

ಮಂಗಳೂರು: ಪ್ರತಿಷ್ಠಿತ ಕಾಲೇಜೊಂದರಲ್ಲಿನ ಎಂ.ಬಿ.ಬಿ.ಎಸ್ ವಿದ್ಯಾರ್ಥಿನಿಯ ಫೋಟೋವನ್ನು ಮುಸ್ಲಿಂ ಯುವಕನ ಫೋಟೋದೊಂದಿಗೆ ಎಡಿಟ್ ಮಾಡಿ ಅವರಿಬ್ಬರ ನಡುವೆ ಸಂಬಂಧವಿದೆಯೆಂದು ಆರೋಪಿಸಿ ಸಾಮಾಜಿಕ ಜಾಲತಾಣದಲ್ಲಿ ಫೋಟೋ ವೈರಲ್ ಮಾಡಿದ ಘಟನೆ ಮಂಗಳೂರು ಮಹಿಳಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಮಂಗಳೂರಿನ ವೈದ್ಯಕೀಯ ಕಾಲೇಜೊಂದರಲ್ಲಿ ತೃತೀಯ ವರ್ಷದ ಎಂಬಿಬಿಎಸ್ ವ್ಯಾಸಂಗ ಮಾಡುತ್ತಿದ್ದ ಹಿಂದೂ ವಿದ್ಯಾರ್ಥಿನಿಯ ಫೋಟೊವನ್ನು ಆಕೆಯ ಇನ್ ಸ್ಟಾಗ್ರಾಂ ಪೇಜ್ ನಿಂದ ತೆಗೆದು ಬಳಿಕ ‘ಮುಲ್ಲಾ ರಹಿಮಾನ್ ಜೊತೆಗೆ ಕುಚಿಕು ಇದೆ’ ಎಂದು ಬರೆದು ಮುಸ್ಲಿಂ ಯುವಕನ ಫೋಟೊ ಜೊತೆಗಿಟ್ಟು ಎಡಿಟ್ ಮಾಡಲಾಗಿತ್ತು. ಈ ಫೋಟೊವನ್ನು ಕೆಲವು ಸಾಮಾಜಿಕ ಜಾಲತಾಣದ ಹಲವಾರು ಪೇಜ್ ಗಳಲ್ಲಿ ವೈರಲ್ ಮಾಡಲಾಗಿದೆ. ಈ ಫೋಟೊ ವಿದ್ಯಾರ್ಥಿನಿಗೂ ಲಭಿಸಿತ್ತು.
ಇದೇ ವೇಳೆ, ‘ಮುಸ್ಲಿಂ ಯುವಕನೊಂದಿಗೆ ಹಿಂದೂ ವಿದ್ಯಾರ್ಥಿನಿಯ ಕುಚಿಕು’ ಎಂಬ ವಿಚಾರ ಹಿಂದೂ ಸಂಘಟನೆಗಳ ಕಾರ್ಯಕರ್ತರ ಗಮನಕ್ಕೂ ಬಂದಿದ್ದು, ಇದರ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ವಿಚಾರಣೆ ನಡೆಸಿದಾಗ, ಫೋಟೋಗೂ ಆಕೆಗೂ ಯಾವುದೇ ಸಂಬಂಧವಿಲ್ಲ ಎನ್ನುವುದು ಕುಟುಂಬಸ್ಥರಿಗೂ ಗೊತ್ತಾಗಿದೆ. ಈ ಹಿನ್ನೆಲೆಯಲ್ಲಿ ವಿದ್ಯಾರ್ಥಿನಿ ಕುಟುಂಬಸ್ಥರು ಘಟನೆ ಬಗ್ಗೆ ತನಿಖೆ ನಡೆಸುವಂತೆ ಮಹಿಳಾ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.










