
ಪುತ್ತೂರು: ಜಮೀನು ವಿಚಾರದ ತಕರಾರು ಹಾಗೂ ಪರಸ್ಪರ ಮಾತಿನ ಚಕಮಕಿಯ ಹಿನ್ನೆಲೆಯಲ್ಲಿ ಅಪ್ರಾಪ್ತ ಬಾಲಕನ ಮೇಲೆ ನೆರೆಮನೆಯವರು ಹಲ್ಲೆ ನಡೆಸಿ ಗಾಯಗೊಳಿಸಿರುವ ಆರೋಪ ಕೇಳಿಬಂದಿದೆ. ಈ ಸಂಬಂಧ ಬಾಲಕನ ತಾಯಿ ಆರು ಮಂದಿ ವಿರುದ್ಧ ದೂರು ನೀಡಿದ್ದಾರೆ.


ಕೆಯ್ಯರು ಪಬ್ಲಿಕ್ ಸ್ಕೂಲ್ನಲ್ಲಿ 9ನೇ ತರಗತಿ ಓದುತ್ತಿದ್ದ ಬಾಲಕ ಕಳೆದ ಮೂರು ತಿಂಗಳಿಂದ ಶಾಲೆಗೆ ತೆರಳದೆ ಮನೆಯಲ್ಲೇ ಇದ್ದ ಎನ್ನಲಾಗಿದೆ. ಅ.5ರಂದು ರಾತ್ರಿ 9 ಗಂಟೆ ಸುಮಾರಿಗೆ ತಿಂಗಳಾಡಿಯಿಂದ ಮನೆಗೆ ನಡೆದುಕೊಂಡು ಹೋಗುತ್ತಿದ್ದ ವೇಳೆ ಪರಿಚಯದ ಸುಧಾಕರ, ಪೆರಿಗೇರಿ ಚಂದ್ರ ಹಾಗೂ ಹರೀಶ್ ಎಂಬವರು ರಸ್ತೆ ಬದಿಯಲ್ಲಿ ನಿಂತು ಬಾಲಕನನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಇದಕ್ಕೆ ಪ್ರತಿಯಾಗಿ ಬಾಲಕ ಕೂಡ ಬೈದು ಮನೆಗೆ ತೆರಳಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಬಳಿಕ ರಾತ್ರಿ 10 ಗಂಟೆ ಸುಮಾರಿಗೆ ಸುಧಾಕರ ಅವರ ಸಹೋದರ ಹರೀಶ್, ಪೆರಿಗೇರಿ ಚಂದ್ರ, ವಸಂತಿ, ಮೋಹನ್, ಗೋವಚಂದ್ರ ಟಿ.ಸಿ., ಚಂದ್ರ ಹಾಗೂ ಪ್ರಮೀಳಾ ಸುಮಾ ಸೇರಿದಂತೆ ಕೆಲವರು ಬಾಲಕನ ಮನೆ ಅಂಗಳಕ್ಕೆ ಬಂದು ಗಲಾಟೆ ನಡೆಸಿದ್ದಾರೆ ಎನ್ನಲಾಗಿದೆ.
ಈ ವೇಳೆ ಹೊರಬಂದ ಬಾಲಕನ ತಾಯಿಯೊಂದಿಗೆ ಮಾತಿನ ಚಕಮಕಿ ನಡೆದಿದ್ದು, ಬಾಲಕ ಪ್ರಶ್ನಿಸಿದಾಗ ಗೋವಚಂದ್ರ ಆತನ ತಲೆಯನ್ನು ಹಿಡಿದುಕೊಂಡಿದ್ದಾರೆ. ಇದೇ ಸಂದರ್ಭ ಪೆರಿಗೇರಿ ಚಂದ್ರ ಹಂಚಿನ ತುಂಡಿನಿಂದ ಬಾಲಕನ ತಲೆಯ ಮುಂಭಾಗಕ್ಕೆ ಹಾಗೂ ಸುಧಾಕರ ಜಲ್ಲಿಕಲ್ಲಿನಿಂದ ತಲೆಯ ಹಿಂಭಾಗಕ್ಕೆ ಹೊಡೆದು ಗಾಯಗೊಳಿಸಿದ್ದಾರೆ. ಸುಮಾ ಕೋಲಿನಿಂದ ಬೆನ್ನಿಗೆ ಹೊಡೆದಿದ್ದು, ಇತರರು ಕೈಯಿಂದ ಬೆನ್ನು, ಬಲಗೈ, ಮೈ ಹಾಗೂ ಕಾಲಿಗೆ ಹಲ್ಲೆ ನಡೆಸಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.
ಜಗಳ ಬಿಡಿಸಲು ಬಂದ ಬಾಲಕನ ತಾಯಿ ಹಾಗೂ ತಂಗಿಯನ್ನೂ ಸುಮಾ, ವಸಂತಿ ಮತ್ತು ಪ್ರಮೀಳಾ ದೂಡಿ ಹಾಕಿದ್ದಾರೆ ಎನ್ನಲಾಗಿದೆ. ಗಾಯಗೊಂಡ ಬಾಲಕನನ್ನು ತಾಯಿ ಆಟೋ ರಿಕ್ಷಾದಲ್ಲಿ ಪುತ್ತೂರು ಸರಕಾರಿ ಆಸ್ಪತ್ರೆಗೆ ಕರೆದೊಯ್ದು ಹೊರರೋಗಿಯಾಗಿ ಚಿಕಿತ್ಸೆ ಕೊಡಿಸಿದ್ದಾರೆ.
ಆರಂಭದಲ್ಲಿ ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು ನೀಡಲು ತೆರಳಿದ್ದರೂ, ಬಾಲಕನ ತಂದೆ ದೂರು ಹಿಂಪಡೆದು ಮನೆಗೆ ಕರೆದುಕೊಂಡು ಬಂದಿದ್ದರು ಎಂದು ತಿಳಿದುಬಂದಿದೆ.
ಆದರೆ, ನೆರೆಹೊರೆಯವರಿಂದ ಬಾಲಕನಿಗೆ ಸಮಸ್ಯೆ ಮುಂದುವರಿದ ಹಿನ್ನೆಲೆಯಲ್ಲಿ ಸುಮಾರು 20 ದಿನಗಳ ಬಳಿಕ ತಾಯಿ ವನಿತಾ ಅವರು ವಕೀಲ ಚೇತನ್ ಅವರ ಮೂಲಕ ಮಕ್ಕಳ ಸಹಾಯವಾಣಿ 1098ಕ್ಕೆ ಕರೆ ಮಾಡಿ ದೂರು ನೀಡಿದ್ದಾರೆ.
ಅದರಂತೆ ಅ.30ರಂದು ಮಕ್ಕಳ ಸಹಾಯವಾಣಿ ಹಾಗೂ ಮಹಿಳಾ ಪೊಲೀಸ್ ಸಿಬ್ಬಂದಿ ಬಾಲಕನನ್ನು ಮಂಗಳೂರಿನ ಬೋಂದೇಲ್ನಲ್ಲಿರುವ ಮಕ್ಕಳ ಕಲ್ಯಾಣ ಸಮಿತಿಯ ಮುಂದೆ ಹಾಜರುಪಡಿಸಿದ್ದು, ಬಳಿಕ ಸರಕಾರಿ ಬಾಲಕರ ಬಾಲಮಂದಿರದಲ್ಲಿ ವಾಸ್ತವ್ಯ ಕಲ್ಪಿಸಲಾಗಿದೆ.








