬದಲು ಪ್ರಕರಣ; ದೂರುದಾರ ಮುಸ್ತಫಾನೇ ಮಗುವಿನ ತಂದೆ – ಡಿಎನ್ ಎ ಪರೀಕ್ಷಾ ವರದಿ

- Advertisement -G L Acharya panikkar
- Advertisement -

ಮಂಗಳೂರು: ನಗರದ ಲೇಡಿಗೋಶನ್ ಸರಕಾರಿ ಆಸ್ಪತ್ರೆಯಲ್ಲಿ ಮಗು ಅದಲು -ಬದಲು ಆರೋಪ ಪ್ರಕರಣದ ಹಿನ್ನೆಲೆಯಲ್ಲಿ ಹೈದರಾಬಾದ್‌ನ ಪ್ರಯೋಗಾಲಯದಲ್ಲಿ ನಡೆಸಲಾಗಿದ್ದ ಡಿಎನ್‌ಎ ಪರೀಕ್ಷೆಯ ವರದಿಯು ತನಿಖಾಧಿಕಾರಿಯ ಕೈ ಸೇರಿದ್ದು, ದೂರುದಾರರಾದ ಮುಸ್ತಫಾ ಅವರೇ ಮಗುವಿನ ತಂದೆ ಎಂಬುದನ್ನು ವರದಿ ಖಚಿತಪಡಿಸಿದೆ.

ಮಗು ಅದಲು-ಬದಲು ಪ್ರಕರಣಕ್ಕೆ ಸಂಬoಧಿಸಿದoತೆ ವರ್ಷದ ಹಿಂದೆ ನಗರದ ಲೇಡಿಗೋಷನ್ ಆಸ್ಪತ್ರೆಯ ವಿರುದ್ಧ ಪ್ರಕರಣ ದಾಖಲಾಗಿತ್ತು. ತನಗೆ ಜನಿಸಿದ ಆರೋಗ್ಯವಂತ ಹೆಣ್ಣು ಮಗುವನ್ನು ಬದಲಿಸಿ, ಆಸ್ಪತ್ರೆಯ ಸಿಬ್ಬಂದಿ ಅನಾರೋಗ್ಯ ಪೀಡಿತ ಗಂಡು ಮಗುವನ್ನು ನೀಡಿದ್ದಾರೆ ಎಂಬುದಾಗಿ ಮುಸ್ತಾಫಾ ಆರೋಪಿಸಿದ್ದರು.

ಈ ಹಿನ್ನೆಲೆಯಲ್ಲಿ ಪ್ರಕರಣಕ್ಕೆ ಸಂಬoಧಿಸಿದoತೆ ಹೈದರಾಬಾದ್‌ನ ಪ್ರಯೋಗಾಲಯದಲ್ಲಿ ಡಿಎನ್ ಎ ಪರೀಕ್ಷೆ ನಡೆಸಲಾಗಿತ್ತು. ಇದೀಗ ಈ ತನಿಖೆಯ ವರದಿ ತನಿಖಾಧಿಕಾರಿಯ ಕೈಸೇರಿದ್ದು, ದೂರುದಾರರಾದ ಮುಸ್ತಫಾ ಅವರೇ ಗಂಡು ಮಗುವಿನ ತಂದೆ ಎಂಬುದನ್ನು ವರದಿ ಖಚಿತಪಡಿಸಿದೆ’ ಎಂದು ಉತ್ತರ ಠಾಣೆ ಪೊಲೀಸ್ ಮೂಲಗಳು ತಿಳಿಸಿವೆ ಎಂಬುದಾಗಿ ಮಾಧ್ಯಮವೊಂದು ವರದಿ ಮಾಡಿದೆ. ಈ ವರದಿಯ ಆಧಾರದಲ್ಲಿ ಪ್ರಕರಣದ ಬಗ್ಗೆ ನ್ಯಾಯಾಲಯಕ್ಕೆ ‘ಬಿ’ ರಿಪೋರ್ಟ್ ಸಲ್ಲಿಸಲು ಪೊಲೀಸರು ಸಿದ್ಧತೆ ಮಾಡಿಕೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

2021ರ ಸೆಪ್ಟೆಂಬರ್ 27ರಂದು ಮುಸ್ತಫಾ ಅವರ ಪತ್ನಿ ಗಂಡು ಮಗುವಿಗೆ ಜನ್ಮ ನೀಡಿದ್ದರು. ಆದರೆ ಆಸ್ಪತ್ರೆಯ ಸಿಬ್ಬಂದಿಯ ತಪ್ಪಿನಿಂದಾಗಿ, ಜನ್ಮ ದಾಖಲೆಯ ಲಿಂಗ ಕಾಲಂನಲ್ಲಿ ಗಂಡು ಮಗು’ ಬದಲು ಹೆಣ್ಣು ಮಗು ಎಂಬುದಾಗಿ ದಾಖಲಾಗಿತ್ತು. ಮಗುವಿನ ತೂಕ ಕೇವಲ 1.4 ಕೆ.ಜಿ. ಯಷ್ಟಿತ್ತು. ಅಲ್ಲದೆ, ಮಗುವಿನಲ್ಲಿ ಉಸಿರಾಟದ ತೊಂದರೆಯೂ ಕಾಣಿಸಿದ್ದರಿಂದ ಕೂಡಲೇ ಅದನ್ನು ನವಜಾತ ಶಿಶುಗಳ ತೀವ್ರನಿಗಾ ಘಟಕಕ್ಕೆ ಸ್ಥಳಾಂತರಿಸಲಾಗಿತ್ತು. ಆದರೆ ದಾಖಲೆಯಲ್ಲಿ ಹೆಣ್ಣು ಮಗು ಇದ್ದು, ಕೈಗೆ ಗಂಡು ಮಗುವನ್ನು ನೀಡಿದ್ದಾರೆ ಎಂದು ಆರೋಪಿಸಿ ಮುಸ್ತಫಾ ಅವರು ಆಸ್ಪತ್ರೆಯ ವಿರುದ್ದ ಉತ್ತರ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಮುಸ್ತಫಾ ಅವರು ನೀಡಿದ ದೂರಿನ ಆಧಾರದಲ್ಲಿ ಮಗುವಿನ ಡಿಎನ್‌ಎ ಪರೀಕ್ಷೆ ನಡೆಸಲು ನ್ಯಾಯಾಲಯವೂ ಒಪ್ಪಿಗೆ ಸೂಚಿಸಿತ್ತು.

- Advertisement -

Related news

error: Content is protected !!